ADVERTISEMENT

ಶರಾವತಿ ಡಿಪಿಆರ್‌ ಬಹಿರಂಗಕ್ಕೆ ನಕಾರ

‘ವಾಣಿಜ್ಯ ರಹಸ್ಯ’ ಎಂಬ ಕಾರಣ ನೀಡಿದ ಕೇಂದ್ರ ವಿದ್ಯುತ್‌ ಪ್ರಾಧಿಕಾರ

ಮಂಜುನಾಥ್ ಹೆಬ್ಬಾರ್‌
Published 27 ಮಾರ್ಚ್ 2025, 0:30 IST
Last Updated 27 ಮಾರ್ಚ್ 2025, 0:30 IST
   

ನವದೆಹಲಿ: ಕರ್ನಾಟಕ ವಿದ್ಯುತ್‌ ನಿಗಮ (ಕೆಪಿಸಿ) ಅನುಷ್ಠಾನಗೊಳಿಸುತ್ತಿರುವ ₹8,005 ಕೋಟಿ ವೆಚ್ಚದ ‘ಶರಾವತಿ ಪಂಪ್ಡ್‌ ಸ್ಟೋರೇಜ್‌’ ಯೋಜನೆಯ ವಿಸ್ತೃತ ಯೋಜನಾ ವರದಿಯನ್ನು (ಡಿಪಿಆರ್‌) ಹಂಚಿಕೊಳ್ಳಲು ಕೇಂದ್ರ ವಿದ್ಯುತ್‌ ಪ್ರಾಧಿಕಾರ ನಿರಾಕರಿಸಿದೆ. ಇನ್ನೊಂದೆಡೆ, ಯೋಜನೆಗೆ ಅರಣ್ಯ ಅನುಮೋದನೆ ನೀಡುವಂತೆ ಕೋರಿ ಕರ್ನಾಟಕ ಅರಣ್ಯ ಇಲಾಖೆಯು ಕೇಂದ್ರ ಅರಣ್ಯ ಹಾಗೂ ಪರಿಸರ ಸಚಿವಾಲಯಕ್ಕೆ ಪ್ರಸ್ತಾವನೆ ಸಲ್ಲಿಸಿದೆ. 

ಮಾಹಿತಿ ಹಕ್ಕು ಕಾಯ್ದೆಯ ಸೆಕ್ಷನ್‌ ಸೆಕ್ಷನ್‌ 8 (1) (ಡಿ) ಪ್ರಕಾರ, ವಾಣಿಜ್ಯ ರಹಸ್ಯ ಹಾಗೂ ಬೌದ್ಧಿಕ ಆಸ್ತಿಗೆ ಸಂಬಂಧಿಸಿದಂತೆ ಮಾಹಿತಿಗಳನ್ನು ಬಹಿರಂಗಪಡಿಸುವುದರಿಂದ ಯೋಜನೆ ಅನುಷ್ಠಾನ ಮಾಡುವವರ ಸ್ಪರ್ಧಾತ್ಮಕ ಹಿತಾಸಕ್ತಿಗೆ ಹಾನಿಯಾಗುತ್ತದೆ ಎಂದು ಪ್ರಾಧಿಕಾರವು ಕಾರಣ ನೀಡಿದೆ. ಯೋಜನೆಯ ಡಿಪಿಆರ್‌ ಅನ್ನು ಒದಗಿಸುವಂತೆ ವನ್ಯಜೀವಿ ಸಂರಕ್ಷಣಾವಾದಿ ಗಿರಿಧರ ಕುಲಕರ್ಣಿ ಅವರು ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿದ್ದರು. ಈ ಯೋಜನೆಗೆ ವನ್ಯಜೀವಿ ಹಾಗೂ ಅರಣ್ಯ ಅನುಮೋದನೆ ಪಡೆಯಲು ಕೇಂದ್ರ ಅರಣ್ಯ, ಪರಿಸರ ಹಾಗೂ ತಾಪಮಾನ ಬದಲಾವಣೆ ಸಚಿವಾಲಯಕ್ಕೆ ಪ್ರಸ್ತಾವ ಸಲ್ಲಿಸುವ ಸಂದರ್ಭದಲ್ಲಿ ಕರ್ನಾಟಕ ಅರಣ್ಯ ಇಲಾಖೆಯು ಯೋಜನಾ ವರದಿಯನ್ನು ಲಗತ್ತಿಸಿಲ್ಲ. ಅರಣ್ಯ ಇಲಾಖೆಯ ಈ ನಡೆ ಚರ್ಚೆಗೆ ಗ್ರಾಸವಾಗಿದೆ.   

