ADVERTISEMENT

ಮಂಗಳೂರು ಗಲಭೆ ಪ್ರಕರಣ: ಪರಿಹಾರದಲ್ಲೂ ರಾಜಕೀಯ

ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಬಾಹ್ಯ ಒತ್ತಡಕ್ಕೆ ಮಣಿದ ಆರೋಪ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2019, 21:24 IST
Last Updated 25 ಡಿಸೆಂಬರ್ 2019, 21:24 IST
ಮುಖ್ಯಮಂತ್ರಿ ಯಡಿಯೂರಪ್ಪ
ಮುಖ್ಯಮಂತ್ರಿ ಯಡಿಯೂರಪ್ಪ   

ಮಂಗಳೂರು: ನಗರದಲ್ಲಿ ಇದೇ 19ರಂದು ನಡೆದ ಗೋಲಿಬಾರ್‌ನಲ್ಲಿ ಮೃತರಾದ ಇಬ್ಬರ ಕುಟುಂಬಗಳಿಗೆ ಪರಿಹಾರ ನೀಡುವ ವಿಚಾರ ರಾಜಕೀಯ ವಿವಾದದ ಸ್ವರೂಪ ಪಡೆದುಕೊಂಡಿದೆ.

ರಾಜ್ಯ ಸರ್ಕಾರ ದಿಂದ ತಲಾ₹ 10 ಲಕ್ಷ ಪರಿಹಾರ ನೀಡುವುದಾಗಿ ಘೋಷಿಸಿದ್ದ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಈಗ ಅದಕ್ಕೆ ತಡೆ ನೀಡಿದ್ದಾರೆ. ‘ಮುಖ್ಯಮಂತ್ರಿ ಅವರು ಬಾಹ್ಯ ಒತ್ತಡಕ್ಕೆ ಮಣಿದು ತಮ್ಮ ನಿರ್ಧಾರವನ್ನು ಹಿಂದಕ್ಕೆ ಪಡೆದುಕೊಂಡಿದ್ದಾರೆ’ ಎಂದು ಕಾಂಗ್ರೆಸ್ ಆಪಾದಿಸಿದೆ.

‘ಮೃತರು ಗಲಭೆಯಲ್ಲಿ ಭಾಗಿಯಾಗಿರುವ ಆರೋಪವಿದೆ. ಅಪರಾಧಿಗಳಿಗೆ ಪರಿಹಾರ ವಿತರಿಸುವುದು ಅಕ್ಷಮ್ಯ ಅಪರಾಧವಾಗುತ್ತದೆ. ತನಿಖೆ ಮುಗಿಯುವವರೆಗೂ ಪರಿಹಾರ ವಿತರಿಸುವುದಿಲ್ಲ. ಅವರು ನಿರಪರಾಧಿಗಳೆಂದು ಸಾಬೀತಾದರೆ ಮಾತ್ರವೇ ಪರಿಹಾರ
ನೀಡಲಾಗುವುದು’ ಎಂದು ಮುಖ್ಯಮಂತ್ರಿ ಬುಧವಾರ ಪ್ರಕಟಿಸಿದ್ದಾರೆ.

ADVERTISEMENT

ಇದೇ 21ರಂದು ನಗರಕ್ಕೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದ್ದ ಮುಖ್ಯಮಂತ್ರಿ, ಮೃತರ ಕುಟುಂಬಗಳ ಸದಸ್ಯರನ್ನು ಭೇಟಿ ಮಾಡಿದ್ದರು. ಸೂಕ್ತ ಪರಿಹಾರ ವಿತರಿಸುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದ್ದರು. ಆದರೆ, ಜೆಡಿಎಸ್‌ ನಾಯಕ ಎಚ್‌.ಡಿ. ಕುಮಾರಸ್ವಾಮಿ ಅವರು ಮೃತರ ಕುಟುಂಬಗಳನ್ನು 22ರಂದು ಭೇಟಿ ಮಾಡಿ ತಲಾ₹ 5 ಲಕ್ಷ ಮೊತ್ತದ ನೆರವಿನ ಚೆಕ್‌ ಹಸ್ತಾಂತರಿಸಿದ್ದರು. ತಕ್ಷಣವೇ, ಯಡಿಯೂರಪ್ಪ ಅವರು ರಾಜ್ಯ ಸರ್ಕಾರದಿಂದ ತಲಾ ₹ 10 ಲಕ್ಷ ಪರಿಹಾರ ನೀಡುವುದಾಗಿ ಘೋಷಿಸಿದ್ದರು. ನಂತರ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸೇರಿದಂತೆ ಕೆಲವು ಕಾಂಗ್ರೆಸ್‌ ನಾಯಕರು ಸಂತ್ರಸ್ತರನ್ನು ಭೇಟಿಯಾಗಿ ನೆರವಿನ ಚೆಕ್‌ ನೀಡಿದ್ದರು.

