ADVERTISEMENT

ಧರೆಗುರುಳಿದ ಹಂಪಿ ಪ್ರಭಾವಳಿ ಉಬ್ಬುಶಿಲ್ಪ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2018, 12:53 IST
Last Updated 16 ಡಿಸೆಂಬರ್ 2018, 12:53 IST
ಗರ್ಭಗೃಹ ಎದುರಿನ ಸಭಾ ಮಂಟಪದ ಮೇಲಿನ ಸಿಂಹದ್ರೋಳ ಪ್ರಭಾವಳಿಯ ಉಬ್ಬುಶಿಲ್ಪ ಧರೆಗುರುಳಿದ್ದು, ಅದರ ಅವಶೇಷ ನೋಡಬಹುದು
ಗರ್ಭಗೃಹ ಎದುರಿನ ಸಭಾ ಮಂಟಪದ ಮೇಲಿನ ಸಿಂಹದ್ರೋಳ ಪ್ರಭಾವಳಿಯ ಉಬ್ಬುಶಿಲ್ಪ ಧರೆಗುರುಳಿದ್ದು, ಅದರ ಅವಶೇಷ ನೋಡಬಹುದು   

ಹೊಸಪೇಟೆ: ಕೆಲ ತಿಂಗಳ ಹಿಂದೆಯಷ್ಟೇ ಜೀರ್ಣೊದ್ಧಾರಗೊಳಿಸಿದ್ದ ತಾಲ್ಲೂಕಿನ ಹಂಪಿ ವಿರೂಪಾಕ್ಷೇಶ್ವರ ದೇಗುಲ ಗರ್ಭಗೃಹ ಎದುರಿನ ಸಭಾ ಮಂಟಪದ ಮೇಲಿನ ಸಿಂಹದ್ರೋಳ ಪ್ರಭಾವಳಿಯ ಉಬ್ಬುಶಿಲ್ಪ ಧರೆಗುರುಳಿದೆ.

‘ವಿರೂಪಾಕ್ಷೇಶ್ವರ ದೇವಸ್ಥಾನದ ಆವರಣದಲ್ಲಿ ಕೋತಿಗಳ ಉಪಟಳ ಹೆಚ್ಚಿರುವುದು ಒಂದು ಕಾರಣವಾದರೆ, ಕಳಪೆ ಕಾಮಗಾರಿಯಿಂದ ಉಬ್ಬುಶಿಲ್ಪ ಬೇಗ ಹಾಳಾಗಿರಬಹುದು’ ಎಂದು ಸ್ಥಳೀಯ ಕೆಲವರು ಅನುಮಾನ ವ್ಯಕ್ತಪಡಿಸಿದ್ದಾರೆ.

ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯು (ಎ.ಎಸ್‌.ಐ.) ಕೆಲ ತಿಂಗಳ ಹಿಂದೆ ಬಿಷ್ಟಪ್ಪಯ್ಯ ಗೋಪುರ, ಉಬ್ಬುಶಿಲ್ಪವನ್ನು ಜೀರ್ಣೊದ್ಧಾರಗೊಳಿಸಿತ್ತು. ಅದಕ್ಕಾಗಿ ತಮಿಳುನಾಡಿನ ನುರಿತ ಕಲಾವಿದರನ್ನು ಕರೆಸಿತ್ತು. ಜೀರ್ಣೊದ್ಧಾರಗೊಳಿಸಿದ ನಂತರ ಇಡೀ ದೇಗುಲಕ್ಕೆ ವಿಶೇಷ ಕಳೆ ಬಂದಿತ್ತು. ಆದರೆ, ಉಬ್ಬುಶಿಲ್ಪ ಬಿದ್ದಿರುವುದರಿಂದ ಸಭಾ ಮಂಟಪದ ಮೇಲ್ಭಾಗ ಬಿಕೋ ಎನ್ನುತ್ತಿದೆ.

ADVERTISEMENT

ಈ ಕುರಿತು ಎ.ಎಸ್.ಐ. ಸೂಪರಿಟೆಂಡೆಂಟ್‌ ಪಿ. ಕಾಳಿಮುತ್ತು ಅವರನ್ನು ಸಂಪರ್ಕಿಸಿದಾಗ, ‘ಉಬ್ಬುಶಿಲ್ಪ ಹೇಗೆ ನೆಲಕ್ಕುರುಳಿದೆ ಎಂಬುದು ಗೊತ್ತಿಲ್ಲ. ಈ ಕುರಿತು ಪರಿಶೀಲನೆ ನಡೆಸಿ, ಅದನ್ನು ಸರಿಪಡಿಸಲಾಗುವುದು’ ಎಂದು ತಿಳಿಸಿದರು.

‘ಇದು ದೇವಸ್ಥಾನ ಆಡಳಿತ ಮಂಡಳಿಗೆ ಸಂಬಂಧಿಸಿದ ವಿಷಯವಲ್ಲ. ಹಂಪಿಯಲ್ಲಿರುವ ಎಲ್ಲ ದೇಗುಲಗಳ ನಿರ್ವಹಣೆಯ ಜವಾಬ್ದಾರಿ ಎ.ಎಸ್‌.ಐ. ನೋಡಿಕೊಳ್ಳುತ್ತಿದೆ. ಬಹುಶಃ ಕೋತಿಗಳ ಉಪಟಳದಿಂದ ಉಬ್ಬುಶಿಲ್ಪ ಬಿದ್ದಿರಬಹುದು’ ಎಂದು ವಿರೂಪಾಕ್ಷ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಪ್ರಕಾಶ ರಾವ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.