ADVERTISEMENT

ರಾಜ್ಯಪಾಲರು ಕೇಂದ್ರ ಸರ್ಕಾರದ ಕೈಗೊಂಬೆಯಂತೆ ವರ್ತಿಸಿದ್ದಾರೆ: ಸಿದ್ದರಾಮಯ್ಯ ಕಿಡಿ

​ಪ್ರಜಾವಾಣಿ ವಾರ್ತೆ
Published 22 ಜನವರಿ 2026, 6:23 IST
Last Updated 22 ಜನವರಿ 2026, 6:23 IST
   

ಬೆಂಗಳೂರು: ‘ರಾಜ್ಯಪಾಲರು ಸಚಿವ ಸಂಪುಟ ತಯಾರಿಸಿದ ಭಾಷಣ ಓದದೆ, ಅವರೇ ತಯಾರು ಮಾಡಿದ ಒಂದು ಪ್ಯಾರಾ ಭಾಷಣ ಓದಿ, ಸಂವಿಧಾನಕ್ಕೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ. ಅವರು ಸಂವಿಧಾನವನ್ನು ಉಲ್ಲಂಘಿಸಿದ್ದಾರೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದರು.

ಜಂಟಿ ಅಧಿವೇಶನ ಉದ್ದೇಶಿಸಿ ಸರ್ಕಾರ ಸಿದ್ಧಪಡಿಸಿದ್ದ ಭಾಷಣವನ್ನು ಓದದೆ, ತಾವೇ ಸಿದ್ಧಪಡಿಸಿಕೊಂಡು ಬಂದಿದ್ದ ಕೇವಲ ಒಂದು ಪ್ಯಾರಾವನ್ನು ಓದಿ ರಾಜ್ಯಪಾಲ ಥಾವರಚಂದ ಗೆಹಲೋತ್‌ ಅವರು ನಿರ್ಗಮಿಸಿದ ಬೆನ್ನಲ್ಲೆ ಸುದ್ದಿಗಾರರನ್ನು ಉದ್ದೇಶಿಸಿ ಮುಖ್ಯಮಂತ್ರಿ ಮಾತನಾಡಿದರು.

‘ರಾಜ್ಯಪಾಲರಿಂದ ಸಂವಿಧಾನದ ಉಲ್ಲಂಘನೆ ಆಗಿದೆ. ಜನಪ್ರತಿನಿಧಿಗಳ ಸಭೆಗೆ ಅವಮಾನ ಆಗಿದೆ. ರಾಜ್ಯಪಾಲರು ಭಾಷಣ ಮಾಡಬೇಕಿರುವುದು ಸಂವಿಧಾನಬದ್ಧವಾದ ವಿಚಾರ. ಅದನ್ನು ಉಲ್ಲಂಘಿಸಿದ್ದಾರೆ. ನಮ್ಮ ಸರ್ಕಾರ, ಪಕ್ಷ, ಶಾಸಕರು, ಪರಿಷತ್‌ ಸದಸ್ಯರು ಪ್ರತಿಭಟನೆ ಮಾಡುತ್ತಾರೆ. ಇಡೀ ರಾಜ್ಯದಲ್ಲಿ ನಾವು ಹೋರಾಟ ಹಮ್ಮಿಕೊಂಡಿದ್ದೇವೆ’ ಎಂದರು.

ADVERTISEMENT

‘ರಾಜ್ಯಪಾಲರು ಕೇಂದ್ರ ಸರ್ಕಾರದ ಕೈಗೊಂಬೆಯಂತೆ ವರ್ತಿಸಿದ್ದಾರೆ. ಕೇಂದ್ರ ಸರ್ಕಾರ ಮಾಡಿರುವ ತಪ್ಪು ಮುಚ್ಚಿಕೊಳ್ಳಲು ರಾಜ್ಯಪಾಲರಿಂದ ಬೇರೆ ಭಾಷಣ ಓದಿಸಿದ್ದಾರೆ. ಇದು ಸಂವಿಧಾನದ ಉಲ್ಲಂಘನೆ. ಸಂವಿಧಾನಬಾಹಿರ, ಅವರು ತಮ್ಮ ಕರ್ತವ್ಯ, ಜವಾಬ್ದಾರಿಯನ್ನು ನಿರ್ವಹಿಸಿಲ್ಲ’ ಎಂದು ವಾಗ್ದಾಳಿ ನಡೆಸಿದರು.

‘ಸರ್ಕಾರ ತಯಾರಿ ಮಾಡಿದ ಭಾಷಣವನ್ನು ಎಲ್ಲ ಶಾಸಕರಿಗೆ, ಪರಿಷತ್‌ ಸದಸ್ಯರಿಗೆ ನೀಡಿದ್ದೇವೆ’ ಎಂದೂ ಹೇಳಿದರು.

‘ರಾಜ್ಯಪಾಲರು ಅವರು ಸಿದ್ಧಪಡಿಸಿದ ಭಾಷಣವನ್ನು ಓದುವಂತೆ ಇಲ್ಲ. ಸರ್ಕಾರ ಸಿದ್ಧಪಡಿಸಿದ ಭಾಷಣವನ್ನು ಓದಲೇಬೇಕು. ವರ್ಷದ ಮೊದಲ ಅಧಿವೇಶನದಲ್ಲಿ ಅವರ ಭಾಷಣ ಮಾಡಬೇಕು’ ಎಂದರು.

‘ಕೇಂದ್ರ ಸರ್ಕಾರ ನರೇಗಾ ಕಾಯ್ದೆಯ ಬದಲು, ಹೊಸ ಕಾಯ್ದೆ ವಿಬಿ ಜಿ ರಾಮ್‌ ಜಿ ಕಾಯ್ದೆಯನ್ನು ತಂದಿದೆ. ಇದಕ್ಕೆ ನಮ್ಮ ಪಕ್ಷ ಮತ್ತು ಸರ್ಕಾರದ ವಿರೋಧವಿದೆ. ಈ ವಿಷಯವನ್ನು ರಾಜ್ಯಪಾಲರ ಭಾಷಣದಲ್ಲಿ ಸೇರಿಸಲಾಗಿತ್ತು. ನರೇಗಾ ಮರು ಸ್ಥಾಪನೆ ಮಾಡಬೇಕು. ಹೊಸ ಕಾಯ್ದೆಯನ್ನು ರದ್ದು ಮಾಡಬೇಕು. ನಮ್ಮ ಪಕ್ಷ ಮತ್ತು ಸರ್ಕಾರ ಈ ತೀರ್ಮಾನ ಮಾಡಿದೆ. ನರೇಗಾ ಮರುಸ್ಥಾಪನೆ ಮಾಡುವವರೆಗೆ ನಿರಂತರ ಹೋರಾಟ ನಡೆಯಲಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.