ಸಾಗರ, ಶಿವಮೊಗ್ಗ ಹಾಗೂ ಹೊನ್ನಾವರ ವನ್ಯಜೀವಿ ವಲಯಗಳ ವಿವಿಧ ಗ್ರಾಮಗಳ 54.15 ಹೆಕ್ಟೇರ್ ಅರಣ್ಯ ಬಳಕೆಗೆ ಅನುಮತಿ ನೀಡುವಂತೆ ಅರಣ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಂಜುಂ ಪರ್ವೇಜ್ ಅವರು ಪರಿಸರ ಸಚಿವಾಲಯದ ಕಾರ್ಯದರ್ಶಿಗೆ ಇದೇ 20ರಂದು ಪ್ರಸ್ತಾವ ಸಲ್ಲಿಸಿದ್ದಾರೆ. ಈ ಯೋಜನೆಯನ್ನು ಶಿಫಾರಸು ಮಾಡಿದ್ದ ಮೂರು ವಲಯಗಳ ಡಿಸಿಎಫ್‌ಗಳು, ಯೋಜನೆಯ ಅನುಷ್ಠಾನದಿಂದ ಪಶ್ಚಿಮ ಘಟ್ಟದ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗಲಿದೆ ಎಂದು ಎಚ್ಚರಿಸಿದ್ದರು. 

ADVERTISEMENT

ವಿದ್ಯುತ್‌ ಉತ್ಪಾದನೆಗೆ ಬಳಸಿದ ನೀರನ್ನು ಮತ್ತೆ ಮತ್ತೆ ಪಂಪ್‌ಗಳ ಮೂಲಕ ಹಿಂದಕ್ಕೆ ಕೊಂಡೊಯ್ದು, ತಲಾ 250 ಮೆಗಾವಾಟ್‌ ಸಾಮರ್ಥ್ಯದ ಎಂಟು ಜಲ ವಿದ್ಯುತ್‌ ಉತ್ಪಾದನಾ ಘಟಕಗಳಲ್ಲಿ ಬಳಸುವ ಯೋಜನೆ ಇದು. ಒಟ್ಟು 2,000 ಮೆಗಾವಾಟ್‌ ವಿದ್ಯುತ್‌ ಉತ್ಪಾದನೆಗೆ ಯೋಜನೆ ರೂಪಿಸಲಾಗಿದೆ. ಡಿಪಿಆರ್‌ಗೆ ಕೇಂದ್ರ ವಿದ್ಯುತ್‌ ಪ್ರಾಧಿಕಾರವು 2024ರ ಆಗಸ್ಟ್‌ನಲ್ಲಿ ಅನುಮೋದನೆ ನೀಡಿತ್ತು. 

ಸಿದ್ದರಾಮಯ್ಯ ನೇತೃತ್ವದ ಹಿಂದಿನ ಸರ್ಕಾರದ ಅವಧಿಯಲ್ಲಿ ಇಂಧನ ಸಚಿವರಾಗಿದ್ದ ಡಿ.ಕೆ. ಶಿವಕುಮಾರ್‌ ನೇತೃತ್ವದಲ್ಲಿ ₹ 4,862.89 ಕೋಟಿ ವೆಚ್ಚದ ‘ಶರಾವತಿ ಪಂಪ್ಡ್‌ ಸ್ಟೋರೇಜ್‌’ ಯೋಜನೆಯ ಪ್ರಸ್ತಾವವನ್ನು ಸಿದ್ಧಪಡಿಸಲಾಗಿತ್ತು. ಮುಖ್ಯಮಂತ್ರಿಯಾಗಿದ್ದ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ 2019ರ ಸೆಪ್ಟೆಂಬರ್‌ನಲ್ಲಿ ನಡೆದ ರಾಜ್ಯ ವನ್ಯಜೀವಿ ಮಂಡಳಿ ಸಭೆಯಲ್ಲಿ ಈ ಯೋಜನೆಯ ಡಿಪಿಆರ್‌ಗೆ ಒಪ್ಪಿಗೆ ನೀಡಲಾಗಿತ್ತು.