ಕೇರಳ ಪ್ರವಾಸದಲ್ಲಿದ್ದ ಮುಖ್ಯಮಂತ್ರಿ ಮಂಗಳವಾರ ರಾತ್ರಿ ನಗರಕ್ಕೆಬಂದಿದ್ದರು. ರಾತ್ರಿಯೇ ಅವರನ್ನು ಭೇಟಿಯಾಗಿದ್ದ ಪೊಲೀಸ್‌ ಅಧಿಕಾರಿಗಳು ಗಲಭೆಗೆ ಸಂಬಂಧಿಸಿದ ವಿಡಿಯೊ ತುಣುಕುಗಳನ್ನು ತೋರಿಸಿದ್ದರು. ಬಿಜೆಪಿರಾಜ್ಯ ಘಟಕದ ಅಧ್ಯಕ್ಷರೂ ಆಗಿರುವ
ಸಂಸದ ನಳಿನ್‌ಕುಮಾರ್‌ ಕಟೀಲ್‌ ಸೇರಿದಂತೆ ಬಿಜೆಪಿಯ ಕೆಲವು ನಾಯಕರೊಂದಿಗೂ ಈ ಬಗ್ಗೆ ಚರ್ಚಿಸಿದ್ದರು. ಗೃಹ ಸಚಿವ ಬಸವರಾಜ ಬೊಮ್ಮಾಯಿ ಉಪಸ್ಥಿತಿಯಲ್ಲಿ ಬುಧವಾರ ಬೆಳಿಗ್ಗೆ ಮತ್ತೊಂದು ಸುತ್ತಿನ ಸಭೆ ನಡೆಸಿದ ಬಳಿಕ ಪರಿಹಾರ ವಿತರಣೆಗೆ ತಡೆ ನೀಡುವ ನಿರ್ಧಾರ ಪ್ರಕಟಿಸಿದ್ದಾರೆ.

ಮೃತರ ಕುಟುಂಬಗಳಿಗೆ ಘೋಷಿಸಿರುವ ಪರಿಹಾರದ ಮೊತ್ತವನ್ನು ಏರಿಕೆ ಮಾಡುವಂತೆ ಹಾಗೂ ಗಾಯಾಳುಗಳಿಗೂ ಪರಿಹಾರ ಘೋಷಿಸುವಂತೆ ಒತ್ತಡ ಹೆಚ್ಚುತ್ತಿರುವುದರ ನಡುವೆಯೇ ಸರ್ಕಾರ ಈ ನಿರ್ಧಾರ ಪ್ರಕಟಿಸಿದೆ.

ಘೋರ ಅನ್ಯಾಯ: ‘ಯಡಿಯೂರಪ್ಪ ಅವರು ರಾಜ್ಯದ ಎಲ್ಲ ಜನರ ಮುಖ್ಯಮಂತ್ರಿ. ಅವರು ಬಿಜೆಪಿ ಮತ್ತು ಆರ್‌ಎಸ್‌ಎಸ್‌ನವರಿಗೆ ಮಾತ್ರ ಮುಖ್ಯಮಂತ್ರಿಯಲ್ಲ. ವಿತರಣೆಗೆ ತಡೆ ನೀಡುವ ಮೂಲಕ ಸಂತ್ರಸ್ತ ಕುಟುಂಬಗಳಿಗೆ ಘೋರ ಅನ್ಯಾಯ ಮಾಡಿದ್ದಾರೆ’ ಎಂದು ಕಾಂಗ್ರೆಸ್‌ ಮುಖಂಡ ಎಂ. ವೀರಪ್ಪ ಮೊಯಿಲಿ ಮತ್ತು ಶಾಸಕ ಯು.ಟಿ. ಖಾದರ್‌ ವಾಗ್ದಾಳಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.