ADVERTISEMENT

ಪರಿಹಾರ ಕೊಡದಿದ್ದರೆ ಕೊಲೆಗಡುಕ ಸರ್ಕಾರ ಎಂದಾದರೂ ಒಪ್ಪಿಕೊಳ್ಳಿ: ಕುಮಾರಸ್ವಾಮಿ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2019, 16:09 IST
Last Updated 25 ಡಿಸೆಂಬರ್ 2019, 16:09 IST
ಎಚ್‌.ಡಿ. ಕುಮಾರಸ್ವಾಮಿ
ಎಚ್‌.ಡಿ. ಕುಮಾರಸ್ವಾಮಿ   

ಬೆಂಗಳೂರು: ‘ಮುಖ್ಯಮಂತ್ರಿ ಯಡಿಯೂರಪ್ಪ ಅವರು ನಿಜವಾಗಿಯೂ ಹೋರಾಟಗಾರರಾಗಿದ್ದರೆ ಮಂಗಳೂರು ಗಲಭೆಯಲ್ಲಿ ಮೃತರಾದ ಕುಟುಂಬದವರಿಗೆ ಪರಿಹಾರ ಮಂಜೂರು ಮಾಡಲಿ. ಇಲ್ಲವೇ ತಮ್ಮದು ಕೊಲೆಗಡುಕ ಸರ್ಕಾರ ಎಂದು ಒಪ್ಪಿಕೊಳ್ಳಲಿ’ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

ಸರಣಿ ಟ್ವೀಟ್ ಮಾಡಿರುವ ಅವರು, ‘ಅಭಿಪ್ರಾಯ ಭೇದವನ್ನು ಬಿಜೆಪಿ ಸಹಿಸುವುದಿಲ್ಲ ಎಂಬುದು ಇದರಿಂದ ಸಾಬೀತಾಗಿದೆ. ಹೋರಾಟಗಳನ್ನು, ಹೋರಾಟಗಾರರನ್ನು ‘ಸೋಕಾಲ್ಡ್‌ ಹೋರಾಟಗಾರ’ ಯಡಿಯೂರಪ್ಪ ಸಹಿಸುವುದಿಲ್ಲ’ ಎಂದು ಅವರು ಕುಟುಕಿದ್ದಾರೆ.

‘ಗೋಲಿಬಾರ್‌ನಲ್ಲಿ ಸತ್ತವರ ಹೆಸರುಗಳು ಆರೋಪಿಗಳ ಪಟ್ಟಿಯಲ್ಲಿದೆ ಎಂದು ಪರಿಹಾರ ವಂಚನೆಗೆ ಯಡಿಯೂರಪ್ಪ ನೀಡಿರುವ ಸಬೂಬು ಎಂತಹ ಕ್ಷುಲ್ಲಕ. ಹೋರಾಟ ಅಪರಾದವೇ?. ಹೋರಾಟಗಳು ಸಂವಿಧಾನ ಬದ್ಧ ಹಕ್ಕಾಗಿದ್ದು, ಅದನ್ನು ಹತ್ತಿಕ್ಕುವವರು ಸಂವಿಧಾನ ವಿರೋಧಿಗಳು, ದೇಶಭ್ರಷ್ಟರು’ ಎಂದು ಕುಮಾರಸ್ವಾಮಿ ಟೀಕಿಸಿದ್ದಾರೆ.

ADVERTISEMENT

‘ಯಡಿಯೂರಪ್ಪನವರು ಮಂಗಳೂರಿಗೆ ಭೇಟಿ ನೀಡಿದ ದಿನವೇ ಗಲಭೆಯಲ್ಲಿ ಭಾಗಿಯಾದವರೇ ಗೋಲಿಬಾರ್‌ಗೆ ಬಲಿಯಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿರಲಿಲ್ಲವೇ? ಅಂದು ಯಡಿಯೂರಪ್ಪನವರಿಗೆ ಪೊಲೀಸರು ಎಡಿಟೆಡ್ ವಿಡಿಯೋ ತೋರಿಸಿರಲಿಲ್ಲವೇ? ನಾಲ್ಕು ದಿನ ಕಳೆದ ನಂತರ ಗೋಲಿಬಾರಿಗೆ ಬಲಿಯಾದವರಿಬ್ಬರೂ ಗಲಭೆಕೋರರು ಎಂದು ಬಿಂಬಿಸಿರುವ ಉದ್ದೇಶವಾದರೂ ಏನು? ಇದನ್ನು ನೀವು ಸುಲಭವಾಗಿ ಅರಗಿಸಿಕೊಳ್ಳಲು ಸಾಧ್ಯವಿಲ್ಲ, ಜನರಿಗೆ ಉತ್ತರ ನೀಡಬೇಕಾಗುತ್ತದೆ. ಅಮಾಯಕರ ಮೇಲೆ ನಿಮ್ಮ ನೀಚ ಕೆಲಸದ ತಪ್ಪನ್ನು ಹೊರಿಸಿದರೆ ಮುಂದಿನ ದಿನಗಳಲ್ಲಿ ಪ್ರಾಯಶ್ಚಿತ್ತಕ್ಕೆ ತಯಾರಾಗಬೇಕಾಗುತ್ತದೆ’ ಎಂದು ಎಚ್ಚರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.