ADVERTISEMENT

ಬೆಳಗಾವಿ, ಧರ್ಮಸ್ಥಳದಲ್ಲಿ ರಾಕೆಟ್ ಬಾಂಬ್!

ಗೌರಿ ಲಂಕೇಶ್ ಹತ್ಯೆ ಆರೋಪಿ ಶರದ್ ಕಳಾಸ್ಕರ್ ಹೇಳಿಕೆ l ನಾಡ ಬಾಂಬ್ ಸ್ಫೋಟಿಸಿ ತರಬೇತಿ

ಎಂ.ಸಿ.ಮಂಜುನಾಥ
Published 5 ಜನವರಿ 2019, 19:46 IST
Last Updated 5 ಜನವರಿ 2019, 19:46 IST
   

ಬೆಂಗಳೂರು: ರಾಜ್ಯದಲ್ಲಿ ಕೆಲ ವಿಚಾರವಾದಿಗಳನ್ನು ಮುಗಿಸಲು ನಿರ್ಧರಿಸಿದ್ದ ಮಹಾರಾಷ್ಟ್ರದ ದಂತ ವೈದ್ಯ ವೀರೇಂದ್ರ ತಾವಡೆ ಹಾಗೂ ಅಮೋಲ್ ಕಾಳೆ, ಜಾಲದ ಸದಸ್ಯರಿಗೆ ತರಬೇತಿ ನೀಡುವ ಸಲುವಾಗಿ ಬೆಳಗಾವಿ ಹಾಗೂ ಧರ್ಮಸ್ಥಳದ ಅರಣ್ಯ ಪ್ರದೇಶಗಳಲ್ಲಿ ಪ್ರಾಯೋಗಿಕವಾಗಿ ರಾಕೆಟ್ ಬಾಂಬ್‌ಗಳನ್ನೂ ಸ್ಫೋಟಿಸಿದ್ದರು!

ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಬಂಧಿತನಾಗಿರುವ ಔರಂಗಬಾದ್‌ನ ಶರದ್ ಕಳಾಸ್ಕರ್ ಅಲಿಯಾಸ್ ಛೋಟು, ತಪ್ಪೊಪ್ಪಿಗೆ ಹೇಳಿಕೆಯಲ್ಲಿ ಈ ವಿಷಯ ತಿಳಿಸಿದ್ದಾನೆ. ಆರೋಪಪಟ್ಟಿಯಲ್ಲಿರುವ ಆತನ ಹೇಳಿಕೆಯ ಪೂರ್ಣಪಾಠ ಇಲ್ಲಿದೆ.

‘2010–11ರಲ್ಲಿ ಹೃಷಿಕೇಶ್ ದೇವಡೇಕರ್ ಅಲಿಯಾಸ್ ಮುರಳಿ, ಸಚಿನ್ ಅಂಡುರೆ (ಆರೋಪಿಗಳು) ಸೇರಿದಂತೆ ಸುಮಾರು 15 ಜನ ಪ್ರಮುಖರು ನಮ್ಮ ಊರಿಗೆ ಬಂದು ಹಿಂದೂ ಧರ್ಮದ ಬಗ್ಗೆ ಶಿಕ್ಷಣ ಕೊಡುತ್ತಿದ್ದರು. ಹೃಷಿಕೇಶ್ ಅವರು ಸೊಲ್ಲಾಪುರದವರಾಗಿದ್ದು, ಔರಂಗಬಾದ್‌ನಲ್ಲಿ ‘ಪತಂಜಲಿ’ ಅಂಗಡಿ ಇಟ್ಟುಕೊಂಡಿದ್ದರು. ಅವರು ಆಯೋಜಿಸುತ್ತಿದ್ದ ಸಭೆಗಳಲ್ಲಿ ನಾನೂ ಪಾಲ್ಗೊಳ್ಳುತ್ತಿದ್ದೆ.’

