ADVERTISEMENT

ರಾಜೀನಾಮೆ ನೀಡಿದವರು ಯು ಟರ್ನ್? : ‘ಮೈತ್ರಿ’ಯಿಂದ ರಹಸ್ಯ ಕಾರ್ಯತಂತ್ರ

ವಿಶ್ವಾಸಮತಕ್ಕೆ ಸೋಲಾಗದಂತೆ ಸರ್ಕಾರ ಉಳಿಸಲು ‘ಮೈತ್ರಿ’ಯಿಂದ ರಹಸ್ಯ ಕಾರ್ಯತಂತ್ರ

​ಪ್ರಜಾವಾಣಿ ವಾರ್ತೆ
Published 12 ಜುಲೈ 2019, 19:22 IST
Last Updated 12 ಜುಲೈ 2019, 19:22 IST
   

ಬೆಂಗಳೂರು: ವಿಧಾನಸಭೆಯಲ್ಲಿವಿಶ್ವಾಸಮತಕ್ಕೆ ಸೋಲಾಗದಂತೆ ನೋಡಿಕೊಂಡು, ಅಧಿಕಾರ ಉಳಿಸಿಕೊಳ್ಳಲು ಮೈತ್ರಿ ಪಕ್ಷಗಳ ಮುಖಂಡರು ರಹಸ್ಯ ಕಾರ್ಯತಂತ್ರ ಹೆಣೆದಿದ್ದಾರೆ ಎಂದು ಹೇಳಲಾಗುತ್ತಿದೆ.

ಆರಂಭಿಕವಾಗಿ ರಾಜೀನಾಮೆ ನೀಡಿರುವ ಬೆಂಗಳೂರು ನಗರದ ಶಾಸಕರ ಮನವೊಲಿಕೆ ತಂತ್ರ. ರಾಜ್ಯಕ್ಕೆ ಬಂದಿದ್ದ ಗುಲಾಂನಬಿ ಆಜಾದ್ ಒಂದು ಸುತ್ತಿನ ಮಾತುಕತೆ ನಡೆಸಿದ್ದು, ಸ್ವಲ್ಪ ಮಟ್ಟಿಗೆ ಫಲ‍ಪ್ರದವಾಗಿದೆ. ವಾಪಸ್ ಬರುವ ಶಾಸಕರ ಬೇಡಿಕೆ ಈಡೇರಿಸಲು ಕಾಂಗ್ರೆಸ್ ಹೈಕಮಾಂಡ್ ಒಪ್ಪಿಗೆ ಸೂಚಿಸಿದೆ ಎನ್ನಲಾಗಿದೆ.

ಎಸ್.ಟಿ.ಸೋಮಶೇಖರ್, ಬೈರತಿ ಬಸವರಾಜ್, ಮುನಿರತ್ನ ಅವರಿಗೆ ಅಡ್ಡಿಯಾಗಿದ್ದಾರೆ ಎನ್ನಲಾದ ಉಪಮುಖ್ಯಮಂತ್ರಿ ಜಿ.ಪರಮೇಶ್ವರ್, ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಅವರನ್ನು ನಿಯಂತ್ರಿಸುವುದು. ಅವರ ಕೆಲಸಗಳಿಗೆ ಸರ್ಕಾರದ ಕಡೆಯಿಂದ ಅಡ್ಡಿಯಾಗದಂತೆ ನೋಡಿಕೊಳ್ಳುವ ಭರವಸೆ ನೀಡಲಾಗಿದೆ. ರಾಮಲಿಂಗಾರೆಡ್ಡಿ ಅವರ ಮನವೊಲಿಕೆಯೂ ಮುಂದುವರಿದಿದ್ದು, ಅವರ ಬೇಡಿಕೆಗಳಿಗೂ ಸ್ಪಂದಿಸಲಾಗಿದೆ.

