ADVERTISEMENT

12,600 ಪೌರಕಾರ್ಮಿಕರಿಗೆ ಕಾಯಂ ನೇಮಕಾತಿ ಪತ್ರ: ಮಾಸಿಕ ₹39,000 ವೇತನ

​ಪ್ರಜಾವಾಣಿ ವಾರ್ತೆ
Published 1 ಮೇ 2025, 20:47 IST
Last Updated 1 ಮೇ 2025, 20:47 IST
<div class="paragraphs"><p>ಪೌರಕಾರ್ಮಿಕರಿಗೆ ಕಾಯಂ ನೇಮಕಾತಿ ಪತ್ರ ವಿತರಿಸಿದ ಸಿಎಂ ಸಿದ್ದರಾಮಯ್ಯ</p></div>

ಪೌರಕಾರ್ಮಿಕರಿಗೆ ಕಾಯಂ ನೇಮಕಾತಿ ಪತ್ರ ವಿತರಿಸಿದ ಸಿಎಂ ಸಿದ್ದರಾಮಯ್ಯ

   

ಬೆಂಗಳೂರು: ಕಾಯಂ ನೇಮಕಾತಿ ಸೌಲಭ್ಯ ಪಡೆದಿರುವ 12,692 ಪೌರಕಾರ್ಮಿಕರಿಗೆ ಇನ್ನು ಮುಂದೆ ತಿಂಗಳಿಗೆ ₹39,000 ವೇತನ, ನಿವೃತ್ತಿಯ ವೇಳೆ ₹10 ಲಕ್ಷ ಇಡುಗಂಟು ಮತ್ತು ₹6,000 ಪಿಂಚಣಿ ಸಿಗಲಿದೆ.

ಬಿಬಿಎಂಪಿಯು ಗುರುವಾರ ಆಯೋಜಿಸಿದ್ದ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮದಲ್ಲಿ 12,692 ಪೌರ ಕಾರ್ಮಿಕರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾಯಂ ನೇಮಕಾತಿ ಪತ್ರ ವಿತರಿಸಿದರು.

ADVERTISEMENT

ಬಳಿಕ ಮಾತನಾಡಿದ ಅವರು, ‘ಸ್ವಚ್ಛತಾ ಕೆಲಸ ಕೀಳಲ್ಲ. ಅದು ಗೌರವಯುತವಾದ ಕೆಲಸ. ಪಾಲಿಕೆ ಆಯುಕ್ತರಿಗೆ ಸಿಗುವ ಗೌರವ, ಪೌರಕಾರ್ಮಿಕರಿಗೂ ಸಿಗಬೇಕು. ಅವರು ಗೌರವಯುತವಾದ ಜೀವನ ನಡೆಸುವಂತಾಗಲಿ ಎಂದು ಕಾಯಂ ಆದ ಪೌರಕಾರ್ಮಿಕರಿಗೆ ತಿಂಗಳಿಗೆ ₹39,000 ವೇತನ ನಿಗದಿ ಮಾಡಲಾಗಿದೆ’ ಎಂದರು.

‘ನಮ್ಮ ಪಕ್ಷ ಮತ್ತು ಸರ್ಕಾರ ಬಡವರ, ಹಿಂದುಳಿದವರ, ತುಳಿತಕ್ಕೆ ಒಳಗಾದವರ ಪರ ಇದ್ದೇ ಇದೆ. ಪೌರಕಾರ್ಮಿಕರಿಗೆ ಮೊದಲು ತಿಂಗಳ ವೇತನ ₹7,000 ಇತ್ತು. ಅದೂ ಗುತ್ತಿಗೆದಾರರ ಮೂಲಕ ಪಾವತಿ ಆಗುತ್ತಿತ್ತು. ಅದರಲ್ಲಿ ಬಹಳ ಸಮಸ್ಯೆ ಇತ್ತು. ನಮ್ಮ ಹಿಂದಿನ ಸರ್ಕಾರದಲ್ಲಿ ಅವರ ವೇತನವನ್ನು ₹17,000ಕ್ಕೆ ಹೆಚ್ಚಿಸಿದ್ದೆವು. ನೇರವಾಗಿ ಪೌರಕಾರ್ಮಿಕರೇ ವೇತನ ಪಡೆಯುವ ವ್ಯವಸ್ಥೆ ಜಾರಿಗೆ ತಂದಿದ್ದೆವು. ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಸೇವೆ ಕಾಯಂ ಮಾಡಿದ್ದೇವೆ’ ಎಂದರು.

ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ‘ಪೌರಕಾರ್ಮಿಕರ ಸೇವೆ ಕಾಯಂ ನಮ್ಮ ಪ್ರಣಾಳಿಕೆಯಲ್ಲಿ ಇತ್ತು. ನಾವು ಭರವಸೆಯನ್ನು ಈಡೇರಿಸಿದ್ದೇವೆ. ಒಂದು ರೂಪಾಯಿ ಲಂಚ ಪಡೆಯದೇ 12,692 ಪೌರ ಕಾರ್ಮಿಕರಿಗೆ ಕಾಯಂ ಹುದ್ದೆ ನೀಡಿದ್ದೇವೆ. ಅವರು ನಿವೃತ್ತಿಯಾದಾಗ ಅವರ ಖಾತೆಯಲ್ಲಿ ₹10 ಲಕ್ಷ ಠೇವಣಿ ಇರಿಸಲಾಗುತ್ತದೆ. ತಿಂಗಳಿಗೆ ₹6,000 ಪಿಂಚಣಿ ನೀಡಲಾಗುತ್ತದೆ’ ಎಂದು ಹೇಳಿದರು.

‘ರಾಷ್ಟ್ರಕವಿ ಕುವೆಂಪು ಅವರು ಶಿವನನ್ನು ಪೌರಕಾರ್ಮಿಕರಿಗೆ ಹೋಲಿಸಿದ್ದಾರೆ. ಶಿವನನ್ನು ಅವರು ‘ಜಗದ ಜಲಗಾರ’ ಎಂದಿದ್ದಾರೆ. ಸ್ವಚ್ಛತಾ ಸೇನಾನಿಗಳದ್ದು ಅಷ್ಟು ಮಹತ್ವದ ಕೆಲಸ. ನೀವು ಇಲ್ಲದೇ ಇದ್ದರೆ, ಬೆಂಗಳೂರು ನಾರುತ್ತದೆ. ಪೌರಕಾರ್ಮಿಕರ ಅಭಿವೃದ್ಧಿಗಾಗಿ ಬಿಬಿಎಂಪಿ ಬಜೆಟ್‌ನಲ್ಲಿ ₹600 ಕೋಟಿ, ಅವರ ಮಕ್ಕಳ ಶಿಕ್ಷಣಕ್ಕಾಗಿ ₹700 ಕೋಟಿ ತೆಗೆದಿರಿಸಿದ್ದೇವೆ’ ಎಂದರು.

‘ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ‘ಡಿ’ ದರ್ಜೆ ನೌಕರರಿಗೆ ಸಿಗುವ ಸಂಬಳ, ಇತರ ಎಲ್ಲ ಸವಲತ್ತುಗಳು ಪೌರಕಾರ್ಮಿಕರಿಗೂ ಸಿಗಲಿವೆ’ ಎಂದರು.

‘ನಾನು ವಿರೋಧ ಪಕ್ಷದಲ್ಲಿ ಇದ್ದಾಗ ಸೇವೆ ಕಾಯಂಗೆ ಆಗ್ರಹಿಸಿ ಪೌರಕಾರ್ಮಿಕರು ಹೋರಾಟ ನಡೆಸಿದ್ದರು. ಹೋರಾಟದ ಸ್ಥಳಕ್ಕೆ ತೆರಳಿದ್ದ ನಾನು, ‘ಈ ಬಗ್ಗೆ ಸರ್ಕಾರದ ಗಮನ ಸೆಳೆಯುತ್ತೇವೆ. ಬಿಜೆಪಿ ಸರ್ಕಾರ ಆ ಕೆಲಸ ಮಾಡದೇ ಇದ್ದರೆ, ನಾವು ಅಧಿಕಾರಕ್ಕೆ ಬಂದಾಗ ಕಾಯಂ ಮಾಡುತ್ತೇವೆ’ ಎಂದು ಮಾತುಕೊಟ್ಟಿದ್ದೆ. ಆ ಮಾತನ್ನು ಉಳಿಸಿ‌ಕೊಂಡಿದ್ದೇವೆ’ ಎಂದರು.

