ADVERTISEMENT

ವಾರದೊಳಗೆ ಗೃಹಲಕ್ಷ್ಮಿ ಹಣ ಪಾವತಿ: ಲಕ್ಷ್ಮೀ ಹೆಬ್ಬಾಳಕರ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2025, 0:04 IST
Last Updated 22 ಫೆಬ್ರುವರಿ 2025, 0:04 IST
<div class="paragraphs"><p>ಲಕ್ಷ್ಮೀ ಹೆಬ್ಬಾಳಕರ</p></div>

ಲಕ್ಷ್ಮೀ ಹೆಬ್ಬಾಳಕರ

   

ಬೆಳಗಾವಿ: ‘ವಾರದೊಳಗೆ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಹಣ ಬಿಡುಗಡೆ ಆಗಲಿದೆ. ರಸ್ತೆ ಅಪಘಾತದಿಂದ ನಾನು ವಿಶ್ರಾಂತಿಯಲ್ಲಿದ್ದ ಕಾರಣ ಹಣ ಸಂದಾಯ ವಿಳಂಬವಾಗಿದೆ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಹೇಳಿದರು.

‘ಈವರೆಗೆ ಬೆಂಗಳೂರಿನ ಕೇಂದ್ರ ಕಚೇರಿ ಮೂಲಕ ಹಣ‌ ಬಿಡುಗಡೆ ಮಾಡಲಾಗುತಿತ್ತು. ಇದನ್ನು ವಿಕೇಂದ್ರೀಕರಣ ಮಾಡಲು ತಾಲ್ಲೂಕು ಪಂಚಾಯಿತಿ ಮೂಲಕ ಹಣ ಬಿಡುಗಡೆ ಮಾಡಿ, ನಂತರ ನಮ್ಮ ಇಲಾಖೆಯ ಶಿಶು ಯೋಜನಾಭಿವೃದ್ಧಿ ಅಧಿಕಾರಿಗಳ (ಸಿಡಿಪಿಒ) ಖಾತೆಗೆ ವರ್ಗಾವಣೆ ಮಾಡುವ ವ್ಯವಸ್ಥೆ ಜಾರಿ ಮಾಡಲಾಗಿದೆ’ ಎಂದು ಅವರು ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದರು.

ADVERTISEMENT

‘ಬಿಜೆಪಿಯವರಿಗೆ ಮಾತನಾಡುವುದನ್ನು ಬಿಟ್ಟರೆ ಬೇರೇನೂ ಬಾರದು. ಗ್ಯಾರಂಟಿ ಯೋಜನೆಗಳಿಂದ ಸರ್ಕಾರ ದಿವಾಳಿ ಆಗುತ್ತದೆ ಎಂದು ಹೇಳಿ, ನಮ್ಮ ಯೋಜನೆಗಳನ್ನೇ ಅವರು ನಕಲು ಮಾಡಿಕೊಂಡು ಬೇರೆ ರಾಜ್ಯಗಳಲ್ಲಿ ಅಧಿಕಾರಕ್ಕೆ ಬಂದಿದ್ದಾರೆ’ ಎಂದರು.

‘ಗ್ಯಾರಂಟಿ ಯೋಜನೆಗಳು ವಿಫಲ’

ಗದಗ: ‘ಗ್ಯಾರಂಟಿಗಳು ರಾಜಕೀಯ ಲಾಭಕ್ಕಾಗಿ ಮಾಡಿದ ಯೋಜನೆ. ಗೃಹಲಕ್ಷ್ಮಿ ಹಣ ಸಂಬಳವೇ ಎಂದು ಪ್ರಶ್ನಿಸುತ್ತಾರೆ. ಅದು ಗೌರವಧನ. ಪ್ರತಿ ತಿಂಗಳು ಕೊಟ್ಟಿಲ್ಲವೆಂದರೆ ಗೌರವ ಕೊಟ್ಟಿಲ್ಲ ಎಂದರ್ಥ. ಹೆಣ್ಣುಮಕ್ಕಳಿಗೆ ಗೌರವ ಕೊಡುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ’ ಎಂದು ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದರು. 

‘ಗೃಹಲಕ್ಷ್ಮಿ ಹಣ ಯಾವ ತಿಂಗಳೂ ಸರಿಯಾಗಿ ಬಂದಿಲ್ಲ. ರಾಜ್ಯ ಸರ್ಕಾರದ ಹಣಕಾಸಿನ ವ್ಯವಸ್ಥೆ ಸಂಪೂರ್ಣ ನೆಲಕಚ್ಚಿದೆ. ಆದರೆ ಮುಖ್ಯಮಂತ್ರಿಯವರು ಭಂಡತನದಿಂದ ಇದನ್ನು ಒಪ್ಪಿಕೊಳ್ಳುತ್ತಿಲ್ಲ’ ಎಂದು ಅವರು ಶುಕ್ರವಾರ ದೂರಿದರು. ‘ಗ್ಯಾರಂಟಿ ಅಷ್ಟೇ ಅಲ್ಲ ಯಾವುದೇ ಅಭಿವೃದ್ಧಿ ಯೋಜನೆಗಳಿಗೂ ಸರ್ಕಾರದ ಬಳಿ ಹಣ ಇಲ್ಲ. ಸಾಲದ ರೂಪದ ಯೋಜನೆಗಳನ್ನು ಬಿಟ್ಟರೆ ಬೇರೆ ಯಾವುದೂ ಇಲ್ಲ. ಬೇಸಿಗೆ ಸಮೀಪಿಸುತ್ತಿದ್ದು ಕುಡಿಯುವ ನೀರಿನ ಯೋಜನೆಗೂ ಹಣ ಕೊಡದೇ ಜನರನ್ನು ಸಂಕಷ್ಟಕ್ಕೆ ದೂಡಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.