ADVERTISEMENT

‘ವಿಕಾಸ್ ಪಾಟೀಲ್ ಅಲಿಯಾಸ್ ದಾದಾ (ಪ್ರಮುಖ ಆರೋಪಿ) ನನಗೆ ಲವ್ ಜಿಹಾದ್, ಗೋಹತ್ಯೆ, ಧರ್ಮಾಂದತೆಗೆ ಸಂಬಂಧಿಸಿದ ವಿಡಿಯೊಗಳನ್ನು ತೋರಿಸಿದ್ದರು. ಅವುಗಳಿಂದ ಪ್ರಭಾವಿತನಾಗಿ, ಅವರೊಟ್ಟಿಗೆ ನಾನೂ ಊರೂರಿಗೆ ಹೋಗಿ ಸಭೆಗಳಲ್ಲಿ ಭಾಗಿಯಾಗಲು ಶುರು ಮಾಡಿದೆ. ಕ್ರಮೇಣ ಹಿಂದೂ ಧರ್ಮದ ಪರ ನಿಷ್ಠೆ, ಯೋಚನೆಗಳು ಹೆಚ್ಚಾದವು. 2013ರ ಜನವರಿ ನಂತರ ಅವರೇ ವೀರೇಂದ್ರ ತಾವಡೆ ಹಾಗೂ ಅಮಿತ್ ದೆಗ್ವೇಕರ್ ಅವರನ್ನು ಭೇಟಿ ಮಾಡಿಸಿದರು.’

‘ಹಿಂದೂ ಧರ್ಮದ ಬಗ್ಗೆ ಕೆಟ್ಟದಾಗಿ ಮಾತನಾಡುವವರನ್ನು ಮುಗಿಸಲು ಸಿದ್ಧವಾಗುವಂತೆ ನನಗೆ ಹೇಳಿದ ತಾವಡೆ, ‘ಏರ್‌ಗನ್ ಹಾಗೂ ಪೆಲೆಟ್ಸ್‌ಗಳನ್ನು ಖರೀದಿಸಿ, ಸ್ನೇಹಿತ ಉಮೇಶ್ ಸುರಾಸೆಯ ಹೊಲದಲ್ಲಿ ಶೂಟಿಂಗ್ ತರಬೇತಿ ನಡೆಸು’ ಎಂದು ₹ 2 ಸಾವಿರ ಕೊಟ್ಟರು. ಕೆಲ ದಿನಗಳ ಅಭ್ಯಾಸದ ಬಳಿಕ, ಔರಂಗಬಾದ್‌ನಿಂದ 25 ಕಿ.ಮೀ ದೂರವಿರುವ ಸುಲಿಬಂಜನ್ ಅರಣ್ಯ ಪ್ರದೇಶದಲ್ಲಿ ಅಸಲಿ ಪಿಸ್ತೂಲ್‌ನಿಂದ ತರಬೇತಿಯನ್ನೂ ನೀಡಿದರು.’

‘2013ರ ಆ.20ರಂದು ತಾವಡೆ ಸೂಚನೆಯಂತೆ ನಾನು ಹಾಗೂ ಅಂಡುರೆ ಮಹಾರಾಷ್ಟ್ರದ ವಿಚಾರವಾದಿ ನರೇಂದ್ರ ದಾಭೋಲ್ಕರ್ ಅವರ ‘ಈವೆಂಟ್‌’ನಲ್ಲಿ ಭಾಗಿಯಾಗಿದ್ದೆವು. ತಾವಡೆ ಅವರ ಪ್ರಕಾರ ಈವೆಂಟ್ ಎಂದರೆ ‘ಧರ್ಮ ವಿರೋಧಿಗಳ ಸಮಾಪ್ತಿ’ ಎಂದರ್ಥ. ಬಳಿಕ ಅವರೇ ನನಗೆ ಅಮೋಲ್ ಕಾಳೆಯ ಪರಿಚಯ ಮಾಡಿಸಿದರು. ದಾಭೋಲ್ಕರ್ ಹತ್ಯೆಯನ್ನು ‘ದೇವರ ಕೆಲಸ’ ಎಂದು ಹೇಳಿದ ಅವರು, ನಾನು ಅದೇ ಕಾರ್ಯದಲ್ಲಿ ಮುಂದುವರಿಯುವಂತೆ ಮಾಡಿದರು.’

