ADVERTISEMENT

ಲೋಕಾಯುಕ್ತ ಹಲ್ಲು ಕಿತ್ತ ಹಾವು: ಬಲ ತುಂಬಲು ಶಾಸಕರ ಒತ್ತಾಯ

ಸಂಸ್ಥೆಗೆ ಬಲ ತುಂಬಲು ಪ್ರತ್ಯೇಕ ಮಸೂದೆ ತರಬೇಕು: ಶಾಸಕರಿಂದ ಒತ್ತಾಯ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2020, 21:03 IST
Last Updated 17 ಮಾರ್ಚ್ 2020, 21:03 IST
   

ಬೆಂಗಳೂರು: ಲೋಕಾಯುಕ್ತ ಸಂಸ್ಥೆ ಹಲ್ಲು ಕಿತ್ತ ಹಾವಿನಂತಾಗಿದೆ. ಸಂಸ್ಥೆಗೆ ಬಲ ತುಂಬಲು ಪ್ರತ್ಯೇಕ ಮಸೂದೆಯೊಂದನ್ನು ತರಬೇಕು ಎಂದು ವಿಧಾನಸಭೆಯಲ್ಲಿ ಹಲವು ಸದಸ್ಯರು ಪ್ರತಿಪಾದಿಸಿದರು.

‘ಕರ್ನಾಟಕ ಲೋಕಾಯುಕ್ತ (ತಿದ್ದುಪಡಿ) ಮಸೂದೆ– 2020’ ಕುರಿತು ವಿಧಾನಸಭೆಯಲ್ಲಿ ಮಂಗಳವಾರ ನಡೆದ ಚರ್ಚೆಯ ವೇಳೆ ಈ ವಿಷಯ ಪ್ರಸ್ತಾಪಿಸಿದರು.

ಕಾಂಗ್ರೆಸ್‌ನ ಕೆ.ಆರ್‌.ರಮೇಶ್‌ ಕುಮಾರ್‌, ‘ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ರಾಮಕೃಷ್ಣ ಹೆಗಡೆ ಅವರು ಲೋಕಾಯುಕ್ತ ಆರಂಭಿಸಿದರು. ಆದರೆ, ಆ ಉದ್ದೇಶ ಈಡೇರಿಲ್ಲ. ಅಲಂಕಾರಕ್ಕೆ ಸಂಸ್ಥೆಯನ್ನು ಇಟ್ಟುಕೊಳ್ಳುವುದು ಏಕೆ. ದಾಳಿಗೆ ಒಳಗಾದವರು ರಾಜಾರೋಷವಾಗಿ ಸುತ್ತಾಡುತ್ತಿದ್ದಾರೆ. ಲೋಕಾಯುಕ್ತ ಸಂಸ್ಥೆಯನ್ನು ದುರ್ಬಲಗೊಳಿಸಲು ಎಸಿಬಿಯನ್ನು ತಂದೆವು. ಅದರಿಂದ ಆದ ಪ್ರಯೋಜನವೇನು‘ ಎಂದು ಖಾರವಾಗಿ ಪ್ರಶ್ನಿಸಿದರು.

ADVERTISEMENT

‘ಜನಪ್ರತಿನಿಧಿಗಳೆಲ್ಲ ಜೂನ್‌ ಒಳಗೆ ಲೋಕಾಯುಕ್ತಕ್ಕೆ ಆಸ್ತಿ ವಿವರ ಸಲ್ಲಿಸಬೇಕು ಎಂಬ ನಿಯಮ ಇದೆ. ಎಷ್ಟು ಮಂದಿ ಆಸ್ತಿ ವಿವರ ಸಲ್ಲಿಸುತ್ತಿದ್ದಾರೆ. ಸಲ್ಲಿಸದವರ ವಿರುದ್ಧ ಕ್ರಮ ಏಕಿಲ್ಲ’ ಎಂದು ಪ್ರಶ್ನಿಸಿದರು.

ಜೆಡಿಎಸ್‌ನ ಎಚ್‌.ಡಿ.ರೇವಣ್ಣ, ‘ಲೋಕಾಯುಕ್ತರು ಅನೇಕ ಅಧಿಕಾರಿಗಳ ನಿವಾಸದ ಮೇಲೆ ದಾಳಿ ನಡೆಸಿದ್ದರು. ಅವರಲ್ಲಿ ಎಷ್ಟು ಮಂದಿಯ ಮೇಲೆ ಕ್ರಮ ಆಗಿದೆ ಎಂಬುದನ್ನು ಬಹಿರಂಗಪಡಿಸಬೇಕು. ಅಧಿಕಾರಿಯೊಬ್ಬರು 17 ವರ್ಷಗಳಿಂದ ವೇತನವನ್ನೇ ಪಡೆದಿಲ್ಲ. ಸರ್ಕಾರದ ಅನುಮತಿ ಇಲ್ಲದೆ ಅನೇಕ ಬಾರಿ ವಿದೇಶ ಪ್ರವಾಸ ಮಾಡಿದ್ದರು. ಅವರ ಮನೆ ಮೇಲೆ ದಾಳಿ ವೇಳೆ ಆದಾಯಕ್ಕಿಂತ ಶೇ 200 ಆಸ್ತಿ ಪತ್ತೆ ಆಗಿದೆ. ಅಂತಹ ಅಧಿಕಾರಿಗೆ ಈಗಿನ ಸರ್ಕಾರ ಎರಡು ಪ್ರಮುಖ ಹುದ್ದೆಗಳನ್ನು ನೀಡಿದೆ’ ಎಂದು ಟೀಕಿಸಿದರು.

