ADVERTISEMENT

ಹೆಬ್ಬಕ ಸಂರಕ್ಷಣೆ ಸರ್ಕಾರದ ಕರ್ತವ್ಯ: ಹೈಕೋರ್ಟ್

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2020, 16:40 IST
Last Updated 5 ಡಿಸೆಂಬರ್ 2020, 16:40 IST
ಹೆಬ್ಬಕ
ಹೆಬ್ಬಕ   

ಬೆಂಗಳೂರು: ಅವಸಾನದ ಅಂಚಿನಲ್ಲಿರುವ ಹೆಬ್ಬಕ (ಗ್ರೇಟ್ ಇಂಡಿಯನ್ ಬಸ್ಟರ್ಡ್) ಸಂರಕ್ಷಣೆಗಾಗಿ ತಕ್ಷಣದ ಕ್ರಮಗಳನ್ನು ಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.

ಬಳ್ಳಾರಿಯ ಎಡ್ವರ್ಡ್ ಸಂತೋಷ್ ಮಾರ್ಟಿನ್ ಮತ್ತು ಇತರ ಇಬ್ಬರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ, ಈ ಆದೇಶ ನೀಡಿತು.

‘ಹೆಬ್ಬಕಗಳ ಆವಾಸಸ್ಥಾನಗಳಲ್ಲಿ ನಾಗರಿಕ ಚಟುವಟಿಕೆಗಳು ಹೆಚ್ಚುತ್ತಿರುವ ಕಾರಣ ಅವುಗಳು ಅಳಿವಿನ ಅಂಚಿನಲ್ಲಿವೆ. ಪರಿಸರ ಪರಿಣಾಮ ಮೌಲ್ಯಮಾಪನ ಅಧಿಸೂಚನೆಯಲ್ಲಿನ ಸಂರಕ್ಷಿತ ಪ್ರದೇಶಗಳಲ್ಲಿ ಯಾವುದೇ ಚಟುವಟಿಕೆ ಅಥವಾ ಹೊಸ ಯೋಜನೆಗಳನ್ನು ನಿಷೇಧಿಸಬೇಕು’ ಎಂದು ಅರ್ಜಿದಾರರು ಕೋರಿದ್ದಾರೆ.

ADVERTISEMENT

‘ಭಾರತದ ಸಾಂಪ್ರದಾಯಿಕ ಪಕ್ಷಗಳಲ್ಲಿ ಹೆಬ್ಬಕ ಕೂಡ ಒಂದು. ಈಗ ಅದು ಅಪರೂಪದ ಪಕ್ಷಿಯಾಗಿದೆ. ಹುಲ್ಲುಗಾವಲು ಮತ್ತು ಕುರುಚಲು ಗಿಡಗಳಿರುವ ಪ್ರದೇಶಗಳಲ್ಲಿ ಇವು ವಾಸಿಸುತ್ತವೆ. ಈ ಪಕ್ಷಿಗಳಿರುವ ಪ್ರದೇಶಗಳಲ್ಲಿ ಸರ್ಕಾರ ಗೋಪುರಗಳನ್ನು ನಿರ್ಮಿಸಲು ಮತ್ತು ಹಲವು ಶಿಬಿರಗಳನ್ನು ನಡೆಸುತ್ತಿದೆ. ಇದರಿಂದ ಪಕ್ಷಿಗಳಿಗೆ ತೊಂದರೆಯಾಗುತ್ತಿದೆ’ ಎಂದು ಹೇಳಿದ್ದಾರೆ.

‘ವನ್ಯಜೀವಿಗಳನ್ನು ರಕ್ಷಿಸುವುದು ಸರ್ಕಾರದ ಮತ್ತು ಪ್ರತಿಯೊಬ್ಬ ನಾಗರಿಕನ ಕರ್ತವ್ಯ ಆಗಿದೆ. ಸರ್ಕಾರ ಈ ಪಕ್ಷಿಗಳ ರಕ್ಷಣೆಗೆ ಕೈಗೊಳ್ಳುತ್ತಿರುವ ಕ್ರಮಗಳ ಬಗ್ಗೆ ತಿಳಿಸುವಂತೆ’ ಪೀಠ ಹೇಳಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.