
ಬೆಂಗಳೂರು: ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರ ಅಪೂರ್ಣ ಭಾಷಣ ಹಾಗೂ ಅವರು ಸದನದಿಂದ ತೆರಳುವಾಗ ಕಾಂಗ್ರೆಸ್ ಸದಸ್ಯರು ನಡೆಸಿದ ಗದ್ದಲದ ವಿಷಯ ಬುಧವಾರವೂ ಉಭಯ ಸದನಗಳಲ್ಲಿ ಕಾವೇರಿದ ಚರ್ಚೆಗೆ ಕಾರಣವಾಯಿತು.
ಲೋಕಭವನ ಮತ್ತು ಆರ್‌ಎಸ್‌ಎಸ್ ಕಚೇರಿಗಳ ದೂರವಾಣಿ ಕದ್ದಾಲಿಕೆ ಮಾಡಲಾಗುತ್ತಿದೆ ಎಂದು ಬಿಜೆಪಿ ಸದಸ್ಯರು ವಿಧಾನಸಭೆಯಲ್ಲಿ ಆರೋಪಿಸಿದರು. ರಾಜ್ಯಪಾಲರ ನಡವಳಿಕೆ ಪರ ಮತ್ತು ವಿರುದ್ಧವಾಗಿ ಎರಡು ದಿನ ಉಭಯ ಸದನಗಳಲ್ಲೂ ವಾಗ್ವಾದ ನಡೆಯಿತು. ಈ ಬಗ್ಗೆ ತಮ್ಮ ಸದನಗಳಲ್ಲಿ ಪ್ರತ್ಯೇಕವಾಗಿ ರೂಲಿಂಗ್ ನೀಡಿದ ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಮತ್ತು ಸಭಾಧ್ಯಕ್ಷ ಯು.ಟಿ.ಖಾದರ್ ಅವರು, ‘ರಾಜ್ಯಪಾಲರ ಹೆಸರು ಬಳಸಿ ಚರ್ಚೆ ನಡೆಸುವಂತಿಲ್ಲ’ ಎಂದು ತಾಕೀತು ಮಾಡಿದರು.
ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕ ಆರ್.ಅಶೋಕ ಅವರು ಕಾಂಗ್ರೆಸ್‌ನ ಎ.ಎಸ್.ಪೊನ್ನಣ್ಣ ಮತ್ತು ಪ್ರದೀಪ್ ಈಶ್ವರ್ ಅವರು ರಾಜ್ಯಪಾಲರನ್ನು ನಿಂದಿಸುವುದಕ್ಕೆ ಚರ್ಚೆಯನ್ನು ಸೀಮಿತವಾಗಿ ಮಾತನಾಡಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡರು. ರಾಜ್ಯಪಾಲರು ಸಂವಿಧಾನಕ್ಕೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ ಎಂದು ಕಾಂಗ್ರೆಸ್ ಸದಸ್ಯರು ಪ್ರತ್ಯಾರೋಪ ಮಾಡಿದರು.
ಆಗ ಮಧ್ಯಪ್ರವೇಶಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ರಾಜ್ಯಪಾಲರು ರಾಷ್ಟ್ರಗೀತೆಗೆ ನಿಲ್ಲಲಿಲ್ಲ. ಅವರು ಸಂವಿಧಾನದ ಪ್ರಕಾರ ನಡೆದುಕೊಳ್ಳಲಿಲ್ಲ. ಇಷ್ಟಾದರೂ ನಾವು ರಾಜ್ಯಪಾಲರನ್ನು ನಗುತ್ತಲೇ ಬೀಳ್ಕೊಟ್ಟು, ಧನ್ಯವಾದ ಹೇಳಿದ್ದೇವೆ’ ಎಂದರು.