ಕಾರ್ಮಿಕರ ಹಕ್ಕು ಕಸಿದುಕೊಳ್ಳುತ್ತಿರುವ ಮೋದಿ ಸರ್ಕಾರ: ಖರ್ಗೆ

‘ಕಾರ್ಮಿಕರ ಸಬಲೀಕರಣಕ್ಕಾಗಿ ರೂಪಿಸಿದ್ದ ಕಾನೂನುಗಳನ್ನು ತನ್ನ ಕಾರ್ಪೊರೇಟ್‌ ಗೆಳೆಯರ ಅನುಕೂಲ ಆಗುವಂತೆ ಕೇಂದ್ರದ ನರೇಂದ್ರ ಮೋದಿ ಅವರ ಸರ್ಕಾರ ಬದಲಿಸುತ್ತಿದೆ. ಹಿಂದಿನ ಕೇಂದ್ರ ಸರ್ಕಾರಗಳು ರೂಪಿಸಿದ್ದ 44 ಕಾರ್ಮಿಕ ಕಾನೂನುಗಳನ್ನು ರದ್ದು‍ಪಡಿಸಿ, 4 ಕಾನೂನುಗಳನ್ನು ಮೋದಿ ಸರ್ಕಾರ ಜಾರಿಗೆ ತಂದಿದೆ’ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದರು.

‘ಬ್ರಿಟಿಷರ ಆಳ್ವಿಕೆಯಲ್ಲಿ ಭಾರತೀಯ ಕಾರ್ಮಿಕರಿಗೆ 12 ತಾಸು ಮತ್ತು ಬ್ರಿಟನ್‌ನ ಕಾರ್ಮಿಕರಿಗೆ 8 ತಾಸು ದುಡಿಮೆಯ ಅವಧಿ ನಿಗದಿ ಮಾಡಲಾಗಿತ್ತು. ಬಿ.ಆರ್‌.ಅಂಬೇಡ್ಕರ್ ಅವರು 1930ರ ದಶಕದಲ್ಲಿ ವೈಸ್‌ರಾಯ್‌ ಸಮಿತಿ ಮುಂದೆ ಈ ತಾರತಮ್ಯವನ್ನು ಹಲವು ಬಾರಿ ಖಂಡಿಸಿದ್ದರು. ಪರಿಣಾಮವಾಗಿ ಭಾರತೀಯ ಕಾರ್ಮಿಕರ ದುಡಿಮೆಯ ಅವಧಿಯನ್ನೂ 8 ಗಂಟೆಗೆ ಇಳಿಸಲಾಗಿತ್ತು. ಅಂಬೇಡ್ಕರ್ ಅವರು ಹೋರಾಡಿ, ಕೊಡಿಸಿದ್ದ ಆ ಹಕ್ಕನ್ನು ಮೋದಿ ಸರ್ಕಾರ ಈಗ ಕಸಿದುಕೊಂಡಿದೆ’ ಎಂದು ಆರೋಪಿಸಿದರು.

‘ಈಗ 10 ತಾಸಿನವರೆಗೂ ಕೆಲಸ ಮಾಡಿಸಬಹುದು ಎಂದು ಮೋದಿ ಸರ್ಕಾರ ಕಾನೂನು ರೂಪಿಸಿದೆ. ಇದರಿಂದ ಬಡ ಕಾರ್ಮಿಕರಿಗೆ ಅನನಕೂಲವಾಗುತ್ತದೆ. ಮೋದಿ ಅವರ ಕಾರ್ಪೊರೇಟ್‌ ಗೆಳೆಯರಿಗೆ, ಶ್ರೀಮಂತರಿಗೆ ಲಾಭವಾಗುತ್ತದೆ. ಸಂಪತ್ತಿನ ಅಸಮಾನ ಹಂಚಿಕೆ ಇನ್ನಷ್ಟು ಹೆಚ್ಚುತ್ತಿದೆ’ ಎಂದರು.

