ಥಾವರಚಂದ್ ಗೆಹಲೋತ್
ಬೆಂಗಳೂರು: ಕರ್ನಾಟಕ ಪ್ಲಾಟ್‌ಫಾರ್ಮ್ ಆಧಾರಿತ ಗಿಗ್ ಕಾರ್ಮಿಕರ (ಸಾಮಾಜಿಕ ಭದ್ರತೆ ಮತ್ತು ಕ್ಷೇಮಾಭಿವೃದ್ಧಿ), ಕರ್ನಾಟಕ ವೈದ್ಯಕೀಯ ಕೋರ್ಸ್‍ಗಳನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳ ಕಡ್ಡಾಯ ಸೇವೆ (ತಿದ್ದುಪಡಿ), ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ (ವೈದ್ಯಾಧಿಕಾರಿಗಳು ಮತ್ತು ಇತರ ಸಿಬ್ಬಂದಿಯ ವರ್ಗಾವಣೆ ನಿಯಂತ್ರಣ) (ತಿದ್ದುಪಡಿ) ಈ ಮೂರು ಸುಗ್ರೀವಾಜ್ಞೆಗಳಿಗೆ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರು ಮಂಗಳವಾರ ಅಂಕಿತ ಹಾಕಿದ್ದಾರೆ. ಆ ಬೆನ್ನಲ್ಲೆ, ರಾಜ್ಯಪತ್ರದಲ್ಲಿ ಪ್ರಕಟಿಸಲಾಗಿದೆ.
ಸದ್ಯ ವಿಧಾನಮಂಡಲ ಅಧಿವೇಶನದಲ್ಲಿ ಇಲ್ಲದೇ ಇರುವುದರಿಂದ ಮತ್ತು ಈ ವಿಷಯವು ತುರ್ತು ಎಂಬ ಕಾರಣಕ್ಕೆ ಈ ಮಸೂದೆಗಳನ್ನು ಸುಗ್ರೀವಾಜ್ಞೆಯಾಗಿ ಹೊರಡಿಸಲು ಸಚಿವ ಸಂಪುಟ ಸಭೆಯಲ್ಲಿ ನಿರ್ಣಯಿಸಲಾಗಿತ್ತು.
ಗಿಗ್ ಕಾರ್ಮಿಕರಿಗೆ ಭವಿಷ್ಯ ನಿಧಿ, ಅಪಘಾತ ಸೌಲಭ್ಯ, ವಸತಿ, ಮಕ್ಕಳಿಗೆ ಶೈಕ್ಷಣಿಕ ಸೌಲಭ್ಯ, ಕಾರ್ಮಿಕ ಕೌಶಲಾಭಿವೃದ್ಧಿ, ಅಂತ್ಯಸಂಸ್ಕಾರ ಧನ ಸಹಾಯ ನೀಡಲು, ಇದಕ್ಕಾಗಿ ಪ್ರತಿ ವಹಿವಾಟಿನ ಮೇಲೆ ಶೇ 1 ರಿಂದ ಶೇ 2 ಮೀರದಂತೆ ಕ್ಷೇಮಾಭಿವೃದ್ಧಿ ಶುಲ್ಕ ಸಂಗ್ರಹಿಸಲು ‘ಕರ್ನಾಟಕ ಪ್ಲಾಟ್‌ಫಾರ್ಮ್ ಆಧಾರಿತ ಗಿಗ್ ಕಾರ್ಮಿಕರ ಸಾಮಾಜಿಕ ಭದ್ರತೆ ಮತ್ತು ಕ್ಷೇಮಾಭೀವೃದ್ಧಿ ಸುಗ್ರೀವಾಜ್ಞೆಯು ಅವಕಾಶ ನೀಡಲಿದೆ.
ಕಡ್ಡಾಯ ಗ್ರಾಮೀಣ ಸೇವಾ ನಿಯಮ ಸಡಿಲು: ಗ್ರಾಮೀಣ ಹುದ್ದೆಗಳನ್ನು ಭರ್ತಿ ಮಾಡಿದ ನಂತರ ನಗರ ಪ್ರದೇಶಗಳಲ್ಲಿನ ಹುದ್ದೆಗಳಿಗೆ ಎಂಬಿಬಿಎಸ್ ಪದವೀಧರರನ್ನು ನೇಮಿಸಲು ‘ವೈದ್ಯಕೀಯ ಕೋರ್ಸ್‍ಗಳನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳ ಕಡ್ಡಾಯ ಸೇವಾ (ತಿದ್ದುಪಡಿ) ಸುಗ್ರೀವಾಜ್ಞೆ’ ಅವಕಾಶ ಕಲ್ಪಿಸಲಿದೆ. ಅಲ್ಲದೆ, ಸರ್ಕಾರಿ ಕೋಟಾದಡಿ ಎಂಬಿಬಿಎಸ್ ವಿದ್ಯಾರ್ಥಿಗಳನ್ನು ಆದ್ಯತೆಯಲ್ಲಿ ತುಂಬಲು ಮತ್ತು ಉಳಿದ ಖಾಲಿ ಹುದ್ದೆಗಳಿಗೆ ಸಾಂಸ್ಥಿಕ ಕೋಟಾದಡಿ ಓದಿದ ವಿದ್ಯಾರ್ಥಿಗಳಿಂದ ತುಂಬಲು ಹಾಗೂ ಉಳಿದ ಹೆಚ್ಚುವರಿ ವಿದ್ಯಾರ್ಥಿಗಳಿಗೆ ಕಡ್ಡಾಯ ಸೇವೆಯಿಂದ ವಿನಾಯಿತಿ ನೀಡಲು ಕೂಡಾ ಅವಕಾಶ ನೀಡಲಿದೆ.
