ADVERTISEMENT

ಸರ್ವರಿಗೂ ಸೂರು | ಸರ್ಕಾರದ ಪಾಲಿನ ಮೊತ್ತ ಹೆಚ್ಚಳ: ವಸತಿ ಸಚಿವ ವಿ.ಸೋಮಣ್ಣ

​ಪ್ರಜಾವಾಣಿ ವಾರ್ತೆ
Published 4 ಜನವರಿ 2023, 16:19 IST
Last Updated 4 ಜನವರಿ 2023, 16:19 IST
ವಸತಿ ಸಚಿವ ವಿ.ಸೋಮಣ್ಣ
ವಸತಿ ಸಚಿವ ವಿ.ಸೋಮಣ್ಣ    

ಬೆಂಗಳೂರು: ಸರ್ವರಿಗೂ ಸೂರು ಯೋಜನೆಯಡಿ (ಪಿಎಂ ಆವಾಸ್) ನಿರ್ಮಿಸುವ ಮನೆಗಳಿಗೆ ರಾಜ್ಯ ಸರ್ಕಾರದ ಪಾಲಿನ ಮೊತ್ತ ಗ್ರಾಮೀಣ ಪ್ರದೇಶದವರಿಗೆ ₹1.20 ಲಕ್ಷದಿಂದ ₹3 ಲಕ್ಷಕ್ಕೂ, ನಗರ ಪ್ರದೇಶದಲ್ಲಿ ₹2.70 ಲಕ್ಷದಿಂದ ₹ 4 ಲಕ್ಷಕ್ಕೆ ಹೆಚ್ಚಿಸಲು ತೀರ್ಮಾನಿಸಿದ್ದು, ಹೆಚ್ಚಳವನ್ನು ಮುಂದಿನ ಬಜೆಟ್‌ನಲ್ಲಿ ಘೋಷಿಸಲಾಗುವುದು ಎಂದು ವಸತಿ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಬುಧವಾರ ಅಧಿಕಾರಿಗಳ ಸಭೆ ನಡೆಸಿದ ಅವರು, ಬಳಿಕ ಸುದ್ದಿಗಾರರ ಜತೆ ಮಾತನಾಡಿದರು. ಎಲ್ಲ ವರ್ಗದ ಫಲಾನುಭವಿಗಳಿಗೂ ಏಕಪ್ರಕಾರದಲ್ಲಿ ಹೆಚ್ಚಳ ಮಾಡಲಾಗುವುದು. ಒಂದು ಮನೆಗೆ ₹4.50 ಲಕ್ಷದಿಂದ ₹5 ಲಕ್ಷ ವೆಚ್ಚವಾಗುತ್ತದೆ. ಫಲಾನುಭವಿಗಳು ತಲಾ ₹1 ಲಕ್ಷ ಪಾವತಿಸಿದರೆ ಸಾಕಾಗುತ್ತದೆ ಎಂದು ಹೇಳಿದರು.

ಈಗ ಗ್ರಾಮೀಣ ಪ್ರದೇಶದಲ್ಲಿ ಪ್ರತಿ ಫಲಾನುಭವಿಗೆ ₹1.20 ಲಕ್ಷ ಮತ್ತು ನಗರ ಪ್ರದೇಶದಲ್ಲಿ 2.70 ಲಕ್ಷ ನೀಡಲಾಗುತ್ತಿದೆ ಎಂದು ಸೋಮಣ್ಣ ತಿಳಿಸಿದರು.

ADVERTISEMENT

ಈ ಯೋಜನೆಯಡಿ 2016–17 ರಲ್ಲಿ ರಾಜ್ಯದ ವಿವಿಧ ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಒಟ್ಟು 1.80 ಲಕ್ಷ ಮನೆಗಳ ನಿರ್ಮಾಣಕ್ಕೆ ಕೇಂದ್ರದಿಂದ ಅನುಮೋದನೆ ಸಿಕ್ಕಿತ್ತು. ಆದರೆ, ನಾನು ಇಲಾಖೆ ಉಸ್ತುವಾರಿ ವಹಿಸಿಕೊಂಡ ಬಳಿಕವೇ ಟೆಂಡರ್‌ ಕರೆದು, ಕಾರ್ಯಾದೇಶವನ್ನೂ ಕೊಟ್ಟು ಚಾಲನೆ ನೀಡಿದೆ. ಅದಕ್ಕೆ ಮೊದಲು ಹಿಂದಿನ ಸರ್ಕಾರದವರು ಏನೂ ಮಾಡಿರಲಿಲ್ಲ. ನನ್ನ ಪ್ರಯತ್ನದ ಪರಿಣಾಮ ಒಟ್ಟು 44,165 ಮನೆಗಳು ಪೂರ್ಣಗೊಂಡಿವೆ. ಇದಕ್ಕೆ ₹2,483 ಕೋಟಿ ವೆಚ್ಚವಾಗಿದೆ. ಉಳಿದ ₹83 ಸಾವಿರ ಮನೆಗಳು ಮಾರ್ಚ್‌ ಒಳಗೆ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.

ಎರಡನೇ ಹಂತದಲ್ಲಿ 97,134 ಮನೆಗಳ ನಿರ್ಮಾಣಕ್ಕೆ ಆಡಳಿತಾತ್ಮಕ ಅನುಮೋದನೆ ಮತ್ತು ಕಾರ್ಯಾದೇಶವನ್ನೂ ನೀಡಲಾಗಿದೆ. ಈ ಪೈಕಿ 3,600 ಮನೆಗಳ ನಿರ್ಮಾಣ ಆರಂಭಿಸಿದ್ದು, 1,287 ಮನೆಗಳ ನಿರ್ಮಾಣ ಪೂರ್ಣಗೊಂಡಿದೆ. ಇದಕ್ಕಾಗಿ ₹3,141 ಕೋಟಿ ಬಿಡುಗಡೆ ಮಾಡಲಾಗಿದೆ ಎಂದು ಅವರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.