ADVERTISEMENT

ಶೆಟರ್‌ ಕತ್ತರಿಸಿ ಚಿನ್ನಾಭರಣ ಹೊತ್ತೊಯ್ದರು

* ಶಿವಾನಂದ ವೃತ್ತದ ಆಭರಣ ಮಳಿಗೆಯಲ್ಲಿ ಘಟನೆ * ಗ್ಯಾಸ್‌ ಕಟರ್‌ ಬಳಸಿ ಕೃತ್ಯ

​ಪ್ರಜಾವಾಣಿ ವಾರ್ತೆ
Published 9 ಜೂನ್ 2020, 5:58 IST
Last Updated 9 ಜೂನ್ 2020, 5:58 IST
ಶಿವಾನಂದ ವೃತ್ತದ ಚಿರಾಗ್ ಆಭರಣ ಮಳಿಗೆಯ ಶೆಟರ್‌ ಕತ್ತರಿಸಿರುವುದು
ಶಿವಾನಂದ ವೃತ್ತದ ಚಿರಾಗ್ ಆಭರಣ ಮಳಿಗೆಯ ಶೆಟರ್‌ ಕತ್ತರಿಸಿರುವುದು   

ಬೆಂಗಳೂರು: ಶಿವಾನಂದ ವೃತ್ತದಲ್ಲಿರುವ ಆಭರಣ ಮಳಿಗೆಯೊಂದರಲ್ಲಿ ಕಳ್ಳತನ ನಡೆದಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ವಜ್ರಾಭರಣಗಳನ್ನು ಕಳ್ಳರು ಹೊತ್ತೊಯ್ದಿದ್ದಾರೆ.

‘ಗಜೇಂದ್ರ ಎಂಬುವರು 15 ವರ್ಷಗಳಿಂದ ‘ಚಿರಾಗ್ ಜ್ಯುವೆಲರ್ಸ್’ ಮಳಿಗೆ ನಡೆಸುತ್ತಿದ್ದರು. ಭಾನುವಾರ ತಡರಾತ್ರಿ ಮಳಿಗೆಗೆ ನುಗ್ಗಿದ್ದ ಕಳ್ಳರು ಕೃತ್ಯ ಎಸಗಿ ಪರಾರಿಯಾಗಿದ್ದಾರೆ’ ಎಂದು ಹೈಗ್ರೌಂಡ್ಸ್ ಪೊಲೀಸರು ಹೇಳಿದರು.

‘ಮಳಿಗೆಗೆ ಶೆಟರ್‌ ಇದ್ದು, ಅದಕ್ಕೆ ತಾಗಿಕೊಂಡು ಕಬ್ಬಿಣ ಗ್ರೀಲ್‌ನ ಬಾಗಿಲು ಇದೆ. ಆ ಬಾಗಿಲು ಮುರಿದಿರುವ ಕಳ್ಳರು, ಗ್ಯಾಸ್‌ ಕಟರ್‌ನಿಂದ ಶೆಟರ್‌ನ್ನು ಚೌಕಾಕಾರವಾಗಿ ಕತ್ತರಿಸಿದ್ದಾರೆ. ನಂತರ, ಅದೇ ಕಿಂಡಿ ಮೂಲಕವೇ ಮಳಿಗೆಯೊಳಗೆ ನುಗ್ಗಿ ಚಿನ್ನಾಭರಣ ಹಾಗೂ ವಜ್ರಾಭರಣವನ್ನು ಕದ್ದಿದ್ದಾರೆ’ ಎಂದರು.

ADVERTISEMENT

‘ಸೋಮವಾರ ಬೆಳಿಗ್ಗೆ ಎಂದಿನಂತೆ ಮಳಿಗೆ ಬಾಗಿಲು ತೆರೆಯಲು ಗಜೇಂದ್ರ ಅವರು ಬಂದಿದ್ದಾಗಲೇ ವಿಷಯ ಗೊತ್ತಾಗಿದೆ. ನಂತರ, ಠಾಣೆಗೆ ಮಾಹಿತಿ ನೀಡಿದ್ದರು. ಸ್ಥಳದಲ್ಲಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಕಳುವಾದ ಆರಭಣದ ಮೌಲ್ಯ ನಿಖರವಾಗಿ ಗೊತ್ತಾಗಿಲ್ಲ. ಲೆಕ್ಕ ಮಾಡಿ ತಿಳಿಸುವುದಾಗಿ ಮಾಲೀಕರು ಹೇಳಿತ್ತಾರೆ’ ಎಂದೂ ತಿಳಿಸಿದರು.

ಕ್ಯಾಮೆರಾ ತಂತಿಯನ್ನೂ ಕತ್ತರಿಸಿದರು; ‘ಮಳಿಗೆ ಎದುರೇ‌ ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಸಲಾಗಿದೆ. ಮಳಿಗೆ ಬಳಿ ಬಂದಿದ್ದ ಕಳ್ಳರು, ಕ್ಯಾಮೆರಾ ತಂತಿಯನ್ನು ಕತ್ತರಿಸಿದ್ದರು. ನಂತರವೇ ಶೆಟರ್‌ ಕತ್ತರಿಸಿ ಒಳನುಗ್ಗಿದ್ದರು ಎಂಬುದು ಸದ್ಯದ ತನಿಖೆಯಿಂದ ಗೊತ್ತಾಗಿದೆ’ ಎಂದು ಪೊಲೀಸರು ತಿಳಿಸಿದರು.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.