‘ರಾಜ್ಯಪಾಲರ ಭಾಷಣದ ಮೇಲೆ ವಂದನಾ ನಿರ್ಣಯದ ಬದಲಿಗೆ ಖಂಡನಾ ನಿರ್ಣಯದ ಮೂಲಕ ರಾಜ್ಯಪಾಲರಿಗೆ ಅಗೌರವ ತೋರಿಸಿದ್ದಾರೆ. ಆದ್ದರಿಂದ ಈ ಕುರಿತು ಸರ್ಕಾರ ಕ್ಷಮೆ ಯಾಚಿಸಬೇಕು. ರಾಜ್ಯಪಾಲರನ್ನು ಅಡ್ಡಗಟ್ಟಿದ ಬಿ.ಕೆ.ಹರಿಪ್ರಸಾದ್, ಶರತ್ ಬಚ್ಚೇಗೌಡ, ಎಸ್.ರವಿ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು’ ಎಂದು ಅಶೋಕ ಪಟ್ಟು ಹಿಡಿದರು. ಆ ವೇಳೆ, ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಅಶೋಕ ಅವರನ್ನು ಬೆಂಬಲಿಸಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
ನಿಯಮ ಪುಸ್ತಕ ಹರಿದ ವಿಪಕ್ಷ ನಾಯಕ
ಬುಧವಾರ ಗದ್ದಲದಿಂದಲೇ ಕೂಡಿದ್ದ ವಿಧಾನ ಪರಿಷತ್ತಿನ ಕಲಾಪವು ಸಂಜೆಯ ವೇಳೆಗೆ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಪರಿಷತ್ತಿನ ಕಾರ್ಯವಿಧಾನ ಮತ್ತು ನಡವಳಿಕೆಯ ನಿಯಮದ ಪುಸ್ತಕ ಹರಿದುಹಾಕಿದ್ದಕ್ಕೆ ಸಾಕ್ಷಿಯಾಯಿತು.
ಬೆಳಿಗ್ಗೆ ಕಲಾಪ ಆರಂಭವಾದಾಗ ವಿರೋಧ ಪಕ್ಷಗಳ ಸದಸ್ಯರು ‘ರಾಜ್ಯಪಾಲರ ಭಾಷಣದ ಕುರಿತಾಗಿ ಸರ್ಕಾರ ವ್ಯತಿರಿಕ್ತ ಹೇಳಿಕೆ ನೀಡಿದೆ. ಸರ್ಕಾರ ತಮ್ಮ ನಿಲುವು ತಿಳಿಸಬೇಕು’ ಎಂದು ಧರಣಿ ಆರಂಭಿಸಿದರು. ಸಭಾನಾಯಕ ಎನ್.ಎಸ್.ಬೋಸರಾಜು ‘ರಾಷ್ಟ್ರಗೀತೆಗೆ ಅಗೌರವ ತೋರಿದ್ದನ್ನು ಖಂಡಿಸಿದ್ದೇವೆ. ಭಾಷಣವನ್ನು ಒಪ್ಪಿ ವಂದನಾ ನಿರ್ಣಯದ ಮೇಲೆ ಚರ್ಚಿಸುತ್ತಿದ್ದೇವೆ’ ಎಂದರು. ವಿರೋಧ ಪಕ್ಷಗಳ ಸದಸ್ಯರು ಈ ಸಮಜಾಯಿಷಿಗೆ ಒಪ್ಪದ ಕಾರಣ ರಾಜ್ಯಪಾಲರ ವಿಷಯ ಮುಂದಿಟ್ಟು ವಾಕ್ಸಮರ ಆರಂಭವಾಯಿತು. ಈ ವೇಳೆ ಮಧ್ಯಪ್ರವೇಶಿಸಿದ ಸಭಾಪತಿ ಹೊರಟ್ಟಿ ‘ಚರ್ಚೆಗೆ ರಾಜ್ಯಪಾಲರ ಹೆಸರು ಬಳಸಿಕೊಳ್ಳುವಂತಿಲ್ಲ’ ಎಂದು ರೂಲಿಂಗ್ ನೀಡಿದರು.
ಇದಕ್ಕೆ ಛಲವಾದಿ ನಾರಾಯಣಸ್ವಾಮಿ ‘ರಾಜ್ಯಪಾಲರಿಗೆ ಅಡ್ಡಿಪಡಿಸಿದ್ದರ ಬಗ್ಗೆ ಚರ್ಚಿಸಬೇಡವೇ? ಆಡಳಿತ ಪಕ್ಷದವರಿಗೆ ಇಲ್ಲದ ನಿಯಮ ನಮಗೂ ಬೇಡ’ ಎಂದು ಆಕ್ರೋಶ ವ್ಯಕ್ತಪಡಿಸಿದರು. ವಿರೋಧ ಪಕ್ಷಗಳು ಮತ್ತು ಆಡಳಿತ ಪಕ್ಷದ ಸದಸ್ಯರ ಜಟಾಪಟಿ ಮಧ್ಯೆ ನಾರಾಯಣಸ್ವಾಮಿ ಅವರು ಸದನದ ನಿಯಮದ ಪುಸ್ತಕವನ್ನು ಹರಿದುಹಾಕಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.