ನಾಲ್ಕೂವರೆ ವರ್ಷಗಳ ಕಾಲ ನನೆಗುದಿಗೆ ಬಿದ್ದಿದ್ದ ಯೋಜನೆ, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಪುನಃ ಚುರುಕು ಪಡೆದಿತ್ತು. ಶರಾವತಿ ವನ್ಯಜೀವಿಧಾಮದ ವ್ಯಾಪ್ತಿಯಲ್ಲಿ ಈ ಯೋಜನೆ ಅನುಷ್ಠಾನಕ್ಕೆ ಬರಲಿದೆ. 

ಎತ್ತಿನಹೊಳೆ: ಅರಣ್ಯ ಬಳಸಿ ಮತ್ತೆ ಅನುಮೋದನೆಗೆ ಪ್ರಸ್ತಾವ  

ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆ ಅನುಷ್ಠಾನಕ್ಕೆ ಹೆಚ್ಚುವರಿ 500 ಎಕರೆ ಅರಣ್ಯ ಬಳಕೆಗೆ ಒಪ್ಪಿಗೆ ನೀಡುವಂತೆ ವಿನಂತಿಸಿ ಅರಣ್ಯ ಇಲಾಖೆಯು ಪರಿಸರ ಸಚಿವಾಲಯಕ್ಕೆ ಇದೇ 17ರಂದು ಪ್ರಸ್ತಾವ ಸಲ್ಲಿಸಿದೆ. 

ಹಾಸನ ಹಾಗೂ ತುಮಕೂರು ಜಿಲ್ಲೆಗಳಲ್ಲಿ ಮುಖ್ಯ ಕಾಲುವೆ ನಿರ್ಮಾಣಕ್ಕೆ ಈ ಅರಣ್ಯ ಬಳಸಿಕೊಳ್ಳಲಾಗುತ್ತದೆ. ಕಾಲುವೆ ನಿರ್ಮಾಣದ ಸಂದರ್ಭದಲ್ಲಿ ತುಮಕೂರು ಜಿಲ್ಲೆಯಲ್ಲಿ 7,554 ಮರಗಳು ಹಾಗೂ ಹಾಸನ ಜಿಲ್ಲೆಯಲ್ಲಿ 1,439 ಮರಗಳ ಹನನವಾಗಲಿದೆ ಎಂದು ಪ್ರಸ್ತಾವದಲ್ಲಿ ಉಲ್ಲೇಖಿಸಲಾಗಿದೆ. 

108 ಹೆಕ್ಟೇರ್ ಅರಣ್ಯ ಬಳಕೆಯಲ್ಲಿ ನಿಯಮ ಉಲ್ಲಂಘನೆ ಆಗಿದೆ. ಅನುಮೋದನೆಗೆ ಮುನ್ನವೇ ವಿಶ್ವೇಶ್ವರಯ್ಯ ಜಲ ನಿಗಮವು ಕಾಲುವೆ ನಿರ್ಮಾಣ ಕಾಮಗಾರಿ ಆರಂಭಿಸಿ ವನ ಸಂರಕ್ಷಣಾ ಕಾಯ್ದೆ 1980 ಉಲ್ಲಂಘಿಸಿದೆ ಎಂದು ಹಾಸನ ಡಿಸಿಎಫ್ ಅವರು ತಮ್ಮ ವರದಿಯಲ್ಲಿ ತಿಳಿಸಿದ್ದಾರೆ.  ಕರ್ನಾಟಕ ಅರಣ್ಯ ಕಾಯ್ದೆ ಉಲ್ಲಂಘಿಸಿದ ಕಾರಣಕ್ಕೆ ಎಫ್‌ಐಆರ್ ದಾಖಲಿಸಲಾಗಿದೆ. ನಿಯಮ ಉಲ್ಲಂಘಿಸಿದ ಕಾರಣಕ್ಕೆ ವಿಶ್ವೇಶ್ವರಯ್ಯ ಜಲ ನಿಗಮಕ್ಕೆ ಸೂಕ್ತ ದಂಡ ವಿಧಿಸಬಹುದು ಎಂದು ಅರಣ್ಯ ಪಡೆಯ ಮುಖ್ಯಸ್ಥೆ ಮೀನಾಕ್ಷಿ ನೇಗಿ ಶಿಫಾರಸು ಮಾಡಿದ್ದಾರೆ. 

