ADVERTISEMENT

ಹಂಪಿ ವಿವಿ ಹಗರಣ: ತನಿಖೆಗೆ ಸಿದ್ದರಾಮಯ್ಯ ಆಗ್ರಹ

‘ಪ್ರಜಾವಾಣಿ’ ಪ್ರಕಟಿಸಿದ್ದ ವಿಶೇಷ ವರದಿ ಸರಣಿ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2021, 20:15 IST
Last Updated 25 ನವೆಂಬರ್ 2021, 20:15 IST
ಸಿದ್ದರಾಮಯ್ಯ
ಸಿದ್ದರಾಮಯ್ಯ   

ಬೆಂಗಳೂರು: ‘ಹಂಪಿ ಕನ್ನಡ ವಿಶ್ವವಿದ್ಯಾಲಯದ ಹಗರಣಗಳ ಕುರಿತ ಆರೋಪಗಳ ಬಗ್ಗೆ ವಿಚಾರಣೆಗೆ ತಜ್ಞರು ಮತ್ತು ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ಸಮಿತಿ ರಚಿಸಬೇಕು’ ಎಂದು ಆಗ್ರಹಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ.

ವಿಶ್ವವಿದ್ಯಾಲಯದ ಹಗರಣಗಳ ಕುರಿತು ಇತ್ತೀಚೆಗೆ ‘ಪ್ರಜಾವಾಣಿ’ಯಲ್ಲಿ ವಿಶೇಷ ವರದಿಗಳು ಪ್ರಕಟವಾಗಿದ್ದವು.

‘ವಿಶ್ವವಿದ್ಯಾಲಯದಲ್ಲಿಹುದ್ದೆಗಳ ನೇಮಕಾತಿಗೆ ನಡೆಯುತ್ತಿರುವ ಪ್ರಕ್ರಿಯೆಯಲ್ಲಿ ಮೀಸಲಾತಿ ಉಲ್ಲಂಘನೆ ಆರೋಪವಿದೆ. ಈ ಬಗ್ಗೆ ಸಮಾಜ ಕಲ್ಯಾಣ ಇಲಾಖೆ ಮತ್ತು ಕಲ್ಯಾಣ ಕರ್ನಾಟಕ ಅಭಿವೃದ್ಧಿ ಕೋಶಗಳು ವಿಚಾರಣೆ ನಡೆಸಿ ವರದಿ ನೀಡಬೇಕು. ಅಲ್ಲಿಯವರೆಗೆ ನೇಮಕಾತಿ ಪ್ರಕ್ರಿಯೆ ಸ್ಥಗಿತಗೊಳಿಸಬೇಕು’ ಎಂದೂ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

ADVERTISEMENT

‘ಇತ್ತೀಚೆಗೆ ವಿಶ್ವವಿದ್ಯಾಲಯದಲ್ಲಿ ಕೆಲವು ಬೋಧಕ ಹುದ್ದೆಗಳಿಗೆ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಮಾಧ್ಯಮ ವರದಿಗಳ ಪ್ರಕಾರ ಪ್ರತಿ ಹುದ್ದೆಯನ್ನು ₹ 50 ಲಕ್ಷಕ್ಕೆ ಹರಾಜು ಮಾಡಲಾಗುತ್ತಿದೆ. ಹಣ ಕೊಟ್ಟವರಿಗೆ ಪರೀಕ್ಷೆಗೆ ಮೊದಲೇ ಪ್ರಶ್ನೆಪತ್ರಿಕೆ ನೀಡಲಾಗುತ್ತಿದೆಯೆಂಬ ಗಂಭೀರ ಆರೋಪಗಳೂ ಇವೆ. ವಿಶ್ವವಿದ್ಯಾಲಯಗಳು ಹುದ್ದೆಗಳನ್ನು ಹರಾಜಿಗಿಟ್ಟರೆ ಬಡ ಪ್ರತಿಭಾವಂತರು ಆಯ್ಕೆಯಾಗಲು ಸಾಧ್ಯವೆ’ ಎಂದೂ ಪ್ರಶ್ನಿಸಿದ್ದಾರೆ.

‘ಕನ್ನಡವಿಶ್ವವಿದ್ಯಾಲಯದಲ್ಲಿ ಹಿಂದೆ ನೇಮಕಗೊಂಡ ಬೋಧಕ, ಬೋಧಕೇತರ ಸಿಬ್ಬಂದಿಯ ಪ್ರೊಬೇಷನರಿ ಅವಧಿ ಘೋಷಿಸಲು ಕೂಡಾ ಕಮಿಷನ್ ನಿಗದಿಗೊಳಿಸಲಾಗಿದೆ. ಆದ್ದರಿಂದ ನೇಮಕಾತಿ ಪ್ರಕ್ರಿಯೆ ನಿಲ್ಲಿಸಿ ಈ ಕುರಿತು ವಿಚಾರಣೆ ನಡೆಸಬೇಕು’ ಎಂದಿರುವ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.