‘2014ರ ಡಿಸೆಂಬರ್‌ನಲ್ಲಿ ಅಂಡುರೆ ಜತೆ ಬೆಳಗಾವಿಗೆ ಹೋದೆ. ತಾವಡೆ, ಅಮಿತ್ ದೆಗ್ವೇಕರ್ ಸೇರಿದಂತೆ ಸುಮಾರು
15 ಜನ ಅಲ್ಲೇ ಇದ್ದರು. ಟೆಂಪೊ ಹಾಗೂ ಆಟೊದಲ್ಲಿ ಜಾಂಬೋಟಿ ಅರಣ್ಯ ಪ್ರದೇಶದಲ್ಲಿರುವ ಭರತ್ ಕುರ್ನೆಯ (ಬಂಧಿತ ಆರೋಪಿ) ಜಮೀನಿಗೆ ತೆರಳಿದೆವು. ಅಲ್ಲಿ ಅಮಿತ್ ಕಬ್ಬಿಣದ ಕೊಳವೆಯಲ್ಲಿ ಜಿಲೆಟಿನ್ ಹಾಗೂ ಡಿಟೇನೋಟರ್ ಹಾಕಿ, ಆಳವಾದ ಗುಂಡಿಯಲ್ಲಿ ಮುಚ್ಚಿದರು. ಬ್ಯಾಟರಿ ಸಹಾಯದಿಂದ ರಾತ್ರಿ 9.30ರ ಸುಮಾರಿಗೆ ಆ ಜಾಗವನ್ನು ಸ್ಫೋಟಿಸಿದರು. ನಂತರ, ‘ಮುಂದಿನ ಧರ್ಮಕಾರ್ಯಕ್ಕೆ ಎಲ್ಲರೂ ಸಿದ್ಧರಾಗಿ’ ಎಂದು ಕೂಗಿ ಹೇಳಿದರು.’

‘2015ರ ಜನವರಿಯಲ್ಲಿ ಪುನಃ ನನ್ನನ್ನು ಭೇಟಿಯಾದ ತಾವಡೆ, ‘ಕರ್ನಾಟಕದಲ್ಲಿ ಇಬ್ಬರು ಧರ್ಮ ವಿರೋಧಿಗಳನ್ನು ನಾಶ ಮಾಡುವುದಿದೆ. ಬೆಳಗಾವಿಗೆ ಹೋಗಿ ಸಿದ್ಧತೆ ಮಾಡಿಕೊ. ನೀನೇ ಪಿಸ್ತೂಲ್‌ಗಳನ್ನು ತಯಾರಿಸು’ ಎಂದರು. ಅಂತೆಯೇ ಬೆಳಗಾವಿಗೆ ಬಂದು ಕುರ್ನೆ ಜತೆ ಉಳಿದುಕೊಂಡೆ.’

‘ಅದೇ ವರ್ಷದ ಆಗಸ್ಟ್‌ನಲ್ಲಿ ತರಬೇತಿ ಸಲುವಾಗಿ ಧರ್ಮಸ್ಥಳಕ್ಕೂ ಕರೆದೊಯ್ದರು. ಅಲ್ಲಿ ಬಂಗಾಳದ ಪ್ರತಾಪ್ ಹಜಾರ (ಮಹಾರಾಷ್ಟ್ರದಲ್ಲಿ ತರಬೇತಿಕೊಡುತ್ತಿದ್ದವರು) ಹಾಗೂ ಅಮೋಲ್ ಕಾಳೆ ಪ್ರಾಯೋಗಿಕವಾಗಿ ಬಾಂಬ್ ಸ್ಫೋಟಿಸಿ ತೋರಿಸಿದರು. ಆ ಜಾಗದ ಹೆಸರು ಪಿಲಾತಬೆಟ್ಟ. ಅಲ್ಲಿ ಒಂದು ಗೋಶಾಲೆಯೂ ಇತ್ತು.’

‘ಅಲ್ಲಿ ಎಲ್ಲರೂ ಒಂದೊಂದು ನಾಡಬಾಂಬ್ ತಯಾರಿಸಿ, ಎಲ್ಲವನ್ನೂ ನಾವೇ ಸ್ಫೋಟಿಸಿದೆವು. ರಾಕೆಟ್ ಬಾಂಬನ್ನೂ ಸಿಡಿಸಿದೆವು. ಇದೇ ಸಮಯದಲ್ಲಿ ಮೂಡಬಿದಿರೆಯಲ್ಲಿ ಪ್ರಶಾಂತ್ ಪೂಜಾರಿ ಎಂಬ ಗೋರಕ್ಷಕನ ಕೊಲೆಯಾಗಿದ್ದರಿಂದ ಪೊಲೀಸ್ ಗಸ್ತು ಹೆಚ್ಚಾಗಿತ್ತು. ಹೀಗಾಗಿ, ತರಬೇತಿ ನಿಲ್ಲಿಸಿ ಬೆಳಗಾವಿಗೆ ವಾಪಸಾದೆವು.’