ರಾಜ್ಯದ ಎಲ್ಲೆಡೆ ಕಾಯಂ ಮಾಡಿ: ಖರ್ಗೆ

‘ಬಿಬಿಎಂಪಿ ವ್ಯಾಪ್ತಿಯಲ್ಲಿ ಪೌರಕಾರ್ಮಿಕರನ್ನು ಕಾಯಂ ಮಾಡಿರುವ ರಾಜ್ಯ ಸರ್ಕಾರದ ಕ್ರಮ ಸ್ವಾಗತಾರ್ಹ. ರಾಜ್ಯದ ಎಲ್ಲ ಪಾಲಿಕೆ, ನಗರಸಭೆ, ಪುರಸಭೆಗಳಲ್ಲಿ ಮತ್ತು ಸ್ಥಳೀಯ ಸಂಸ್ಥೆಗಳಲ್ಲಿ ಇರುವ ಪೌರಕಾರ್ಮಿಕರನ್ನು ಕಾಯಂ ಮಾಡಬೇಕು’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ಕಾರ್ಯಕ್ರಮದಲ್ಲಿ ತಮ್ಮ ಮಾತಿನ ವೇಳೆ ಈ ಬಗ್ಗೆ ಪ್ರಸ್ತಾಪಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ರಾಜ್ಯದಲ್ಲಿ 38,000 ಪೌರ ಕಾರ್ಮಿಕರು ಇದ್ದಾರೆ. ಅವರೆಲ್ಲರನ್ನೂ ಕಾಯಂಗೊಳಿಸುವ ಇಚ್ಛೆ ಇದೆ. ಪರಿಶೀಲನೆ ನಡೆಸಿ, ಹಂತಹಂತವಾಗಿ ಕ್ರಮ ತೆಗೆದುಕೊಳ್ಳಲಾಗುತ್ತದೆ’ ಎಂದರು.

‘ಸ್ವಚ್ಛತಾ ಕಾರ್ಯದಲ್ಲಿ ತೊಡಗಿರುವ ಚಾಲಕರು, ವಾಹನ ಸಹಾಯಕರು ಮತ್ತು ಆಪರೇಟರ್‌ಗಳನ್ನು ಪೌರಕಾರ್ಮಿಕರು ಕಾಯಂ ನೇಮಕಾತಿಯಲ್ಲಿ ಸೇರಿಲ್ಲ. ಇಂತಹ 9,000 ಪೌರ ಕಾರ್ಮಿಕರು ಇದ್ದಾರೆ. ಆ ಬಗ್ಗೆ ಪರಿಶೀಲನೆ ನಡೆಸಿ, ಎಲ್ಲರಿಗೂ ಕಾಯಂ ನೇಮಕಾತಿ ಸಿಗುವಂತೆ ಮಾಡುತ್ತೇವೆ’ ಎಂದರು.

‘ಬಿಬಿಎಂಪಿ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕೆಲ ಪೌರಕಾರ್ಮಿಕರಿಗೆ ಕಾಯಂ ನೇಮಕಾತಿ ಆಗಿಲ್ಲ. ಸಿಂಧುತ್ವ ವಿಚಾರದಲ್ಲಿ ಕೆಲವು ಗೊಂದಲಗಳಿರುವ ಕಾರಣಕ್ಕೆ ಹೀಗಾಗಿದೆ. ಈ ಬಗ್ಗೆ ಪ್ರತ್ಯೇಕ ಬೂತ್ ಆರಂಭಿಸಿ, ದಾಖಲೆಗಳನ್ನು ಪರಿಶೀಲನೆ ಮಾಡಿಸಿ ನ್ಯಾಯ ಒದಗಿಸುತ್ತೇವೆ’ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.