ADVERTISEMENT

ಮಠಗಳಿಗೆ ಹಣ ಕೊಡಬೇಡಿ: ಎಚ್. ವಿಶ್ವನಾಥ್

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2022, 18:59 IST
Last Updated 8 ಏಪ್ರಿಲ್ 2022, 18:59 IST
ಎಚ್.ವಿಶ್ವನಾಥ್‌
ಎಚ್.ವಿಶ್ವನಾಥ್‌   

ಮೈಸೂರು: ‘ಸ್ವಾಮೀಜಿಗಳು ಸರ್ಕಾರ ನೀಡಿದ ಅನುದಾನದಿಂದ ಕೆಲಸ ಮಾಡುತ್ತಾರೆ. ಮಠಗಳಿಗೆ ಹಣ ನೀಡುವ ಬದಲು, ಅದನ್ನು ಇತರ ಕಾರ್ಯಗಳಿಗೆ ಮೀಸಲಿಡಬೇಕು’ ಎಂದು ವಿಧಾನ ಪರಿಷತ್‌ ಸದಸ್ಯ ಎಚ್.ವಿಶ್ವನಾಥ್‌ ಸಲಹೆ ನೀಡಿದರು.

ನಗರದಲ್ಲಿ ಶುಕ್ರವಾರ ಒಡನಾಡಿ ಸಂಸ್ಥೆಯು ಏರ್ಪಡಿಸಿದ್ದ ‘ಪ್ರಸ್ತುತ ವಿದ್ಯಮಾನದಲ್ಲಿ ತೇಜಸ್ವಿ ಚಿಂತನೆ’ ಸಂವಾದದಲ್ಲಿ ಮಾತನಾಡಿದ ಅವರು, ‘ನಗರಕ್ಕೆ ಗುರುವಾರ ಭೇಟಿ ನೀಡಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಸರ್ಕಾರಗಳು ಮಾಡುವ ಕೆಲಸವನ್ನು ಸ್ವಾಮೀಜಿಗಳು ಮಾಡುತ್ತಾರೆ ಎಂದಿದ್ದರು. ಮುಖ್ಯಮಂತ್ರಿಯಾದವರು ಅಂಥ ಮಾತನ್ನಾಡಬಾರದು’ ಎಂದು ಆಕ್ಷೇಪ ವ್ಯಕ್ತಪಡಿಸಿದರು.

‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರೂ ತೆರಿಗೆ ಪಾವತಿಸುವುದರಿಂದ ನಿರ್ದಿಷ್ಟ ಸಮುದಾಯದ ಮೇಲೆ ವ್ಯಾಪಾರ ನಿರ್ಬಂಧ ಹೇರುವಂತಿಲ್ಲ. ವ್ಯವಸ್ಥೆಯನ್ನು ಸರಿಪಡಿಸಬೇಕೆಂಬ ನನ್ನ ಆಗ್ರಹಕ್ಕೆ ಉತ್ತರ ಕೊಡುವ ವ್ಯವಧಾನ ಸರ್ಕಾರಕ್ಕೂ ಇಲ್ಲ. ನನ್ನದು ಒಂಟಿ ಧ್ವನಿಯಾಗಿದೆ’ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ADVERTISEMENT

ಅಲ್‌ಕೈದಾ ಪರ ಕಾಂಗ್ರೆಸ್‌ ವಕಾಲತ್ತು: ಸಿ.ಟಿ.ರವಿ:‘ಬುದ್ಧಿ ಇರುವವರು ಆರ್‌ಎಸ್‌ಎಸ್‌ ಅನ್ನು ಅಲ್‌ಕೈದಾ ಸಂಘಟನೆಗೆ ಹೋಲಿಕೆ ಮಾಡಲ್ಲ. ಕಾಂಗ್ರೆಸ್‌ನವರು ಪರೋಕ್ಷವಾಗಿ ಅಲ್‌ಕೈದಾ ಪರ ವಕಾಲತ್ತು ವಹಿಸುತ್ತಿದ್ದಾರೆ’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಟೀಕಿಸಿದರು.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಅಲ್‌ಕೈದಾ ಸಂಘಟನೆ ಬಗ್ಗೆ ಕಾಂಗ್ರೆಸ್‌ನವರು ಸಹಾನುಭೂತಿ ತೋರುತ್ತಿದ್ದಾರೆ. ಹಿಜಾಬ್‌ ಪರ ವಕಾಲತ್ತು ವಹಿಸಿದವರೆಲ್ಲರೂ ಕಾಂಗ್ರೆಸ್‌ ಬೆಂಬಲಿಗರು. ಅಲ್‌ಕೈದಾ ಮತ್ತು ಕಾಂಗ್ರೆಸ್‌ ಒಂದೇ ಕಡೆ ಬ್ಯಾಟಿಂಗ್‌ ಮಾಡುತ್ತಿವೆ. ಹಿಜಾಬ್‌ ವಿಚಾರ ಮುಂದಿಟ್ಟುಕೊಂಡು ರಾಜಕೀಯ ಲಾಭ ಪಡೆಯುವುದು ಕಾಂಗ್ರೆಸ್‌ ಲೆಕ್ಕಾಚಾರವಾಗಿತ್ತು. ಪಂಚರಾಜ್ಯಗಳ ಚುನಾವಣೆಯಲ್ಲಿ ಅದು ಫಲ ನೀಡಲಿಲ್ಲ’ ಎಂದರು.

‘ಭಗವದ್ಗೀತೆಯಲ್ಲಿ ಮನುಕುಲಕ್ಕೆ ವಿರುದ್ಧವಾದ ಅಂಶಗಳು ಇದ್ದರೆ ತೆಗೆದುಹಾಕಲಿ. ಅದೇ ರೀತಿ ಇತರ ಮತ ಗ್ರಂಥಗಳಲ್ಲಿ ಅಂಥ ಅಂಶಗಳಿದ್ದರೆ ಅವುಗಳನ್ನು ತೆಗೆದು ಹಾಕಬೇಕು’ ಎಂದು ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.