ಅಭಿವೃದ್ಧಿ ಯೋಜನೆಗಳಿಗೆ 2,991 ಹೆಕ್ಟೇರ್‌ ಅರಣ್ಯ

ರಾಜ್ಯದಲ್ಲಿ ಕಳೆದ 10 ವರ್ಷಗಳಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳಿಗೆ 2,991 ಹೆಕ್ಟೇರ್ ಅರಣ್ಯ ಬಳಸಲಾಗಿದೆ. 

ರಾಷ್ಟ್ರೀಯ ಹೆದ್ದಾರಿ ಯೋಜನೆಗಳು, ನೀರಾವರಿ, ಜಲವಿದ್ಯುತ್‌, ಗಣಿಗಾರಿಕೆ ಮತ್ತಿತರ ಉದ್ದೇಶಗಳಿಗೆ ಈ ಅರಣ್ಯ ಬಳಕೆಯಾಗಿದೆ ಎಂದು ಕೇಂದ್ರ ಪರಿಸರ ಸಚಿವಾಲಯವು ಲೋಕಸಭೆಗೆ ಸೋಮವಾರ ಮಾಹಿತಿ ನೀಡಿದೆ. 

ಸ್ನಾನಘಟ್ಟಗಳ ಬಳಿ ಶಾಂಪೂ ನಿಷೇಧಿಸಲು ಆದೇಶ ಹೊರಡಿಸಿದ್ದನ್ನು ನೋಡಿ ಅರಣ್ಯ ಸಚಿವರಿಗೆ ಜಲಮೂಲಗಳ ರಕ್ಷಣೆ ಬಗ್ಗೆ ಇರುವ ಕಾಳಜಿ ಕುರಿತು ಖುಷಿಯಾಗಿತ್ತು. ಆದರೆ, ಶರಾವತಿ ನದಿ ಮೇಲೆ ಬರೆ ಎಳೆಯಲಿರುವ ಕಾನೂನುಬಾಹಿರ ಭೂಗರ್ಭ ವಿದ್ಯುತ್ ಯೋಜನೆಗೆ ರಾಜ್ಯ ಸರ್ಕಾರ ಹಸಿರು ನಿಶಾನೆ ತೋರಿರುವುದು, ಅರಣ್ಯ ರಕ್ಷಣೆಯಲ್ಲಿ ತೊಡಗಿರುವ ವನವಾಸಿಗಳನ್ನು ರಾಜ್ಯದ ವಿವಿಧೆಡೆ ಕಾನೂನುಬಾಹಿರವಾಗಿ ಸ್ಥಳಾಂತರಿಸುವ ಆತುರ ನೋಡಿ ನಿರೀಕ್ಷೆ ಹುಸಿಯಾಗಿದೆ
ರಾಮಪ್ರಸಾದ್‌, ಪರಿಸರ ಕಾರ್ಯಕರ್ತ
ಶರಾವತಿ ಯೋಜನೆಯ ವಿಸ್ತೃತ ಯೋಜನಾ ವರದಿ ಬಹಿರಂಗಪಡಿಸದಿರುವುದು ಕಾನೂನುಬಾಹಿರ. ಕೇಂದ್ರ ಪರಿಸರ ಸಚಿವಾಲಯ ಹೊರಡಿಸಿದ ಮಾರ್ಗಸೂಚಿಯನ್ನು ರಾಜ್ಯ ಸರ್ಕಾರ ಉಲ್ಲಂಘಿಸಿದೆ 
ಗಿರಿಧರ ಕುಲಕರ್ಣಿ, ವನ್ಯಜೀವಿ ಸಂರಕ್ಷಣಾವಾದಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.