ADVERTISEMENT

ಪಕ್ಷದ ಹಿರಿಯ ನಾಯಕರ ವಿರುದ್ಧ ಸಿಡಿದೆದ್ದು, ಕಾಂಗ್ರೆಸ್‌ನಿಂದ ಅಮಾನತುಗೊಂಡ ನಂತರ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಆರ್.ರೋಷನ್ ಬೇಗ್ ಅವರ ಮನವೊಲಿಸುವ ಪ್ರಯತ್ನವೂ ಸಾಗಿದೆ. ಅಮಾನತು ವಾಪಸ್ ಪಡೆದು, ಪಕ್ಷದಲ್ಲಿ ಗೌರವಯುತವಾಗಿ ನಡೆಸಿಕೊಳ್ಳುವುದು. ಐಎಂಎ ಪ್ರಕರಣದಲ್ಲಿ ಸಿಲುಕದಂತೆ ಕಾಪಾಡುವ ಆಶ್ವಾಸನೆ ನೀಡಲಾಗಿದ್ದು, ಸದನದಲ್ಲಿ ಸರ್ಕಾರ ಬೆಂಬಲಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮನವೊಲಿಕೆಗೆ ಜಗ್ಗದಿದ್ದರೆ ಪಕ್ಷಾಂತರ ನಿಷೇಧ ಕಾಯಿದೆಯ ‘ದಂಡ’ ಬಳಸುವುದು. ರಾಜೀನಾಮೆ ನೀಡಿದ ಎಲ್ಲ ಶಾಸಕರಿಗೆ ಈಗಾಗಲೇ ಪಕ್ಷ ವಿಪ್ ಜಾರಿಮಾಡಿದ್ದು, ಇದರ ಆಧಾರದ ಮೇಲೆ ಸದಸ್ಯತ್ವ ರದ್ದುಪಡಿಸುವಂತೆ ವಿಧಾನ ಸಭಾಧ್ಯಕ್ಷರನ್ನು ಕೋರುವುದು. ಈ ಕಾಯಿದೆ ಬಳಕೆಯಾದರೆ ಮುಂದಿನ ರಾಜಕೀಯ ಭವಿಷ್ಯದ ಮೇಲೆ ಪರಿಣಾಮ ಬೀರಲಿದೆ ಎಂದು ಕೈ ನಾಯಕರು ಎಚ್ಚರಿಕೆ ನೀಡುತ್ತಿದ್ದಾರೆ.

ಒಳ್ಳೆಯ ಮಾತಿಗೆ ಮಣಿಯದಿದ್ದರೆ ‘ದಂಡ’ದ ಅಸ್ತ್ರ ಪ್ರಯೋಗಿಸುವುದು ಅನಿವಾರ್ಯವಾಗಲಿದೆ. ಯಾವುದಕ್ಕೆ ಬಗ್ಗದಿದ್ದರೂ ಕಾನೂನಿನ ಅಸ್ತ್ರಕ್ಕೆ ಮಣಿಯಲೇಬೇಕು. ಯಾವುದಾದರೂ ‘ಅಸ್ತ್ರ’ ಬಳಸಿ ಮೈತ್ರಿ ಬಲ ಹೆಚ್ಚಿಸಿಕೊಂಡು ಸರ್ಕಾರ ಉಳಿಸಿಕೊಳ್ಳಲಾಗುತ್ತದೆ ಎಂದು ಕಾಂಗ್ರೆಸ್ ಮುಖಂಡರೊಬ್ಬರು ತಿಳಿಸಿದರು.

‘ಆಪರೇಷನ್ ಕಮಲ’ಕ್ಕೆ ಪ್ರತಿಯಾಗಿ ಅದೇ ಮಾದರಿಯ ಪ್ರಯೋಗವನ್ನು ಬಿಜೆಪಿ ಮೇಲೆ ಮಾಡುವ ಚರ್ಚೆಗಳು ಮೈತ್ರಿ ನಾಯಕರ ನಡುವೆ ನಡೆದಿವೆ. ಮೈತ್ರಿ ನಾಯಕರ ಸಂಪರ್ಕದಲ್ಲಿ ಇರುವ ಬಿಜೆಪಿ ಶಾಸಕರಿಗೂ ಬಲೆ ಬೀಸಲಾಗಿದೆ ಎಂದು ಹೇಳಲಾಗುತ್ತಿದೆ. ಈ ವಿಚಾರ ಬಿಜೆ‍ಪಿ ಮುಖಂಡರ ನಡುವೆಯೂ ಸುಳಿದಾಡಿದ್ದು, ನಾವೂ ಸಾಕಷ್ಟು ಎಚ್ಚರಿಕೆ ವಹಿಸಿದ್ದೇವೆ ಎನ್ನುತ್ತಾರೆ ಬಿಜೆಪಿ ಮುಖಂಡರು.

ಅನೌಪಚಾರಿಕವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ‘ಯಾವುದೇ ಕಾರಣಕ್ಕೂ ಸರ್ಕಾರ ಉರುಳುವುದಿಲ್ಲ. ವಿಶ್ವಾಸಮತ ಸಾಬೀತುಪಡಿಸುತ್ತೇವೆ. ಇಂಥ ಪರಿಸ್ಥಿತಿಯಲ್ಲಿ ನಾನು ಮುಖ್ಯಮಂತ್ರಿಯಾಗುವುದಿಲ್ಲ ಎಂದರು. ಎಚ್.ಡಿ.ಕುಮಾರಸ್ವಾಮಿ ಮುಖದಲ್ಲೂ ಉತ್ಸಾಹ ತುಂಬಿಕೊಂಡಿದ್ದು ಕಂಡುಬಂತು. ಈಗಾಗಲೇ ಜೆಡಿಎಸ್ ಶಾಸಕರು ರೆಸಾರ್ಟ್‌ನಲ್ಲಿ ತಂಗಿದ್ದು, ಕಾಂಗ್ರೆಸ್ ಶಾಸಕರು ಹೋಟೆಲ್‌ನಲ್ಲಿ ಬೀಡುಬಿಟ್ಟಿದ್ದಾರೆ.

ರೋಷನ್ ಬೇಗ್‌ ರಾಜೀನಾಮೆ ವಾಪಸ್?
ತಮ್ಮ ಮೇಲಿನ ಐಎಂಎ ಪ್ರಕರಣ ಕೈಬಿಡುವುದಾದರೆ, ಶಾಸಕ ಸ್ಥಾನಕ್ಕೆ ನೀಡಿರುವ ರಾಜೀನಾಮೆ ವಾಪಸ್ ಪಡೆದು ಸರ್ಕಾರಕ್ಕೆ ಬೆಂಬಲ ನೀಡುವುದಾಗಿ ರೋಷನ್ ಬೇಗ್ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಭೇಟಿಮಾಡಿ ಮಾತುಕತೆ ನಡೆಸಿದ ಸಮಯದಲ್ಲಿ ಈ ಬೇಡಿಕೆ ಮುಂದಿಟ್ಟಿದ್ದು, ಇದಕ್ಕೆ ಮುಖ್ಯಮಂತ್ರಿ ಸಹಮತ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ವಿಶ್ವಾಸದಲ್ಲಿ ಸಿದ್ದರಾಮಯ್ಯ
ಶುಕ್ರವಾರ ಸಂಜೆ ಮೈತ್ರಿ ನಾಯಕರ ಸಭೆಯ ನಂತರ ಸಿದ್ದರಾಮಯ್ಯ ಸರಣಿ ಟ್ವೀಟ್ ಮಾಡಿದ್ದಾರೆ. ‘ಎರಡೂ ಪಕ್ಷಗಳ ನಾಯಕರು ಚರ್ಚಿಸಿ ವಿಶ್ವಾಸ ಮತಯಾಚನೆಯ ನಿರ್ಧಾರಕ್ಕೆ ಬಂದಿದ್ದೇವೆ. ಅದರಲ್ಲಿ ಯಶಸ್ವಿಯಾಗುತ್ತೇವೆ’ ಎಂದಿದ್ದಾರೆ.

‘ನನ್ನ ಎದೆ ಬಗೆದರೆ ಸಿದ್ದರಾಮಯ್ಯ ಕಾಣುತ್ತಾರೆ ಎಂದು ಎಂ.ಟಿ.ಬಿ.ನಾಗರಾಜ್ ಹೇಳಿದ್ದರು. ಈಗ ಅವರೇ ರಾಜೀನಾಮೆ ಕೊಟ್ಟಿದ್ದಾರೆ. ಈಗ ಅವರ ಎದೆ ಬಗೆದು ನೋಡಲಾಗುತ್ತದೆಯೆ. ಕಾಲವೇ ತಕ್ಕ ಉತ್ತರ ನೀಡಲಿದೆ’ ಎಂದು ಹೇಳುವ ಮೂಲಕ ಅವರು ವಾಪಸ್ ಬರುವ ಸುಳಿವು ನೀಡಿದ್ದಾರೆ. ರಾಮಲಿಂಗಾರೆಡ್ಡಿ, ರೋಷನ್ ಬೇಗ್ ಜತೆಗೂ ಮಾತುಕತೆ ನಡೆದಿದೆ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.