ADVERTISEMENT

ಶಾಪಿಂಗ್‌ಗೆ ಕರೆದೊಯ್ಯದಿದ್ದಕ್ಕೆ ಮುನಿಸು: ಬಾಲಕಿ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2022, 19:42 IST
Last Updated 21 ಆಗಸ್ಟ್ 2022, 19:42 IST
   

ಬೆಂಗಳೂರು: ಪೋಷಕರ ಜೊತೆ ಮುನಿಸಿಕೊಂಡು 5ನೇ ತರಗತಿ ವಿದ್ಯಾರ್ಥಿನಿಯೊಬ್ಬರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಸಂಬಂಧ ಚಾಮರಾಜಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಬಾಲಕಿಯ ತಂದೆ, ಪೇಂಟಿಂಗ್ ಕೆಲಸ ಮಾಡುತ್ತಿದ್ದಾರೆ. ತಾಯಿ, ಗೃಹಿಣಿ. ದಂಪತಿಗೆ ಮೂವರು ಮಕ್ಕಳಿದ್ದು, ಮೃತ ವಿದ್ಯಾರ್ಥಿನಿಯೇ ಹಿರಿಯವಳು’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಆಂಗ್ಲ ಮಾಧ್ಯಮ ಶಾಲೆಯಲ್ಲಿ ಓದುತ್ತಿದ್ದ ಬಾಲಕಿ, ವಿದ್ಯಾಭ್ಯಾಸದಲ್ಲಿ ಚುರುಕಿದ್ದಳು. ಶಾಲೆಯಲ್ಲಿ ಶನಿವಾರ ಪೋಷಕರ ಸಭೆ ಇತ್ತು. ಮಗಳ ಜೊತೆ ತಂದೆ ಸಭೆಗೆ ಹೋಗಿ ವಾಪಸು ಮನೆಗೆ ಬಂದಿದ್ದರು. ಊರ ಹಬ್ಬದ ನಿಮಿತ್ತವಾಗಿ ಮಗಳಿಗೆ ಇತ್ತೀಚೆಗಷ್ಟೇ ಹೊಸ ಬಟ್ಟೆ ಕೊಡಿಸಿದ್ದರು. ಆಕೆಯನ್ನು ಮನೆಯಲ್ಲೇ ಬಿಟ್ಟು ಉಳಿದ ಇಬ್ಬರು ಮಕ್ಕಳಿಗೆ ಹೊಸ ಬಟ್ಟೆ ಕೊಡಿಸಲೆಂದು ತಂದೆ ಮಾರುಕಟ್ಟೆಗೆ ಹೊರಡಲು ಸಜ್ಜಾಗಿದ್ದರು’ ಎನ್ನಲಾಗಿದೆ.

ADVERTISEMENT

‘ತಾನೂ ಶಾಪಿಂಗ್‌ಗೆ ಬರುವುದಾಗಿ ಮಗಳು ಪಟ್ಟು ಹಿಡಿದಿದ್ದಳು. ಆಕೆಯನ್ನು ಮನೆಯಲ್ಲೇ ಇರುವಂತೆ ಹೇಳಿ ‍ಪತ್ನಿ ಹಾಗೂ ಇನ್ನಿಬ್ಬರು ಮಕ್ಕಳ ಜೊತೆ ತಂದೆ ಮಾರುಕಟ್ಟೆಗೆ ಹೋಗಿದ್ದರು. ಶಾಪಿಂಗ್‌ಗೆ ಕರೆದುಕೊಂಡು ಹೋಗಲಿಲ್ಲವೆಂದು ನೊಂದ ಬಾಲಕಿ, ಮನೆ ಕೊಠಡಿಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಶಾಪಿಂಗ್‌ ಮುಗಿಸಿಕೊಂಡು ತಾಯಿ ಮನೆಗೆ ವಾಪಸು ಬಂದಾಗಲೇ ವಿಷಯ ಗೊತ್ತಾಗಿದೆ’ ಎಂದೂ ಪೊಲೀಸ್ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.