ADVERTISEMENT

ಸಂದರ್ಶನ: ತಮಿಳುನಾಡಿನ ತಕರಾರಿಗೆ ವೈಜ್ಞಾನಿಕ ಕಾರಣವಿಲ್ಲ -ಎಚ್‌.ಕೆ.ಪಾಟೀಲ

ವಾಸ್ತವಿಕವಾಗಿ ಎಂದೂ ಬಗೆಹರಿಯದ ವಿವಾದಗಳಿಗೆ ಜಲವಿವಾದಗಳು ಬಹುದೊಡ್ಡ ಉದಾಹರಣೆ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2021, 19:31 IST
Last Updated 2 ಏಪ್ರಿಲ್ 2021, 19:31 IST
ಎಚ್.ಕೆ.ಪಾಟೀಲ
ಎಚ್.ಕೆ.ಪಾಟೀಲ   

ತಮಿಳುನಾಡಿನ ಕೆಲವೊಂದು ಅವೈಜ್ಞಾನಿಕ ನಿಲುವುಗಳಿಂದಾಗಿಯೇ ಕಾವೇರಿ ಜಲ ವಿವಾದ ಸದಾಕಾಲ ಜೀವಂತವಾಗಿ ಉಳಿದುಕೊಂಡಿದೆ ಎಂಬುದು ಮಾಜಿ ಜಲಸಂಪನ್ಮೂಲ ಸಚಿವ, ಶಾಸಕ ಎಚ್‌.ಕೆ.ಪಾಟೀಲ ಅವರ ವಿಶ್ಲೇಷಣೆ. ಅಭಿವೃದ್ಧಿ ವಿಚಾರಗಳಲ್ಲಿ ರಾಜಕೀಯ ಸಲ್ಲದು ಎಂದು ಸ್ಪಷ್ಟವಾಗಿ ಹೇಳುವ ಅವರು ದೇಶ ಮತ್ತು ಜನರ ಒಳಿತಿಗೆ ಕೈಗೊಳ್ಳುವ ಯೋಜನೆಗಳಿಗೆ ಪ್ರತಿಯೊಬ್ಬರೂ ಬದ್ಧತೆಯಿಂದ ಕೈಜೋಡಿಸಬೇಕು ಎಂದು ‘ಪ್ರಜಾವಾಣಿ’ ಸಂದರ್ಶನದಲ್ಲಿ ಹೇಳಿದ್ದಾರೆ

l ಕಾವೇರಿ–ವೈಗೈ–ಗುಂಡಾರ್‌ ನದಿ ಜೋಡಣೆ ಯೋಜನೆ ಕಾರಣಕ್ಕೆ ಕಾವೇರಿ ನೀರು ಹಂಚಿಕೆಗೆ ಸಂಬಂಧಿಸಿದ ವಿಚಾರವು ಕರ್ನಾಟಕ ಮತ್ತು ತಮಿಳುನಾಡು ಮಧ್ಯೆ ಮತ್ತೆ ವಿವಾದ ಸೃಷ್ಟಿಸುವ ಸಾಧ್ಯತೆ ಕಾಣಿ ಸುತ್ತಿದೆಯಲ್ಲ?

