ADVERTISEMENT

ಯಾರನ್ನೂ ಬಿಡುವುದಿಲ್ಲ: ಆರಗ ಜ್ಞಾನೇಂದ್ರ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2022, 16:30 IST
Last Updated 24 ಮಾರ್ಚ್ 2022, 16:30 IST
   

ಬೆಂಗಳೂರು: ‘ಅಪರಾಧ ಕೃತ್ಯಗಳಲ್ಲಿ ಭಾಗಿಯಾದವರನ್ನು ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್‌ ಎಂದು ನೋಡುವುದಿಲ್ಲ. ಆರ್‌ಎಸ್‌ಎಸ್‌, ಬಜರಂಗದಳ ಸೇರಿದಂತೆ ಯಾವುದೇ ಸಂಘಟನೆ ಸದಸ್ಯರು ಅಪರಾಧ ಕೃತ್ಯದಲ್ಲಿ ಭಾಗಿಯಾದರೂ ಕ್ರಮ ನಿಶ್ಚಿತ’ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

ಕಾನೂನು ಸುವ್ಯವಸ್ಥೆ ಕುರಿತು ನಡೆದ ಚರ್ಚೆಗೆ ಉತ್ತರಿಸಿದ ಅವರು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಉತ್ತಮವಾಗಿದೆ. ಯಾವ ಲೋಪವೂ ಆಗಿಲ್ಲ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಸರಣಿ ಹತ್ಯೆಗಳು ನಡೆದಿದ್ದವು. ಆಗಿನಿಂದಲೇ ಪಿಎಫ್‌ಐ ಸಂಘಟನೆ ಬೆಳೆದು ನಿಂತಿತು. ಎಲ್ಲ ಮುಸ್ಲಿಮರೂ ಕೆಟ್ಟವರಲ್ಲ. ಕೆಲವು ಮೂಲಭೂತ ಶಕ್ತಿಗಳು ಹೆಡೆ ಎತ್ತಿ ನಿಂತಿವೆ. ಅವುಗಳನ್ನು ಬಗ್ಗುಬಡಿಯಲು ಸರ್ಕಾರ ಸಿದ್ಧ ಎಂದು ಹೇಳಿದರು.

ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ 80 ಕೋಮು ಸಂಘರ್ಷದ ಪ್ರಕರಣ ನಡೆದಿದ್ದು, 47 ಆಸ್ತಿ ಹಾನಿ ಪ್ರಕರಣ ದಾಖಲಾಗಿದ್ದವು. 142 ಜನರನ್ನು ಬಂಧಿಸಲಾಗಿತ್ತು. ಬಿಜೆಪಿ ಸರ್ಕಾರದ ಅವಧಿಯಲ್ಲಿ 40 ಕೋಮು ಸಂಘರ್ಷ ಪ್ರಕರಣ, 30 ಆಸ್ತಿ ಹಾನಿ ಪ್ರಕರಣ ನಡೆದಿದ್ದು, 145 ಜನರನ್ನು ಬಂಧಿಸಲಾಗಿದೆ ಎಂದು ವಿವರ ನೀಡಿದರು.

ADVERTISEMENT

ಲಂಚಕ್ಕೆ ಆಸ್ಪದವಿಲ್ಲ: ‘ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಗೃಹ ಸಚಿವರಿಗೆ ಸಲಹೆಗಾರರಾಗಿ ಕೆಂಪಯ್ಯ ಇದ್ದರು. ಅವರ ಕುರಿತು ಮಾಧ್ಯಮಗಳಲ್ಲಿ ಏನು ವರದಿಗಳು ಬಂದಿದ್ದವು ಒಮ್ಮೆ ನೋಡಿ. ಪೊಲೀಸ್‌ ಇಲಾಖೆಯಲ್ಲಿ ಲಂಚದ ಹಾವಳಿಗೆ ದೀರ್ಘ ಇತಿಹಾಸವಿದೆ. ನಾನಾದರೂ ಶುದ್ಧವಾಗಿರಬೇಕು ಅಂದುಕೊಂಡಿದ್ದೇನೆ. ಯಾರೇ ಲಂಚ ಕೇಳಿದರೂ ನನಗೆ ನೇರವಾಗಿ ದೂರು ನೀಡಬಹುದು’ ಎಂದು ಜ್ಞಾನೇಂದ್ರ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.