ADVERTISEMENT

ಗುರು ರಾಘವೇಂದ್ರ ಬ್ಯಾಂಕ್‌ ಹಗರಣ: ಆರೋಪಿ ರಘುನಾಥ್‌ಗೆ ಜಾಮೀನು

​ಪ್ರಜಾವಾಣಿ ವಾರ್ತೆ
Published 2 ಮೇ 2023, 21:25 IST
Last Updated 2 ಮೇ 2023, 21:25 IST
 ಗುರು ರಾಘವೇಂದ್ರ ಸಹಕಾರ ಬ್ಯಾಂಕ್‌
ಗುರು ರಾಘವೇಂದ್ರ ಸಹಕಾರ ಬ್ಯಾಂಕ್‌   

ಬೆಂಗಳೂರು: ಗುರು ರಾಘವೇಂದ್ರ ಬ್ಯಾಂಕ್‌ನ ಠೇವಣಿದಾರರ ಹಣ ದುರ್ಬಳಕೆ ಹಗರಣದ ಆರೋಪದಲ್ಲಿ ಖಾತ್ರಿ ರಹಿತವಾಗಿ ₹ 105 ಕೋಟಿ ಮೊತ್ತದ ಬೃಹತ್‌ ಸಾಲ ಪಡೆದು ಅಕ್ರಮ ಎಸಗಿರುವ ಆರೋಪಿ ಜಿ.ರಘುನಾಥ್ ಎಂಬುವರಿಗೆ ಹೈಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.

ಈ ಕುರಿತಂತೆ ರಘುನಾಥ್ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ನಟರಾಜನ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಅರ್ಜಿದಾರರ ವೈದ್ಯಕೀಯ ಕಾರಣಗಳನ್ನು ಆಧರಿಸಿ ಜಾಮೀನು ನೀಡಿದೆ. 

’ಆರೋಪಿಯು ವೈಯಕ್ತಿಕ ₹ 25 ಲಕ್ಷ ಮೊತ್ತದ ಎರಡು ಬಾಂಡ್‌ಗಳು ಮತ್ತು ಅಷ್ಟೇ ಮೊತ್ತಕ್ಕೆ ಇಬ್ಬರ ಭದ್ರತೆ ನೀಡಬೇಕು. ಪಾಸ್‌ಪೋರ್ಟ್ ಅನ್ನು ಪೊಲೀಸರ ವಶಕ್ಕೆ ಒಪ್ಪಿಸಬೇಕು. ನ್ಯಾಯಾಲಯದ ಅನುಮತಿ ಇಲ್ಲದೆ, ವಿಚಾರಣಾ ಕೋರ್ಟ್‌ನ ವ್ಯಾಪ್ತಿಯಿಂದ ಹೊರಗೆ ಹೋಗಬಾರದು‘ ಎಂಬ ಷರತ್ತುಗಳನ್ನು ನ್ಯಾಯಪೀಠ ವಿಧಿಸಿದೆ.

ADVERTISEMENT

ಇ.ಡಿ ಆಕ್ಷೇಪಣೆ ಏನು?

’ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾದ (ಆರ್‌ಬಿಐ) ಸಾಂಸ್ಥಿಕ ವರದಿಯ ಪ್ರಕಾರ ಬ್ಯಾಂಕ್‌ನ 24 ಪ್ರಮುಖ ಫಲಾನುಭವಿಗಳಲ್ಲಿ ರಘುನಾಥ್ ಕೂಡಾ ಒಬ್ಬರು. ಇವರು ಗುರು ರಾಘವೇಂದ್ರ ಬ್ಯಾಂಕ್‌ನಿಂದ ₹ 105 ಕೋಟಿ ಸಾಲ ಪಡೆದಿದ್ದಾರೆ ಮತ್ತು ₹ 45 ಕೋಟಿಯನ್ನು ಸಮೃದ್ಧಿ ಎಂಟರ್ ಪ್ರೈಸಸ್‌ ಹೆಸರಿಗೆ ವರ್ಗಾವಣೆ ಮಾಡಿದ್ದಾರೆ. ನಗದು ಸ್ವೀಕರಿಸಿದ ₹ 60 ಕೋಟಿಗೆ ಯಾವುದೇ ಲೆಕ್ಕ ನೀಡಿಲ್ಲ. ಅಲ್ಲದೆ, ತಮ್ಮ ಸ್ನೇಹಿತ ರಮೇಶ್ ಎಂಬುವರಿಗೆ ಸಮೃದ್ಧಿ ಎಂಟರ್ ಪ್ರೈಸಸ್ ಹೆಸರಿನಲ್ಲಿ ₹ 30 ರಿಂದ ₹ 35 ಕೋಟಿ ರೂ ಸಾಲ ಕೊಡಿಸಿದ್ದಾರೆ‘ ಎಂಬುದು ಇ.ಡಿ ಆಕ್ಷೇಪ.

ಹಣ ದುರ್ಬಳಕೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿ ಜಾರಿ ನಿರ್ದೇಶನಾಲಯ ರಘುನಾಥ್‌ ವಿರುದ್ಧ ಪ್ರಕರಣ ದಾಖಲಿಸಿದ್ದು, 10 ತಿಂಗಳಿನಿಂದ ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.