ಕಾವೇರಿ ನೀರಿನ ವಿಚಾರವಾಗಿ ತಮಿಳುನಾಡು ವಿವಾದ ಸೃಷ್ಟಿಸದ ದಿನವೇ ಇಲ್ಲ ಎನ್ನಬಹುದು. ಕರ್ನಾಟಕ ತನ್ನ ನ್ಯಾಯಯುತ ನಿಲುವುಗಳ ಜತೆಗೆ ಹಲವು ದಶಕಗಳಿಂದ ಹೋರಾಡುತ್ತಲೇ ಬಂದಿದೆ. ಕಾವೇರಿ ವಿವಾದವನ್ನು ನ್ಯಾಯಮಂಡಳಿಯು ಬಗೆಹರಿಸಿದೆ. ಜತೆಗೆ ಎರಡು ರಾಜ್ಯಗಳ ನಡುವಿನ ಕಾವೇರಿ ಕೊಳ್ಳದ ನೀರು ಹಂಚಿಕೆ ವಿಷಯವೂ ಪೂರ್ಣವಾಗಿದೆ. ಎರಡೂ ರಾಜ್ಯಗಳ ಪಾಲು ಅಂತಿಮಗೊಂಡಿದ್ದು, ಅವರ ಪಾಲಿನ ನೀರನ್ನು ಅವರಿಗೆ ಕೊಟ್ಟರೆ ಮುಗಿಯಲಿದೆ.ನಾವು ನಮ್ಮ ಜಾಗದಲ್ಲಿ ಯಾವುದೇ ಯೋಜನೆ ಕೈಗೆತ್ತಿಕೊಂಡರೂ ಅದಕ್ಕೆ ತಮಿಳುನಾಡು ತಕರಾರು ಎತ್ತಬಾರದು. ಏಕೆಂದರೆ ಅವರ ಪಾಲಿನ ನೀರಿಗೆ ಕೊರತೆ ಏನೂ ಆಗದು. ಈಗ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಅಸ್ತಿತ್ವದಲ್ಲಿದೆ. ಎರಡು ರಾಜ್ಯಗಳ ನೀರಿನ ಹಂಚಿಕೆಯನ್ನು ಈ ಪ್ರಾಧಿಕಾರವೇ ನೋಡಿಕೊಳ್ಳುತ್ತದೆ. ತಮಿಳುನಾಡು ಸೃಷ್ಟಿಸುವ ವಿವಾದಗಳಿಗೆ ಯಾವುದೇ ವೈಜ್ಞಾನಿಕ ಕಾರಣಗಳಿಲ್ಲ.

ADVERTISEMENT

l 1972ರ ನಂತರ ನೀರಿನ ಲಭ್ಯತೆ ಬಗ್ಗೆ ಸಮೀಕ್ಷೆಯೇ ನಡೆದಿಲ್ಲ. ಇಂತಹ ಮೂಲ ಮಾಹಿತಿಯೇ ಇಲ್ಲದೆ ಯೋಜನೆ ಕೈಗೆತ್ತಿಕೊಳ್ಳುವ ಉಮೇದು ಏಕೆ? ನೀರಿನ ಲಭ್ಯತೆ ಬಗ್ಗೆ ಮತ್ತೆ ಸಮೀಕ್ಷೆ ನಡೆಸುವ ಅಗತ್ಯ ಇದೆಯೇ?

ನೀರಿನ ಲಭ್ಯತೆಯ ಸಮೀಕ್ಷೆಗಳನ್ನು 100 ವರ್ಷಗಳ ಸರಾಸರಿ ಲೆಕ್ಕದಲ್ಲಿ ಮಾಡಲಾಗುತ್ತದೆಯೇ ಹೊರತು ಪ್ರತಿ ವರ್ಷ ಸಮೀಕ್ಷೆ ಮಾಡಲಾಗುವುದಿಲ್ಲ. ಕಾಲಹರಣಕ್ಕಾಗಿಯೇ ತಮಿಳುನಾಡು ಇಂತಹ ಬೇಡಿಕೆಗಳನ್ನು ಮಂಡಿಸುತ್ತಿರುತ್ತದೆ. ಕಾವೇರಿ ಜಲ ವಿವಾದವನ್ನು 1990ರಲ್ಲಿಯೇ ನ್ಯಾಯಮಂಡಳಿಗೆ ಒಪ್ಪಿಸಲಾಯಿತು. ಸಮೀಕ್ಷೆಗಳು, ವೈಜ್ಞಾನಿಕ ಮಾಹಿತಿ ಆಧಾರದ ಮೇಲೆಯೇ 22 ವರ್ಷಗಳ ಸುದೀರ್ಘ ಅವಧಿಯ ವಿಚಾರಣೆ ನಡೆಸಿ ನ್ಯಾಯಮಂಡಳಿಯು ವರದಿ ನೀಡಿದೆ. ಹೆಚ್ಚುವರಿ ನೀರಿನ ಯೋಜನೆಗಳಿದ್ದರೆ ನೀರಿನ ಲಭ್ಯತೆ ಆಧರಿಸಿ ಬಳಕೆ ಮಾಡಿಕೊಳ್ಳಲಾಗುತ್ತದೆಯೇ ಹೊರತು ಮೂಲ ನೀರಿನ ಹಂಚಿಕೆ ಮೇಲೆ ಯಾವುದೇ ಪರಿಣಾಮ ಬೀರದ ಯೋಜನೆಗೆ ಅಡ್ಡಿ, ತಕರಾರು ತೆಗೆದು ವೃಥಾ ಕಾಲಹರಣ ಮಾಡುವುದು ಸಲ್ಲದು.