ಕಾಂಗ್ರೆಸ್‌ನ ಈಶ್ವರ ಖಂಡ್ರೆ, ‘ಲೋಕಾಯುಕ್ತಕ್ಕೆ ಬಲ ತುಂಬುವುದಾಗಿ ಬಿಜೆಪಿ ಪ್ರಣಾಳಿಕೆಯಲ್ಲಿ ಪ್ರಕಟಿಸಿತ್ತು. ಆ ಕೆಲಸವನ್ನು ಪಕ್ಷ ಮಾಡಿಲ್ಲ. ಸಾವಿರಾರು ಪ್ರಕರಣಗಳು ವಿಚಾರಣೆಗೆ ಬಾಕಿ ಇವೆ. ಅನೇಕ ಪ್ರಕರಣಗಳ ವಿಚಾರಣೆಗೆ ಅನುಮತಿಯನ್ನೇ ನೀಡಿಲ್ಲ’ ಎಂದು ಗಮನ ಸೆಳೆದರು.

ಜೆಡಿಎಸ್‌ನ ಕೆ.ಎಂ. ಶಿವಲಿಂಗೇಗೌಡ, ‘ನಮ್ಮ ಸುತ್ತಮುತ್ತ ಇರುವ ಅಧಿಕಾರಿಗಳನ್ನೇ ಲೋಕಾಯುಕ್ತಕ್ಕೆ ನೇಮಿಸಲಾಗುತ್ತಿದೆ. ದ್ವೇಷದಿಂದ ಅವರು ನಮ್ಮ ವಿರುದ್ಧ ಪ್ರಕರಣ ದಾಖಲಿಸುತ್ತಾರೆ. ಇದನ್ನು ತಡೆಯಲು ಲೋಕಾಯುಕ್ತಕ್ಕೆ ಪ್ರತ್ಯೇಕ ಸಿಬ್ಬಂದಿ ನೇಮಕ ಮಾಡಬೇಕು’ ಎಂದು ಆಗ್ರಹಿಸಿದರು.

ಕೆ.ಆರ್‌.ರಮೇಶ್‌ ಕುಮಾರ್‌, ‘ಅರಣ್ಯ ಇಲಾಖೆಯ ಅಧಿಕಾರಿಗಳು (ಐಎಫ್‌ಎಸ್‌) ಯಾರ ಭೀತಿಯೂ ಇಲ್ಲದೇ ರಾಜಾರೋಷವಾಗಿ ತಿರುಗಾಡುತ್ತಿದ್ದಾರೆ. ಅಂತಹ ಅಧಿಕಾರಿಗಳು ಎದುರು ಬಂದರೆ ನಮ್ಮಂತವರು ತಲೆ ತಗ್ಗಿಸಿಕೊಂಡು ಹೋಗಬೇಕಿದೆ. ಇದನ್ನೆಲ್ಲ ತಡೆಯಲು ಸಮಗ್ರ ಕಾಯ್ದೆ ತನ್ನಿ’ ಎಂದು ಸಲಹೆ ನೀಡಿದರು.

ಜೆಡಿಎಸ್‌ನ ಎ.ಟಿ.ರಾಮಸ್ವಾಮಿ, ‘ಜನಪ್ರತಿನಿಧಿಗಳು ಕಡ್ಡಾಯವಾಗಿ ಆಸ್ತಿ ವಿವರ ಸಲ್ಲಿಸಬೇಕಿದೆ. ಆದರೆ, ಈ ನಿಯಮ ಲೋಕಾಯುಕ್ತದ ಸಿಬ್ಬಂದಿಗೆ ಅನ್ವಯವಾಗುವುದಿಲ್ಲವೇ’ ಎಂದು ಪ್ರಶ್ನಿಸಿದರು.

ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ, ‘ಲೋಕಾಯುಕ್ತ ಸಂಸ್ಥೆಯ ಸಿಬ್ಬಂದಿ ಆಸ್ತಿ ವಿವರ ಸಲ್ಲಿಸುತ್ತಿದ್ದಾರಲ್ಲ’ ಎಂದರು. ಅವರ ಆಸ್ತಿ ವಿವರದ ಮಾಹಿತಿ ಬಹಿರಂಗವಾಗುತ್ತಿಲ್ಲವಲ್ಲ ಎಂದು ರಾಮಸ್ವಾಮಿ ಪ್ರಶ್ನಿಸಿದರು. ಮಾಧುಸ್ವಾಮಿ ನಗುತ್ತಾ ಆಕಾಶದತ್ತ ಕೈ ತೋರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.