ADVERTISEMENT

ಸಿಎಸ್‌ಆರ್‌ ನಿಧಿ ಬಳಕೆಗೆ ನೀತಿ: ಸಚಿವ ಎಂ.ಟಿ.ಬಿ.ನಾಗರಾಜ್‌

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2022, 16:14 IST
Last Updated 22 ಮಾರ್ಚ್ 2022, 16:14 IST
ಎಂ ಟಿ ಬಿ ನಾಗರಾಜ್
ಎಂ ಟಿ ಬಿ ನಾಗರಾಜ್   

ಬೆಂಗಳೂರು: ರಾಜ್ಯ ಸರ್ಕಾರಿ ಸ್ವಾಮ್ಯದ ಸಾರ್ವಜನಿಕ ಉದ್ದಿಮೆಗಳ ಕಾರ್ಪೋರೇಟ್‌ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್‌) ನಿಧಿ ಬಳಕೆಗೆ ನೀತಿ ರೂಪಿಸಲಾಗುವುದು ಎಂದು ಸಾರ್ವಜನಿಕ ಉದ್ದಿಮೆಗಳ ಖಾತೆ ಸಚಿವ ಎಂ.ಟಿ.ಬಿ.ನಾಗರಾಜ್‌ ತಿಳಿಸಿದರು.

ವಿಧಾನ ಪರಿಷತ್‌ನಲ್ಲಿ ಜೆಡಿಎಸ್‌ನ ಕೆ.ಟಿ. ಶ್ರೀಕಂಠೇಗೌಡ ಪ್ರಶ್ನೆಗೆ ಮಂಗಳವಾರ ಉತ್ತರಿಸಿದ ಅವರು, ‘ಕಂಪನಿ ಕಾಯ್ದೆಯ ಸೆಕ್ಷನ್‌ 135ರ ಪ್ರಕಾರ ಎಲ್ಲ ಉದ್ದಿಮೆಗಳೂ ತಮ್ಮ ಲಾಭಾಂಶದ ಶೇಕಡ 2ರಷ್ಟನ್ನು ಸಿಎಸ್‌ಆರ್‌ ನಿಧಿಯ ರೂಪದಲ್ಲಿ ಸಾರ್ವಜನಿಕ ಕೆಲಸಗಳಿಗೆ ಬಳಸಬೇಕು. ಸರ್ಕಾರಿ ಸ್ವಾಮ್ಯದ ಉದ್ದಿಮೆಗಳು ಈ ಮೊತ್ತವನ್ನು ಹೇಗೆ ಬಳಸಬೇಕೆಂಬ ನೀತಿ ಇಲ್ಲ. ಇದರಿಂದಾಗಿ ಸಿಎಸ್‌ಆರ್‌ ನಿಧಿ ಬಳಕೆಯಲ್ಲಿ ಕೆಲವು ಸಮಸ್ಯೆಗಳಿವೆ’ ಎಂದರು.

ಸ್ಥಳೀಯ ಆಡಳಿತ ಸಂಸ್ಥೆಗಳು ಮತ್ತು ಆಯಾ ಪ್ರದೇಶದ ನಾಗರಿಕರ ಬೇಡಿಕೆಗಳನ್ನು ಆಧರಿಸಿ ಸಿಎಸ್‌ಆರ್‌ ನಿಧಿ ಬಳಸುವುದನ್ನು ಕಡ್ಡಾಯಗೊಳಿಸಲಾಗುವುದು. ಅದಕ್ಕೆ ಪೂರಕವಾಗಿ ನೀತಿಯೊಂದನ್ನು ರೂಪಿಸಿ, ಜಾರಿಗೊಳಿಸಲಾಗುವುದು ಎಂದು ತಿಳಿಸಿದರು.

ADVERTISEMENT

ಜೆಡಿಎಸ್‌ನ ಕೆ.ಎ. ತಿಪ್ಪೇಸ್ವಾಮಿ ಪ್ರಶ್ನೆಗೆ ಉತ್ತರಿಸಿದ ಸಚಿವರು, ‘ರಾಜ್ಯ ಸರ್ಕಾರದ ಅಧೀನದಲ್ಲಿ 60 ಸಾರ್ವಜನಿಕ ಉದ್ದಿಮೆಗಳಿವೆ. ಅವುಗಳಲ್ಲಿ 34 ಲಾಭದಲ್ಲಿವೆ. 24 ಉದ್ದಿಮೆಗಳು ನಿಷ್ಕ್ರಿಯಗೊಂಡಿವೆ’ ಎಂದು ವಿವರ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.