l ಅಂತರ‌ ಕಣಿವೆ ನೀರು ಹರಿಸುವಿಕೆಗೆ ಕಾವೇರಿ ನೀರು ಹಂಚಿಕೆ ತೀರ್ಪಿನಲ್ಲಿ ಅವಕಾಶ ಇದೆಯೇ? ಕೃಷ್ಣಾ ಅಥವಾ ಕಾವೇರಿ ನೀರನ್ನು ಕರ್ನಾಟಕವು ಬೇರೆ ಕಣಿವೆಗೆ ಹರಿಸಲು ಸಾಧ್ಯ ಇದೆಯೇ?

ಕೃಷ್ಣಾ ಕಣಿವೆಯಲ್ಲಿ ಈಗಾಗಲೇ ಪೋಲಾವರಂ ಯೋಜನೆ ಕೈಗೊಳ್ಳುವ ಮೂಲಕ ಅಂತರ ಕಣಿವೆ ನೀರು ಹರಿಸುವಿಕೆಯನ್ನು
ಪ್ರಾರಂಭಿಸಿದ್ದೇವೆ. ಗೋದಾವರಿ ನದಿ ನೀರನ್ನು ಕೃಷ್ಣಾ ಕಣಿವೆಗೆ ತಿರುಗಿಸಿ ಕೃಷ್ಣಾ ಜಲ ವಿವಾದದ ಒಟ್ಟು ಹಂಚಿಕೆಯಲ್ಲಿ 23 ಟಿಎಂಸಿ ಅಡಿ ನೀರು ಕರ್ನಾಟಕಕ್ಕೆ ದೊರಕಿದೆ. ಅಂತರ ಕಣಿವೆ ವರ್ಗಾವಣೆಗಳು ನಿಷೇಧಿತವಲ್ಲ. ಮಹದಾಯಿ ನೀರನ್ನು ಮಲಪ್ರಭೆಗೆ ತಿರುಗಿಸುವ ಯೋಜನೆಗೂ ನ್ಯಾಯಮಂಡಳಿಯಿಂದ ಕರ್ನಾಟಕ ಅನುಮೋದನೆ ಪಡೆದಿದೆ. ರಾಜ್ಯ ಜಲ ವಿವಾದ ಕಾಯ್ದೆಯಲ್ಲಿ ಈ ಅವಕಾಶವಿದೆ.

l ನದಿ ನೀರು ಹಂಚಿಕೆ ವಿವಾದಗಳನ್ನು ಈ ರೀತಿ ಎಷ್ಟು ಕಾಲ ಜಗ್ಗಾಡುತ್ತಿರಬೇಕು? ಇದಕ್ಕೆ ಪರಿಹಾರ ಏನು?

ಪರಿಹಾರವಾಗಿರುವ ಅಂತರ ರಾಜ್ಯ ಜಲ ವಿವಾದಗಳ ಸಂಖ್ಯೆ ಕಡಿಮೆ ಅಥವಾ ಶೂನ್ಯ ಎಂದರೂ ತಪ್ಪಾಗುವುದಿಲ್ಲ. ಜಲವಿವಾದಗಳು ವಾಸ್ತವಿಕವಾಗಿ ಎಂದೂ ಪರಿಹಾರವಾಗದ ವಿವಾದಗಳಿಗೆ ಬಹುದೊಡ್ಡ ಉದಾಹರಣೆಗಳು. ಪ್ರಾದೇಶಿಕ ಅವಶ್ಯಕತೆ– ನ್ಯಾಯಯುತ ಹಂಚಿಕೆ ಎಂಬ ನಿಯಮವೇ ಎಲ್ಲದಕ್ಕೂ ಪರಿಹಾರ ಮಾರ್ಗ. ಜಲ ವಿವಾದ ನ್ಯಾಯಮಂಡಳಿಯು ತೀರ್ಪನ್ನು ಕಾಲಮಿತಿಯೊಳಗೆ ನೀಡಬೇಕು. ಜಲ ವಿವಾದಗಳ ಕಾರ್ಯ ಕಲಾಪಕ್ಕೆ ನಿಗದಿಪಡಿಸಿದ ಕಾಲಮಿತಿಯನ್ನು ಕೇವಲ ಒಂದು ವರ್ಷಕ್ಕೆ ಹೆಚ್ಚಿಸಬೇಕು ಎಂಬ ಕಾನೂನು ತಿದ್ದುಪಡಿಯನ್ನು 2013ರಲ್ಲಿಯೇ ಮನಮೋಹನ ಸಿಂಗ್ ಅವರ ಸರ್ಕಾರ ಮಾಡಿದೆ.

