ADVERTISEMENT

ಸರ್ಕಾರಿ ಆಸ್ತಿ ಗುತ್ತಿಗೆ ಬೇಕಾಬಿಟ್ಟಿ ಬಳಕೆ ಸಲ್ಲ: ಹೈಕೋರ್ಟ್‌

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2022, 18:01 IST
Last Updated 1 ಡಿಸೆಂಬರ್ 2022, 18:01 IST
   

ಬೆಂಗಳೂರು: ‘ಸರ್ಕಾರಿ ಆಸ್ತಿಯನ್ನು ಸಾರ್ವಜನಿಕ ಹರಾಜು ಅಥವಾ ಟೆಂಡರ್ ಪ್ರಕ್ರಿಯೆ ಮೂಲಕವೇ ಗುತ್ತಿಗೆ ನೀಡಬೇಕು. ಇಲ್ಲವಾದರೆ ಅಧಿಕಾರವನ್ನು ನಿರಂಕುಶವಾಗಿ ಬಳಕೆ ಮಾಡಿದಂತಾಗುತ್ತದೆ. ಆದ್ದರಿಂದ, ಸಾರ್ವಜನಿಕ ಆಸ್ತಿ ಹಂಚಿಕೆಯಲ್ಲಿ ಸರ್ಕಾರ ಪಾರದರ್ಶಕತೆ ಕಾಯ್ದುಕೊಳ್ಳಬೇಕು’ ಎಂದು ಹೈಕೋರ್ಟ್‌, ರಾಜ್ಯ ಸರ್ಕಾರಕ್ಕೆ ತಾಕೀತು ಮಾಡಿದೆ.

ಮಲ್ಪೆ ಬಂದರಿನ ಮೀನು ಸಂಸ್ಕರಣಾ ಘಟಕದಲ್ಲಿ 700 ಚದರ ಮೀಟರ್ ಜಾಗವನ್ನು ಸಂತೋಷ್ ವಿ. ಸಾಲ್ಯಾನ್ ಎಂಬುವವರಿಗೆ ಗುತ್ತಿಗೆ ನೀಡಿ ಉಡುಪಿಯ ಮೀನುಗಾರಿಕೆ ಇಲಾಖೆ ಜಂಟಿ ನಿರ್ದೇಶಕರು 2022ರ ಸೆಪ್ಟೆಂಬರ್ 23ರಂದು ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿ ಚಂದ್ರ ಸುವರ್ಣ ಎಂಬುವವರು ಸಲ್ಲಿಸಿದ್ದ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ಬಂದರಿನ ಜಾಗವನ್ನು ಸಂತೋಷ್‌ ವಿ.ಸಾಲ್ಯಾನ್‌ ಅವರಿಗೆ ಗುತ್ತಿಗೆ ನೀಡಲು ಶಾಸಕರಾದ ಲಾಲಾಜಿ ಆರ್‌.ಮೆಂಡನ್‌ ಮತ್ತು ರಘುಪತಿ ಭಟ್‌ ನೀಡಿದ್ದ ಶಿಫಾರಸು ಪತ್ರಗಳಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ನ್ಯಾಯಪೀಠ, ಬಂದರಿನ ಜಾಗವನ್ನು ಸಂತೋಷ್ ವಿ. ಸಾಲ್ಯಾನ್ ಅವರಿಗೆ ಗುತ್ತಿಗೆ ನೀಡಿ ಉಡುಪಿಯ ಮೀನುಗಾರಿಕೆ ಇಲಾಖೆ ಜಂಟಿ ನಿರ್ದೇಶಕರು ಹೊರಡಿಸಿದ್ದ ಆದೇಶವನ್ನು ರದ್ದುಪಡಿಸಿದೆ.

ADVERTISEMENT

‘ಸರ್ಕಾರಿ ಆಸ್ತಿಯನ್ನು ಸಾರ್ವಜನಿಕರ ಗಮನಕ್ಕೆ ಬಾರದಂತೆ ವೈಯಕ್ತಿಕ ಹಿತಾಸಕ್ತಿಗಳಡಿ ಬೇಕೆಂದವರಿಗೆ ಮನಬಂದಂತೆ ಹಂಚಿಕೆ ಮಾಡಲು ಅವಕಾಶವಿಲ್ಲ. ಒಂದು ವೇಳೆ ಇದೇ ಪ್ರವೃತ್ತಿ ಮರುಕಳಿಸಿದರೆ ಅದನ್ನು ಗಂಭೀರವಾಗಿ ಪರಿಗಣಿಸಲಾಗುವುದು ಮತ್ತು ಕೋರ್ಟ್‌ ಯಾವುದೇ ವಿನಾಯ್ತಿ ನೀಡುವುದಿಲ್ಲ’ ಎಂದು ನ್ಯಾಯಪೀಠ ಖಡಕ್‌ ಎಚ್ಚರಿಕೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.