ADVERTISEMENT

ದೇವಸ್ಥಾನಗಳಲ್ಲಿ ಗೋಪೂಜೆ ಕಡ್ಡಾಯ: ಧಾರ್ಮಿಕ ದತ್ತಿ ಇಲಾಖೆ ಆದೇಶ

ಹಿಂದೂ ಧರ್ಮದ ಸಂಪ್ರದಾಯ ಮುಂದುವರಿಸಲು ಬಲಿಪಾಡ್ಯಮಿ ದಿನ ಪೂಜೆ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2021, 19:19 IST
Last Updated 26 ಅಕ್ಟೋಬರ್ 2021, 19:19 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯಲ್ಲಿರುವ ಎಲ್ಲ ದೇವಸ್ಥಾನಗಳಲ್ಲಿ ಬಲಿಪಾಡ್ಯಮಿ ದಿನದಂದು ಕಡ್ಡಾಯವಾಗಿ ಶಾಸ್ತ್ರೋಕ್ತವಾಗಿ ಗೋಪೂಜೆ ನೆರವೇರಿಸುವಂತೆ ಧಾರ್ಮಿಕ ದತ್ತಿ ಆಯುಕ್ತರು ಸೂಚಿಸಿದ್ದಾರೆ.

ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ಅವರ ಟಿಪ್ಪಣಿ ಆಧರಿಸಿ ಈ ಸಂಬಂಧ ಸೋಮವಾರ ಸುತ್ತೋಲೆ ಹೊರಡಿಸಲಾಗಿದೆ.

‘ಬಲಿಪಾಡ್ಯಮಿಯ ದಿನವಾದ ನವೆಂಬರ್ 5ರಂದು ಧಾರ್ಮಿಕ ದತ್ತಿ ಇಲಾಖೆಯ ಅಧೀನದ ಎಲ್ಲ ದೇವಸ್ಥಾನಗಳು ಮತ್ತು ಸಂಸ್ಥೆಗಳಲ್ಲಿ ಸನಾತನ ಹಿಂದೂ ಧರ್ಮದ ವಿಧಿ ವಿಧಾನಗಳ ಪ್ರಕಾರ ಗೋಪೂಜೆ ನೆರವೇರಿಸಬೇಕು’ ಎಂದು ಸೂಚಿಸ ಲಾಗಿದೆ.

ADVERTISEMENT

‘ಪ್ರತಿ ದೇವಾಲಯದಲ್ಲಿ ಒಂದೊಂದು ಗೋಮಾತೆಯನ್ನು ಪೂಜಿಸಬೇಕು. ಗೋವುಗಳಿಗೆ ಸ್ನಾನ ಮಾಡಿಸಿ, ದೇವಾಲಯಕ್ಕೆ ಕರೆತಂದು ಅರಿಸಿನ, ಕುಂಕುಮ, ಹೂವುಗಳಿಂದ ಅಲಂಕರಿಸಿ, ಅಕ್ಕಿ, ಬೆಲ್ಲ, ಬಾಳೆಹಣ್ಣು, ಸಿಹಿ ತಿನಿಸು ಮುಂತಾದ ಗೋಗ್ರಾಸವನ್ನು ಹಸುವಿಗೆ ನೀಡಬೇಕು. ಗೋವುಗಳನ್ನು ಧೂಪ, ದೀಪಗಳಿಂದ ಪೂಜಿಸಿ, ನಮಸ್ಕರಿಸುವ ವ್ಯವಸ್ಥೆ ಮಾಡಬೇಕು. ನ.5ರಂದು ಸಂಜೆ 5.30ರಿಂದ 6.30ರ ಅವಧಿಯಲ್ಲಿ ಗೋಧೂಳಿ ಲಗ್ನದಲ್ಲಿ ದೇವಸ್ಥಾನಗಳಲ್ಲಿ ಗೋಪೂಜೆ ನಡೆಸಬೇಕು’ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

‘ಪಟ್ಟಣ, ಮಹಾನಗರಗಳಲ್ಲಿ ವಾಸಿಸುವ ಜನರು ಇತ್ತೀಚಿನ ದಿನಗಳಲ್ಲಿ ಗೋಪೂಜೆಯನ್ನು ಮರೆತುಬಿಡುತ್ತಿದ್ದಾರೆ. ಹಿಂದೂ ಧರ್ಮದಲ್ಲಿ ಗೋವನ್ನು ದೇವತೆ ಎಂದು ತಿಳಿದು ಪೂಜಿಸುವ ಸತ್ಸಂಪ್ರದಾಯವನ್ನು ಮುಂದುವರಿಸುವ ದೃಷ್ಟಿಯಿಂದ ಧಾರ್ಮಿಕ ದತ್ತಿ ಇಲಾಖೆಯ ದೇವಸ್ಥಾನಗಳು, ಸಂಸ್ಥೆಗಳಲ್ಲಿ ಬಲಿಪಾಡ್ಯಮಿಯಂದು ಕಡ್ಡಾಯವಾಗಿ ಗೋಪೂಜೆ ನಡೆಸಬೇಕು’ ಎಂದು ಸುತ್ತೋಲೆಯಲ್ಲಿ ನಿರ್ದೇಶನ ನೀಡಲಾಗಿದೆ.

‘ಹಿಂದೂ ಧರ್ಮದಲ್ಲಿ ಗೋವುಗಳಿಗೆ ತಾಯಿಯ ಸ್ಥಾನವಿದೆ. ಗೋಮಾತೆ ದೇವತೆ ಎಂದು ಭಾವಿಸಿ ಪೂಜಿಸಲಾಗುತ್ತಿದೆ. ಗೋಮಾತೆ ಪೂಜಸಿದರೆ ಅನೇಕ ಸಮಸ್ಯೆಗಳ ಜತೆಗೆ ವಾಸ್ತು ದೋಷವೂ ನಿವಾರಣೆಯಾಗುತ್ತದೆ ಎಂಬ ಬಲವಾದ ನಂಬಿಕೆ ಸಮಾಜದಲ್ಲಿದೆ. ಭಗವದ್ಗೀತೆ, ಭಾಗವತ ಮಹಾಪುರಾಣ ಸೇರಿದಂತೆ ಅನೇಕ ಪುರಾಣಗಳಲ್ಲಿ ಗೋವುಗಳ ಮಹತ್ವವನ್ನು ಉಲ್ಲೇಖಿಸಿರುವುದನ್ನು ಕಾಣಬಹುದು. ಶ್ರೀಕೃಷ್ಣನು ಗೋವುಗಳನ್ನು ಪೂಜಿಸಿ, ರಕ್ಷಿಸಿ ಉತ್ತಮ ಫಲ ಪಡೆದನು ಮತ್ತು ಗೋವುಗಳಲ್ಲಿ ಹಿಂದೂ ದೇವತೆಗಳು ನೆಲೆಸಿರುತ್ತಾರೆ ಎಂಬುದಾಗಿಯೂ ಹಿಂದೂ ಗ್ರಂಥಗಳು ಹೇಳು ತ್ತವೆ’ ಎಂಬ ಉಲ್ಲೇಖವೂ ಸುತ್ತೋಲೆಯಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.