l ಕೇಂದ್ರ ಸಹಭಾಗಿತ್ವದ ಕಾವೇರಿ–ವೈಗೈ–ಗುಂಡಾರ್ ನದಿ ಜೋಡಣೆ ಯೋಜನೆಯನ್ನು ಕರ್ನಾಟಕವು ರಾಜಕೀಯವಾಗಿ ಹೇಗೆ ನಿಭಾಯಿಸಬಹುದು? ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರವೇ ಇರುವುದು ನೆರವಾಗಬಹುದೇ?

ಇಲ್ಲಿ ರಾಜಕೀಯವಾಗಿ ನಿಭಾಯಿಸುವ ಪ್ರಶ್ನೆ ಉದ್ಭವಿಸದು. ಪಕ್ಷಪಾತ ರಹಿತ ನ್ಯಾಯಯುತ ನಿರ್ಣಯಗಳು ನಮ್ಮ ರಾಜ್ಯಕ್ಕೆ ನೆರವಾಗಬಹುದು. ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರವೇ ಅಧಿಕಾರದಲ್ಲಿರುವಾಗ ನೆರವಾಗುತ್ತದೆ ಎಂಬುದು ನಮ್ಮ ಊಹೆಯಷ್ಟೇ. ಸರ್ಕಾರ ಯಾವುದೇ ಇರಲಿ ಕೇಂದ್ರ ಸರ್ಕಾರ ನಮ್ಮ ವಿಸ್ತೃತ ಯೋಜನಾ ವರದಿಗೆ ಅನುಮೋದನೆ ನೀಡಿದರಷ್ಟೇ ಸಾಕು.

l ನದಿ ಜೋಡಣೆ ಯೋಜನೆಯಿಂದ ತಮಿಳುನಾಡಿಗೆ ಹಾಗೂ ಮೇಕೆದಾಟು ಯೋಜನೆಯಿಂದ ಕರ್ನಾಟಕ ರಾಜ್ಯಕ್ಕೆ ಆಗುವ ಪ್ರಯೋಜನ– ನಷ್ಟ ಏನು?

ಮೇಕೆದಾಟು ಯೋಜನೆಯಿಂದ ತಮಿಳುನಾಡಿಗೆ ಯಾವುದೇ ನಷ್ಟವಾಗುವುದಿಲ್ಲ. ಬೆಂಗಳೂರು ಮತ್ತು ರಾಮನಗರ ಜಿಲ್ಲೆಯ ಸುತ್ತಲಿನ ಪ್ರದೇಶಗಳಿಗೆ ಕುಡಿಯುವ ನೀರು ಪೂರೈಕೆಯಾಗುತ್ತದೆ. ಇಷ್ಟಕ್ಕೂ ಮೇಕೆದಾಟು ಯೋಜನೆ ಒಂದು ಸಮತೋಲನ ಜಲಾಶಯ. 4.75 ಟಿಎಂಸಿ ಅಡಿ ನೀರನ್ನು ಕುಡಿಯುವುದಕ್ಕಾಗಿ ಒದಗಿಸಲಾಗುತ್ತದೆ. 400 ಮೆಗಾವ್ಯಾಟ್ ಜಲ ವಿದ್ಯುತ್ ಉತ್ಪಾದಿಸಲಾಗುತ್ತದೆ. ತಮಿಳುನಾಡಿನ ನೀರಿನ ಹಂಚಿಕೆಯಲ್ಲಿ ಯಾವುದೇ ವ್ಯತ್ಯಾಸ ಆಗುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.