ADVERTISEMENT

ಅಧಿವೇಶನದಲ್ಲಿ ಸರ್ಕಾರದ ವೈಫಲ್ಯ ಕುರಿತ ಚರ್ಚೆಗೆ ಆದ್ಯತೆ ನೀಡಿ: ಶಾಸಕರಿಗೆ HDK

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2025, 16:02 IST
Last Updated 2 ಮಾರ್ಚ್ 2025, 16:02 IST
ಎಚ್‌ಡಿಕೆ
ಎಚ್‌ಡಿಕೆ   

ಪ್ರಜಾವಾಣಿ ವಾರ್ತೆ

ಬೆಂಗಳೂರು: ‘ವಿಧಾನ ಮಂಡಲ ಅಧಿವೇಶನದಲ್ಲಿ ಜನಪರ ವಿಷಯಗಳ ಬಗ್ಗೆ ಚರ್ಚಿಸಬೇಕು. ಸರ್ಕಾರದ ವೈಫಲ್ಯ ಚರ್ಚಿಸಲು ಆದ್ಯತೆ ನೀಡಬೇಕು’ ಎಂದು ತಮ್ಮ ಪಕ್ಷದ ಶಾಸಕರಿಗೆ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷರೂ ಆಗಿರುವ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಸೂಚನೆ ನೀಡಿದರು.

ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಸಿ.ಬಿ.ಸುರೇಶ್ ಬಾಬು ಅಧ್ಯಕ್ಷತೆಯಲ್ಲಿ ಭಾನುವಾರ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಅಧಿವೇಶನದಲ್ಲಿ ಅನುಸರಿಸಬೇಕಾದ ಕಾರ್ಯತಂತ್ರದ ಕುರಿತು ಸಲಹೆ ನೀಡಿದರು.

ADVERTISEMENT

‘ದಾಖಲೆಗಳನ್ನು ಆಧರಿಸಿ ಮಾತನಾಡಬೇಕು. ಕಲಾಪದ ಸಮಯ ಸದ್ಬಳಕೆ ಮಾಡಿಕೊಳ್ಳಬೇಕು. ಮಿತ್ರ ಪಕ್ಷವಾದ ಬಿಜೆಪಿಯ ನಾಯಕರ ಜತೆ ಈಗಾಗಲೇ ಚರ್ಚೆ ನಡೆಸಲಾಗಿದೆ. ಉಭಯ ಸದನಗಳಲ್ಲಿ ಪರಸ್ಪರ ಒಮ್ಮತದಿಂದ ಸರ್ಕಾರದ ವಿರುದ್ಧ ಹೋರಾಟ ಮಾಡಬೇಕು’ ಎಂದು ಸಲಹೆ ನೀಡಿದರು.

‘ಕಾಂಗ್ರೆಸ್ ಸರ್ಕಾರವು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ್ದಕ್ಕಿಂತ ದುರ್ಬಳಕೆ ಮಾಡಿಕೊಂಡು ರಾಜಕೀಯ ಲಾಭ ಮಾಡಿಕೊಂಡಿದ್ದೇ ಹೆಚ್ಚು. ಗೃಹಲಕ್ಷ್ಮಿ ಯೋಜನೆಯ ಹಣವನ್ನು ಬಾಕಿ ಇಟ್ಟುಕೊಂಡು ಯಾವುದಾದರೂ ಚುನಾವಣೆ ಬಂದಾಗ ಒಮ್ಮೆಲೆ ಖಾತೆಗಳಿಗೆ ಜಮೆ ಮಾಡಲಾಗುತ್ತಿದೆ. ಈ ವಿಷಯವನ್ನು ಕಲಾಪದಲ್ಲಿ ಪರಿಣಾಮಕಾರಿಯಾಗಿ ಚರ್ಚಿಸಬೇಕು’ ಎಂದು ಸೂಚನೆ ನೀಡಿದರು.

‘ಕಲ್ಯಾಣ ಕರ್ನಾಟಕಕ್ಕೆ ₹ 5 ಸಾವಿರ ಅನುದಾನ ನೀಡುವುದಾಗಿ ಹೇಳಿದ್ದ ಸರ್ಕಾರ, ನಯಾಪೈಸೆ ಬಿಡುಗಡೆ ಮಾಡಿಲ್ಲ. ಕಲ್ಯಾಣ ಕರ್ನಾಟಕ ಮತ್ತು ಉತ್ತರ ಕರ್ನಾಟಕಕ್ಕೆ ಮೋಸ ಮಾಡುತ್ತಿದೆ. ಈ ಬಗ್ಗೆಯೂ ಹೋರಾಟ ಮಾಡಬೇಕು. ತೆರಿಗೆ ಎಷ್ಟು ವಸೂಲಿ ಮಾಡಿದ್ದೀರಿ, ಗ್ಯಾರಂಟಿಗಳಿಗೆ ಎಷ್ಟು ಹಣ ಖರ್ಚು ಮಾಡುತ್ತಿದ್ದೀರಿ, ಉಳಿದ ಹಣ ಎಲ್ಲಿ ಹೋಗುತ್ತಿದೆ ಎಂಬ ಬಗ್ಗೆ ಪ್ರಶ್ನೆ ಮಾಡಿ’ ಎಂದೂ ಶಾಸಕರಿಗೆ ನಿರ್ದೇಶನ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.