ಸ್ನಾತಕೋತ್ತರ ಪದವೀಧರರನ್ನು ಗ್ರಾಮೀಣ ಪ್ರದೇಶಗಳಲ್ಲಿನ ಆರೋಗ್ಯ ಕೇಂದ್ರಗಳಿಗೆ ನಿಯೋಜಿಸಲು ಹಾಗೂ ಒಂದು ವರ್ಷದ ಕಡ್ಡಾಯ ಸೇವೆಯನ್ನು ತಪ್ಪದೇ ಮಾಡುವುದಾಗಿ ಹಾಗೂ ತಪ್ಪಿದರೆ ಅದಕ್ಕೆ ಸಂಬಂಧಪಟ್ಟ ದಂಡ ಪಾವತಿಸಲು ಮತ್ತು ಅದರ ಪರಿಣಾಮಗಳನ್ನು ಎದುರಿಸಲು ಒಪ್ಪಂದ ಪತ್ರ ಬರೆದು ಕೊಟ್ಟ ವಿದ್ಯಾರ್ಥಿಗಳಿಗೆ ಸ್ನಾತಕೋತ್ತರ ಮತ್ತು ಸೂಪರ್ ಸ್ಪೆಷಾಲಿಟಿ ಕೋರ್ಸ್ ಓದಲು ನಿರಕ್ಷೇಪಣಾ ಪತ್ರ ನೀಡುವ ಪ್ರಸ್ತಾವವೂ ಅದರಲ್ಲಿದೆ.
ವೈದ್ಯಾಧಿಕಾರಿ ಮತ್ತು ಇತರ ಸಿಬ್ಬಂದಿಯ ಶೇ 15ರಷ್ಟು ವರ್ಗಾವಣೆ: ವೈದ್ಯಾಧಿಕಾರಿಗಳು ಮತ್ತು ಇತರ ಸಿಬ್ಬಂದಿಯ ವರ್ಗಾವಣೆಯನ್ನು ಕೌನ್ಸೆಲಿಂಗ್ ಮೂಲಕ ನಡೆಸಲು ರಾಜ್ಯ ಸಿವಿಲ್ ಸೇವೆಗಳ (ವೈದ್ಯಾಧಿಕಾರಿಗಳು ಮತ್ತು ಇತರ ಸಿಬ್ಬಂದಿಯ ವರ್ಗಾವಣೆ ನಿಯಂತ್ರಣ) (ತಿದ್ದುಪಡಿ) ಸುಗ್ರಿವಾಜ್ಞೆ ಅವಕಾಶ ಕಲ್ಪಿಸಲಿದೆ.
ಗ್ರಾಮೀಣ ಪ್ರದೇಶದಲ್ಲಿ ನಿಗದಿಪಡಿಸಿದಷ್ಟು ಕರ್ತವ್ಯವನ್ನು ಸಲ್ಲಿಸದ ವೈದ್ಯಾಧಿಕಾರಿ ಅಥವಾ ಸಿಬ್ಬಂದಿಯನ್ನು ಗ್ರಾಮೀಣ ಪ್ರದೇಶಗಳಲ್ಲಿರುವ ಹುದ್ದೆಗೇ ವರ್ಗಾವಣೆ ಮಾಡಬೇಕು. ವಿಶೇಷ ತಜ್ಞ ವೈದ್ಯರು, ಹಿರಿಯ ವಿಶೇಷ ತಜ್ಞ ವೈದ್ಯರನ್ನು ಅವರು ಹೊಂದಿರುವ ವಿಶೇಷ ವಿದ್ಯಾರ್ಹತೆಗೆ ಸಂಬಂಧಿಸಿದಂತೆ ಗುರುತಿಸಿದ ಹುದ್ದೆಗೆ ವರ್ಗಾವಣೆ ಮಾಡಬೇಕು. ವೈದ್ಯಾಧಿಕಾರಿ ಮತ್ತು ಇತರ ಸಿಬ್ಬಂದಿಯ ಶೇ 15ರಷ್ಟು ವರ್ಗಾವಣೆ ಹಾಗೂ ಮಹತ್ವದ ಖಾಲಿ ಹುದ್ದೆಗಳಿಗೆ ರಾಜ್ಯ ಸರ್ಕಾರವು ಕೌನ್ಸೆಲಿಂಗ್ ಇಲ್ಲದೆಯೂ ನಿಯೋಜಿಸಲು ಈ ಸುಗ್ರೀವಾಜ್ಞೆಯ ಮೂಲಕ ಅವಕಾಶ ನೀಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.