ADVERTISEMENT

ಎಚ್1–ಎನ್1 ಸೋಂಕು: ಐಪಿಎಸ್ ಮಧುಕರ್ ಶೆಟ್ಟಿ ಆರೋಗ್ಯ ಸ್ಥಿತಿ ಗಂಭೀರ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2018, 17:48 IST
Last Updated 26 ಡಿಸೆಂಬರ್ 2018, 17:48 IST
ಮಧುಕರ್ ಶೆಟ್ಟಿ
ಮಧುಕರ್ ಶೆಟ್ಟಿ   

ಬೆಂಗಳೂರು: ಎಚ್1–ಎನ್1 ಸೋಂಕಿನಿಂದ ಬಳಲುತ್ತಿರುವ ರಾಜ್ಯದ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಹೈದರಾಬಾದ್‌ನ ಕಾಂಟಿನೆಂಟಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಅವರ ಶ್ವಾಸಕೋಶಕ್ಕೆ ಸೋಂಕು ತಗುಲಿದೆ ಎನ್ನಲಾಗುತ್ತಿದ್ದು, ಚಿಕಿತ್ಸೆಯ ಮೇಲ್ವಿಚಾರಣೆಗಾಗಿ ಸಿಐಡಿ ಎಡಿಜಿಪಿ ಪ್ರತಾಪ್ ರೆಡ್ಡಿ ಅವರನ್ನು ಸರ್ಕಾರ ಹೈದರಾಬಾದ್‌ಗೆ ಕಳುಹಿಸಿದೆ.

ಈ ಬಗ್ಗೆ ‘ಪ್ರಜಾವಾಣಿ’ ಜತೆ ಮಾತನಾಡಿದ ಐಪಿಎಸ್ ಅಧಿಕಾರಿಯೊಬ್ಬರು, ‘ಮಧುಕರ್ ಶೆಟ್ಟಿ ಹಲವು ದಿನಗಳಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಕೆಲ ಮಾಧ್ಯಮಗಳು ವರದಿ ಮಾಡುತ್ತಿವೆ. ಆದರೆ, ಮಂಗಳವಾರವಷ್ಟೇ ಅವರನ್ನು ದಾಖಲು ಮಾಡಲಾಗಿದೆ. ಮಧ್ಯಾಹ್ನ ವೈದ್ಯರೊಟ್ಟಿಗೆ ಮಾತನಾಡಿದಾಗ, ಆರೋಗ್ಯ ಚಿಂತಾಜನಕವಾಗಿರುವುದಾಗಿ ಹೇಳಿದರು’ ಎಂದರು.

ADVERTISEMENT

ಹಿರಿಯ ಪತ್ರಕರ್ತ ದಿ.ವಡ್ಡರ್ಸೆ ರಘುರಾಮ ಶೆಟ್ಟಿ ಅವರ ಪುತ್ರರಾದ ಮಧುಕರ್ ಶೆಟ್ಟಿ, 1999ನೇ ಸಾಲಿನ ಐಪಿಎಸ್ ಅಧಿಕಾರಿ. 2008ರಲ್ಲಿ ಲೋಕಾಯುಕ್ತ ಸಂಸ್ಥೆಗೆ ಬಂದ ಅವರು, ತಮ್ಮ ಕಾರ್ಯವೈಖರಿ ಮೂಲಕ ಖಡಕ್ ಅಧಿಕಾರಿ ಎನಿಸಿಕೊಂಡರು. ಉನ್ನತ ವ್ಯಾಸಂಗಕ್ಕಾಗಿ 2011ರಲ್ಲಿ ಸುದೀರ್ಘ ರಜೆ ಮೇಲೆ ಅಮೆರಿಕಕ್ಕೆ ತೆರಳಿದ್ದ ಶೆಟ್ಟಿ, ಐದು ವರ್ಷಗಳ ಬಳಿಕ ರಾಜ್ಯಕ್ಕೆ ವಾಪಸಾಗಿ ನೇಮಕಾತಿ ವಿಭಾಗದ ಡಿಐಜಿಯಾಗಿ ಕಾರ್ಯ ನಿರ್ವಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.