‘2017ರ ಜನವರಿ–ಫೆಬ್ರುವರಿಯಲ್ಲಿ ಒಂದು ಪಿಸ್ತೂಲ್ ತಯಾರಿಸಿ ಕಾಳೆಗೆ ಕೊಟ್ಟೆ. ಆ ನಂತರ ಗೌರಿ ಲಂಕೇಶ್ ‘ಈವೆಂಟ್’ ಸಂಬಂಧ ಹಲವು ಸಭೆಗಳು ನಡೆದವು. ಪಿಸ್ತೂಲ್ ಬಳಕೆ ಬಗ್ಗೆ ಪರಶುರಾಮ್ ವಾಘ್ಮೊರೆಗೆ ಬೆಳಗಾವಿಯಲ್ಲೇ ತರಬೇತಿ ನೀಡಿದೆವು. ಅಂದುಕೊಂಡಂತೆ 2017ರ ಸೆ.5ರಂದು ಗೌರಿ ಲಂಕೇಶ್ ‘ಈವೆಂಟ್’ ಮುಗಿಯಿತು’ ಎಂದು ಕಳಾಸ್ಕರ್ ಸಂಚನ್ನು ಎಳೆಎಳೆಯಾಗಿ ವಿವರಿಸಿದ್ದಾನೆ.

ಬೈಕ್ ಕೊಲ್ಲಾಪುರಕ್ಕೆ ಸಾಗಿಸಿದೆ’

‘ಗೌರಿ ಹತ್ಯೆ ನಡೆದ ವಾರದ ಬಳಿಕ ಅಮಿತ್ ಬದ್ದಿ ಹಾಗೂ ಗಣೇಶ್ ಮಿಸ್ಕಿನ್ (ಬಂಧಿತರು) ಬೈಕ್ ತಂದು ಕೊಟ್ಟರು. ಕೊಲ್ಲಾಪುರದ ಕೊವಾಡ್‌ಗೆ ತೆರಳಿ ಅಭಿಜಿತ್ ಪಾಟೀಲ್ ಎಂಬುವರಿಗೆ ಆ ಬೈಕ್ ತಲುಪಿಸಿದೆ. ಅದು ಗೌರಿ ಅವರನ್ನು ಕೊಲ್ಲಲು ಬಳಸಿದ್ದ ಪ್ಯಾಷನ್ ಬೈಕ್ ಆಗಿತ್ತು. ಗೌರಿ ಹತ್ಯೆಗೆ ಬಳಸಿದ ಪಿಸ್ತೂಲನ್ನು ಮುಂಬೈ–ನಾಸಿಕ್ ಹೆದ್ದಾರಿಯಲ್ಲಿ ಸಿಗುವ ಉಲ್ಲಾಸ್ ನದಿಗೆ ಎಸೆದು ಬಂದಿದ್ದೆವು’ ಎಂದೂ ಕಳಾಸ್ಕರ್ ಹೇಳಿದ್ದಾನೆ.

ಮಂಗಳೂರಿನ ‘ಮ್ಯಾನೇಜರ್’ ಸಹಕಾರ!

‘ಗೌರಿ ಲಂಕೇಶ್ ಮಿಷನ್ ಪೂರ್ಣಗೊಳಿಸಲು ನಮಗೆ ಮಂಗಳೂರಿನ ವ್ಯಕ್ತಿಯೊಬ್ಬರ ಸಹಕಾರ ಸಿಕ್ಕಿತು. ಅವರನ್ನು ‘ಮ್ಯಾನೇಜರ್’ ಎಂಬ ಕೋಡ್‌ವರ್ಡ್‌ನಿಂದ ಕರೆಯುತ್ತಿದ್ದೆವು’ ಎಂದು ಅಮಿತ್ ದೆಗ್ವೇಕರ್ ನೀಡಿರುವ ಹೇಳಿಕೆ ಆರೋಪಪಟ್ಟಿಯಲ್ಲಿದೆ. ಎಸ್‌ಐಟಿ ಪೊಲೀಸರು ಆ ‘ಮ್ಯಾನೇಜರ್‌’ನ ಹಿಂದೆ ಬಿದ್ದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.