ಬೆಂಗಳೂರು: ಕರ್ನಾಟಕದ 6000 ಗ್ರಾಮಪಂಚಾಯಿತಿಗಳಿಗೆ ಮಹಾತ್ಮಗಾಂಧಿ ಹೆಸರನ್ನು ಇಡಲಾಗುವುದು. ಮುಂದಿನ ಬಜೆಟ್‌ನಲ್ಲಿಯೇ ಅಧಿಕೃತ ಘೋಷಣೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದರು.
ವಿಬಿ ಜಿ ರಾಮ್ ಜಿ ಕಾಯ್ದೆ ವಿರೋಧಿಸಿ ಸ್ವಾತಂತ್ರ್ಯ ಉದ್ಯಾನದಲ್ಲಿ ಮಂಗಳವಾರ ನಡೆದ ಕಾಂಗ್ರೆಸ್ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ಗಾಂಧೀಜಿ ಅವರನ್ನು ಆರ್‌ಎಸ್‌ಎಸ್‌ನ ಗೋಡ್ಸೆ ಕೊಂದರು. ಈಗ ಆರ್‌ಎಸ್‌ಎಸ್ ಪ್ರೋತ್ಸಾಹದಿಂದಲೇ ಎರಡನೇ ಬಾರಿಗೆ ಹತ್ಯೆ ಮಾಡಿದ್ದಾರೆ. ಗಾಂಧೀಜಿ ಅವರ ಶ್ರಮ ಸಂಸ್ಕೃತಿಯ ರೂಪದಂತಿರುವ ಮನರೇಗಾ ಯೋಜನೆ ರದ್ದುಪಡಿಸಿ ಹೊಸ ಕಾಯ್ದೆ ತರಲು ಬಿಡುವುದಿಲ್ಲ. ಗಾಂಧೀಜಿ ಅವರ ಹೆಸರನ್ನು ಪಂಚಾಯಿತಿಗಳಿಗೆ ಇಡುತ್ತೇವೆ ಎಂದರು.
ಇದೇ ವಿಚಾರವಾಗಿ ಚರ್ಚಿಸಲು ವಿಶೇಷ ಅಧಿವೇಶನ ಕರೆದಿದ್ದೇವೆ. ಹೊಸ ಕಾಯ್ದೆ ವಿರುದ್ಧ ನಿರ್ಣಯ ತೆಗೆದುಕೊಳ್ಳುತ್ತೇವೆ ಎಂದರು.
ಈ ಹಿಂದೆ ಕೇಂದ್ರ ಸರ್ಕಾರ ಕೃಷಿ ಕಾಯ್ದೆಗಳಿಗೆ ತಿದ್ದುಪಡಿ ತಂದಾಗ ರೈತರು ಹೋರಾಟ ಮಾಡಿದ್ದರಿಂದ ವಾಪಸ್ ಪಡೆಯಲಾಯಿತು. ಈಗ ಕಾರ್ಮಿಕರು, ರೈತರೊಂದಿಗೆ ಸೇರಿ ಕಾಯ್ದೆ ಹಿಂಪಡೆಯುವವರೆಗೂ ಹೋರಾಟ ನಿಲ್ಲಿಸೋಲ್ಲ ಎಂದರು.
ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಮಾತನಾಡಿ, ಗ್ರಾಮಪಂಚಾಯಿತಿಗಳೇ ಉದ್ಯೋಗ ಬೇಡಿಕೆ ಆಧರಿಸಿ ಯೋಜನೆ ರೂಪಿಸಿ ವಾರ್ಷಿಕ ಅನುದಾನ ಪಡೆಯಬಹುದಿತ್ತು. ಹೊಸ ಕಾಯ್ದೆ ಪ್ರಕಾರ ಗ್ರಾಮಪಂಚಾಯಿತಿಗಳಿಗೆ ಯೋಜನೆ ನೀಡುವ ಅಧಿಕಾರವೇ ಇರುವುದಿಲ್ಲ. ಕೇಂದ್ರ ಸರ್ಕಾರದ ಅಧಿಕಾರಿಗಳೇ ದೆಹಲಿಯಲ್ಲಿ ಕುಳಿತು ಯೋಜನೆ ರೂಪಿಸಿಲಿದ್ದಾರೆ. ಯುಪಿಎ ಸರ್ಕಾರ ಜಾರಿಗೊಳಿಸದ ಉದ್ದೇಶವನ್ನೇ ಬಿಜೆಪಿ ಸರ್ಕಾರ ಧ್ವಂಸಗೊಳಿಸಿದೆ ಎಂದರು.
ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ನೇತೃತ್ಬದಲ್ಲಿ ಲೋಕಭವನಕ್ಕೆ ತೆರಳಿ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.