ADVERTISEMENT

₹ 1.44 ಕೋಟಿ ಮುಟ್ಟುಗೋಲು ಹಾಕಿದ ಇ.ಡಿ

ಹ್ಯಾಕರ್‌ ಶ್ರೀಕೃಷ್ಣನಿಂದ ₹ 11.55 ಕೋಟಿ ವಂಚನೆ ಪ್ರಕರಣ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2021, 17:18 IST
Last Updated 9 ಆಗಸ್ಟ್ 2021, 17:18 IST

ಬೆಂಗಳೂರು: ರಾಜ್ಯ ಸರ್ಕಾರದ ಇ– ಆಡಳಿತ ಇಲಾಖೆಯ ಪೋರ್ಟಲ್‌ ಹ್ಯಾಕ್‌ ಮಾಡಿ ಸರ್ಕಾರಿ ಕಾಮಗಾರಿಗಳ ಕನಿಷ್ಠ ಭದ್ರತಾ ಠೇವಣಿಯ(ಇಎಂಡಿ) ₹11.55 ಕೋಟಿಯನ್ನು ಬೇರೆ ಖಾತೆಗಳಿಗೆ ವರ್ಗಾಯಿಸಿಕೊಂಡು ವಂಚಿಸಿದ್ದ ಹ್ಯಾಕರ್‌ ಶ್ರೀಕೃಷ್ಣನಿಗೆ ಸೇರಿದ 14 ಬ್ಯಾಂಕ್‌ ಖಾತೆಗಳಿಂದ ₹ 1.44 ಕೋಟಿಯನ್ನು ಜಾರಿ ನಿರ್ದೇಶನಾಲಯ (ಇ.ಡಿ) ಮುಟ್ಟುಗೋಲು ಹಾಕಿಕೊಂಡಿದೆ.

ಸರ್ಕಾರದ ವೆಬ್‌ ಪೋರ್ಟಲ್‌ ಹ್ಯಾಕ್‌ ಮಾಡಿದ್ದ ಶ್ರೀಕೃಷ್ಣ ಅಲಿಯಾಸ್‌ ಶ್ರೀಕಿ, ಗುತ್ತಿಗೆದಾರರು ಇಎಂಡಿ ರೂಪದಲ್ಲಿ ಪಾವತಿಸಿದ್ದ ₹ 11.55 ಕೋಟಿಯನ್ನು ನಾಗಪುರದ ಉದಯ ಗ್ರಾಮ ವಿಕಾಸ್‌ ಸಂಸ್ಥಾ ಎಂಬ ಸರ್ಕಾರೇತರ ಸಂಸ್ಥೆ ಹಾಗೂ ಉತ್ತರಪ್ರದೇಶದ ಬುಲಂದ್‌ಶಹರ್‌ನ ನಿಮ್ಮಿ ಎಂಟರ್‌ ಪ್ರೈಸಸ್‌ ಎಂಬ ಉದ್ದಿಮೆಯ ಖಾತೆಗಳಿಗೆ ವರ್ಗಾಯಿಸಿದ್ದ. ಬಳಿಕ ಬೇರೆ ಖಾತೆಗಳಿಗೆ ಆ ಮೊತ್ತವನ್ನು ವರ್ಗಾವಣೆ ಮಾಡಲಾಗಿತ್ತು.

ಪ್ರಕರಣದ ತನಿಖೆ ನಡೆಸಿದ್ದ ಸಿಐಡಿ ಪೊಲೀಸರು, ಶ್ರೀಕೃಷ್ಣನನ್ನು ಬಂಧಿಸಿದ್ದರು. ಇಎಂಡಿ ಮೊತ್ತವನ್ನು ವರ್ಗಾವಣೆ ಮಾಡಿಕೊಂಡು ವಂಚಿಸಿರುವ ಸಂಬಂಧ ಆರೋಪ ಪಟ್ಟಿಯನ್ನೂ ಸಲ್ಲಿಸಿದ್ದರು. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಪ್ರತ್ಯೇಕ ಪ್ರಕರಣ ದಾಖಲಿಸಿರುವ ಇ.ಡಿ, ಉದಯ ಗ್ರಾಮ ವಿಕಾಸ ಸಂಸ್ಥಾ ಹಾಗೂ ನಿಮ್ಮಿ ಎಂಟರ್‌ಪ್ರೈಸಸ್‌ ಜತೆ ನಂಟು ಹೊಂದಿರುವ ಬ್ಯಾಂಕ್‌ ಖಾತೆಗಳಲ್ಲಿರುವ ₹ 1.44 ಕೋಟಿ ಮೊತ್ತವನ್ನು ಮುಟ್ಟುಗೋಲು ಹಾಕಿಕೊಂಡಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.