ADVERTISEMENT

ಗುಂಡ್ಲುಪೇಟೆ: ಬೆತ್ತಲೆ ಮೆರವಣಿಗೆ ಪ್ರಕರಣ–ಜಿಲ್ಲಾಡಳಿತ ವಿರುದ್ಧ ಆಕ್ರೋಶ

ಮೆರವಣಿಗೆ ವಿರುದ್ಧ ಬೃಹತ್‌ ಜಾಥಾ

​ಪ್ರಜಾವಾಣಿ ವಾರ್ತೆ
Published 19 ಜೂನ್ 2019, 3:38 IST
Last Updated 19 ಜೂನ್ 2019, 3:38 IST
ಕಬ್ಬೆಕಟ್ಟೆ ದೇವಸ್ಥಾನದಲ್ಲಿ ನಡೆದ ಘಟನೆಯನ್ನು ಖಂಡಿಸಿ ಮಂಗಳವಾರ ಗುಂಡ್ಲುಪೇಟೆಯಲ್ಲಿ ಕಾಲ್ನಡಿಗೆ ಜಾಥಾ ನಡೆಯಿತು
ಕಬ್ಬೆಕಟ್ಟೆ ದೇವಸ್ಥಾನದಲ್ಲಿ ನಡೆದ ಘಟನೆಯನ್ನು ಖಂಡಿಸಿ ಮಂಗಳವಾರ ಗುಂಡ್ಲುಪೇಟೆಯಲ್ಲಿ ಕಾಲ್ನಡಿಗೆ ಜಾಥಾ ನಡೆಯಿತು   

ಗುಂಡ್ಲುಪೇಟೆ:ತಾಲ್ಲೂಕಿನ ವೀರನಪುರ ಬಳಿಯ ಕಬ್ಬೆಕಟ್ಟೆ ದೇವಸ್ಥಾನದಲ್ಲಿ ದಲಿತ ಯುವಕ ಪ್ರತಾಪ್‌ ಮೇಲೆ ನಡೆದ ಹಲ್ಲೆ ಮತ್ತು ಬೆತ್ತಲೆ ಮೆರವಣಿಗೆ ಖಂಡಿಸಿ, ಪ್ರಗತಿಪ‍ರ ಮತ್ತು ದಲಿತ ಸಂಘಟನೆಗಳ ಒಕ್ಕೂಟದ ವತಿಯಿಂದ ಮಂಗಳವಾರ ಸಾವಿರಕ್ಕೂ ಹೆಚ್ಚು ಜನರು ಗುಂಡ್ಲುಪೇಟೆ ಪಟ್ಟಣದಲ್ಲಿ ಬೃಹತ್‌ ಜಾಥಾ ನಡೆಸಿದರು.

ನಂತರ ನಡೆದ ವೇದಿಕೆ ಕಾರ್ಯಕ್ರಮದಲ್ಲಿ, ಪ್ರತಾಪ್‌ ತಂದೆ ಶಿವಯ್ಯ ಸೇರಿದಂತೆ ನೂರಾರು ಮಂದಿ ಬೌದ್ಧ ಧಮ್ಮ ಪ್ರಮಾಣ ವಚನ ಸ್ವೀಕರಿಸಿದರು. ಬೌದ್ಧ ಬಿಕ್ಕು ಬೋಧಿರತ್ನ ಭಂತೇಜಿ ಅವರು ಪ್ರಾರ್ಥನೆ ಮಾಡಿ, ಎಲ್ಲರಿಗೂ ಅಷ್ಟಾಂಗಿಕ ಮಾರ್ಗ ಬೋಧಿಸಿದರು. ಕಾರ್ಯಕ್ರಮದಲ್ಲಿ ಆರು ನಿರ್ಣಯಗಳನ್ನು ಅಂಗೀಕರಿಸಲಾಯಿತು.

ದೇವಾಲಯದಿಂದ ಎರಡು ಕಿ.ಮೀ ದೂರದ ಜಾಥಾದಲ್ಲಿ ಮಠಾಧೀಶರು, ಬೌದ್ಧ ‌ಬಿಕ್ಕುಗಳು, ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು. ಮೈಸೂರು, ಮಂಡ್ಯ, ತುಮಕೂರು, ಕೋಲಾರ ಸೇರಿದಂತೆ ವಿವಿಧ ಜಿಲ್ಲೆಗಳಿಂದ 500ಕ್ಕೂ ಹೆಚ್ಚು ಮಂದಿ ಬಂದಿದ್ದರು.ಪೊಲೀಸರು ವಿಳಂಬವಾಗಿ ಪ್ರಕರಣ ದಾಖಲಿಸಿದ್ದಾಗಿ ಆರೋಪಿಸಿ, ಪೊಲೀಸರ ವಿರುದ್ಧ ಆಕ್ರೋಶ
ವ್ಯಕ್ತಪಡಿಸಿದರು.

