ADVERTISEMENT

ಇಂಗ್ಲಿಷ್‌ ಶಾಲೆಗೆ ನನ್ನ ಬೆಂಬಲವಿದೆ: ಸಚಿವ ಎಚ್‌.ಡಿ.ರೇವಣ್ಣ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2018, 18:25 IST
Last Updated 31 ಡಿಸೆಂಬರ್ 2018, 18:25 IST
   

ಬೆಂಗಳೂರು: ‘ರೇವಣ್ಣನ ಮಕ್ಕಳು ಆಂಗ್ಲ ಮಾಧ್ಯಮದಲ್ಲಿ ಓದಬೇಕಾದರೆ, ಬಡವರಿಗೆ ಬೇಡವೇ? ಆಂಗ್ಲ‌ ಮಾಧ್ಯಮ‌ ಶಾಲೆಗೆ ನನ್ನ ಬೆಂಬಲ‌ ಇದೆ. ಈ ಬಗ್ಗೆ ಕುಮಾರಣ್ಣ– ಸಿದ್ರಾಮಣ್ಣ ಚರ್ಚಿಸಿ ನಿರ್ಧರಿಸಲಿ’ ಎಂದು ಲೋಕೋಪಯೋಗಿ ಸಚಿವ ಎಚ್‌.ಡಿ. ರೇವಣ್ಣ ಹೇಳಿದರು.

ಮುಂದಿನ ಶೈಕ್ಷಣಿಕ ವರ್ಷದಿಂದ ರಾಜ್ಯದಲ್ಲಿ 1,000 ಇಂಗ್ಲಿಷ್‌ ಮಾಧ್ಯಮ ಶಾಲೆಗಳನ್ನು ಆರಂಭಿಸುವ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರ ತೀರ್ಮಾನಕ್ಕೆ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಇತ್ತೀಚೆಗೆ ಆಕ್ಷೇಪ ವ್ಯಕ್ತಪಡಿಸಿದ್ದರು.

‘ಪ್ರಾಥಮಿಕ ಹಂತದಿಂದಲೇ ಇಂಗ್ಲಿಷ್ ಮಾಧ್ಯಮ ಇರಬೇಕು. ಕುಮಾರಸ್ವಾಮಿ ಅವರಿಗೆ ಈ ಬಗ್ಗೆ ನಾನೇ ಒತ್ತಾಯಿಸುತ್ತೇನೆ. ಕೇವಲ ಶ್ರೀಮಂತರು ಆಂಗ್ಲ ಮಾಧ್ಯಮದಲ್ಲಿ ಕಲಿತರೆ ಸಾಕೆ. ಕಾರ್ಮಿಕರು ಮತ್ತು ಬಡವರು ಕಲಿಯಬಾರದಾ’ ಎಂದು ಪ್ರಶ್ನಿಸಿದರು. ‘ಈ ಬಗ್ಗೆ ಬುದ್ಧಿಜೀವಿಗಳ ಜತೆ ಮುಖ್ಯಮಂತ್ರಿ ಮಾತುಕತೆ ನಡೆಸಿ, ನಿರ್ಣಯಕ್ಕೆ ಬರಲಿ’ ಎಂದರು.

ADVERTISEMENT

‘ಸಿದ್ರಾಮಣ್ಣ ಹಳ್ಳಿಯಿಂದ ಬಂದವರು. ಕನ್ನಡ ಮರೆಯಾಗಬಹುದೆಂಬ ಆತಂಕದಿಂದ ಇಂಗ್ಲಿಷ್ ಮಾಧ್ಯಮ ಬೇಡ ಅಂದಿರಬಹುದು’ ಎಂದರು.

ದಲಿತರಿಗೆ ಸ್ಥಾನಮಾನ: ‘ದಲಿತರಿಗೆ ಸ್ಥಾನಮಾನ ನೀಡುವ ವಿಚಾರದಲ್ಲಿ ಸಚಿವ ಆರ್.ಬಿ. ತಿಮ್ಮಾಪುರ ಅವರಿಂದ ಕಲಿಯಬೇಕಿಲ್ಲ’ ಎಂದು ರೇವಣ್ಣ ತಿರುಗೇಟು ನೀಡಿದರು. ‘ಮೀಸಲಾತಿ ಇಲ್ಲದಿದ್ದಾಗ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸ್ಥಾನವನ್ನು ಪರಿಶಿಷ್ಟ ವರ್ಗದವರಿಗೆ ನೀಡಿದವರು ದೇವೇಗೌಡರು. ಮಹಿಳೆಯರಿಗೆ ಶೇ 33ರಷ್ಟು ಮೀಸಲಾತಿ, ಮುಸ್ಲಿಮರಿಗೂ ಶೇ 5ರಷ್ಟು ಮೀಸಲಾತಿ ನೀಡಿದ್ದರು. ಸಚಿವರಾದ ತಿಮ್ಮಾಪುರ ಮತ್ತು ಆರ್‌.ವಿ ದೇಶಪಾಂಡೆ ಅವರನ್ನು ಕೇಳಿ ದೇವೇಗೌಡರು ಮಾಡಬೇಕಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.