ADVERTISEMENT

ಸಮತಾ ಸೈನಿಕ ದಳದ ವೆಂಕಟಸ್ವಾಮಿ ಮಾತನಾಡಿ, ‘ದಲಿತ ದೌರ್ಜನ್ಯ ತಡೆ ಕಾಯ್ದೆ ಅಡಿ, ಜಿಲ್ಲಾಧಿಕಾರಿಯವರು ದೌರ್ಜನ್ಯ ಪ್ರಕರಣಗಳಿಗೆ ಸಂಬಂಧಿಸಿದಂತೆ ವರ್ಷಕ್ಕೆ ನಾಲ್ಕು ಸಭೆ ನಡೆಸಬೇಕು. ಆದರೆ, ಜಿಲ್ಲೆಯಲ್ಲಿ ಒಂದು ಸಭೆಯೂ ನಡೆದಿಲ್ಲ. ಸಭೆ ನಡೆಸಿದ್ದರೆ ಪ್ರತಾಪ್‌ಗೆ ಈ ರೀತಿ ಆಗುತ್ತಿರಲಿಲ್ಲ. ಜಿಲ್ಲಾಧಿಕಾರಿ ಅವರನ್ನು ಅಮಾನತು ಮಾಡಬೇಕು’ ಎಂದು ಆಗ್ರಹಿಸಿದರು.

ಮೈಸೂರು ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಮಹೇಶ್ಚಂದ್ರಗುರುಮಾತನಾಡಿ, ‘ಪ್ರಕರಣದಲ್ಲಿ ಪೊಲೀಸರು ಕಾನೂನು ಪ್ರಕಾರ ನಡೆದುಕೊಂಡಿಲ್ಲ. ಅಮಾಯಕರ ಮೇಲೆ ಹಲ್ಲೆ ಮಾಡಲು ಪೊಲೀಸರು ಸಮವಸ್ತ್ರ ಧರಿಸಿದ್ದಾರಾ’ ಎಂದು ಕಿಡಿಕಾರಿದರು.

‘ಪೊಲೀಸರು ಬೂಟುಗಾಲಿನಲ್ಲಿ ಒದೆಯುತ್ತಾರೆ ಎಂದರೆ ಅವರು ರಕ್ಷಕರೋ, ರಾಕ್ಷಸರೋ’ ಎಂದು ಉರಿಲಿಂಗಪೆದ್ದಿ ಮಠದ ಜ್ಞಾನಪ್ರಕಾಶ್‌ ಸ್ವಾಮೀಜಿ ಹರಿಹಾಯ್ದರು.

ಮಾನಸಿಕ ಅಸ್ವಸ್ಥ ಅಲ್ಲ: ‘ಪ್ರತಾಪ್‌ನನ್ನು ವಿದ್ಯಾರ್ಥಿಯಾಗಿ ನಾನು ಬಲ್ಲೆ. ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದ. ದೇಶಕ್ಕೆ ಆಸ್ತಿಯಾಗಬೇಕು ಎಂಬ ಆಸೆ ಆತನಿಗೆ ಇತ್ತು. ಇಂತಹ ಆಸೆ ಹೊಂದಿರುವವರು ಯಾವತ್ತೂ ಮಾನಸಿಕ ಅಸ್ವಸ್ಥ ಆಗಿರಲು ಸಾಧ್ಯವಿಲ್ಲ’ ಎಂದು ಮಹೇಶ್ಚಂದ್ರಗುರು ಹೇಳಿದರು.

ಆರು ನಿರ್ಣಯಗಳು

1. ಕರ್ತವ್ಯ ಲೋಪ ಎಸಗಿರುವ ಡಿವೈಎಸ್ಪಿ ಮತ್ತುಸರ್ಕಲ್ ಇನ್‌ಸ್ಪೆಕ್ಟರ್‌ ಅವರನ್ನುಅಮಾನತು ಮಾಡಬೇಕು.

2. ಘಟನೆಗೆ ಜಿಲ್ಲಾಧಿಕಾರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿ ಅವರನ್ನು ಹೊಣೆ ಮಾಡಬೇಕು.

3. ಪ್ರಕರಣವನ್ನು ಎಸ್‌ಐಟಿ ತನಿಖೆ ಒಪ್ಪಿಸಬೇಕು.

4. ಆರೋಪಿಗಳ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಬೇಕು.

5. ಪ್ರಕರಣ ನಡೆದಿರುವ ದೇವಸ್ಥಾನವನ್ನು ಮುಜರಾಯಿ ಇಲಾಖೆಗೆ ಒಪ್ಪಿಸಬೇಕು.

6 ಪ್ರತಾಪ್‌ಗೆ ಪರಿಹಾರವಾಗಿ ₹ 50 ಲಕ್ಷ ನಗದು ಮತ್ತು ಸರ್ಕಾರಿ ಉದ್ಯೋಗ ನೀಡಬೇಕು.

*ಬೆತ್ತಲೆ ಮೆರವಣಿಗೆ ಮಾಡುವುದು ಕೊಲೆಗಿಂತಲೂ ದೊಡ್ಡ ಅಪ‍ರಾಧ. ಅಮಾನವೀಯ ಕೃತ್ಯ ಎಸಗಿದವರನ್ನು ಗಲ್ಲಿಗೇರಿಸಬೇಕು
-ಪ್ರೊ. ಮಹೇಶ್ವಂದ್ರಗುರು, ನಿವೃತ್ತ ಪ್ರಾಧ್ಯಾಪಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.