ADVERTISEMENT

ಫುಡ್‌–ಬೆಡ್‌ಗೆ ಕಾನೂನು ತೋರಿಸಿ..! ವಿಶೇಷ ಪ್ರಾಸಿಕ್ಯೂಟರ್ ಪ್ರಸನ್ನಕುಮಾರ್

​ಪ್ರಜಾವಾಣಿ ವಾರ್ತೆ
Published 23 ಜನವರಿ 2026, 16:00 IST
Last Updated 23 ಜನವರಿ 2026, 16:00 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ‘ಜೈಲಿನಲ್ಲಿರುವ ಕೈದಿಗಳಿಗೆ ಮನೆ ಊಟ ಹಾಗೂ ಇತರ ಅಗತ್ಯ ವಸ್ತುಗಳನ್ನು ತರಿಸಿಕೊಳ್ಳುವ ಕುರಿತಂತೆ ಸೂಕ್ತ ಮಾರ್ಗಸೂಚಿಗಳನ್ನು ರೂಪಿಸಲು ಕಾಲ ಕೂಡಿ ಬಂದಿದ್ದು, ಈ ನಿಟ್ಟಿನಲ್ಲಿ ನ್ಯಾಯಾಂಗ ಮುಂದಡಿ ಇಡಲಿದೆ’ ಎಂದು ಹೈಕೋರ್ಟ್‌ ಸ್ಪಷ್ಟಪಡಿಸಿದೆ.

‘ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಆರೋಪಿಗಳಾಗಿ ಜೈಲಿನಲ್ಲಿರುವ ಪವಿತ್ರಾಗೌಡ, ನಾಗರಾಜ್‌ ಮತ್ತು ಲಕ್ಷ್ಮಣ್‌ ಅವರಿಗೆ ವಾರಕ್ಕೊಮ್ಮೆ ಮನೆ ಊಟಕ್ಕೆ ಅವಕಾಶ ಕಲ್ಪಿಸಿ ನಗರದ 57ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸೆಷನ್ಸ್‌ ನ್ಯಾಯಾಲಯ ಇದೇ 12ರಂದು ಹೊರಡಿಸಿರುವ ಆದೇಶ ರದ್ದುಪಡಿಸಬೇಕು’ ಎಂದು ಕೋರಿ ರಾಜ್ಯ ಸರ್ಕಾರ ಸಲ್ಲಿಸಿರುವ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ನಾಗರಾಜ್‌ ಮತ್ತು ಲಕ್ಷ್ಮಣ್‌ ಪರ ವಕೀಲ ಎಸ್‌.ಸುನಿಲ್‌ ಕುಮಾರ್‌, ‘ಪ್ರಜ್ವಲ್‌ ರೇವಣ್ಣ ಅವರಿಗೆ ಮನೆ ಊಟ ತರಿಸಿಕೊಳ್ಳಲು ಅವಕಾಶ ನೀಡಲಾಗಿದೆ. ಅದನ್ನು ಚಾಲೆಂಜ್‌ ಮಾಡಿಲ್ಲ. ಈ ಕೇಸಿನಲ್ಲಿ ಎಸ್‌ಪಿಪಿ ಬಿ.ಎನ್‌. ಜಗದೀಶ್‌ ಅವರೇ ಹಾಜರಾಗಿದ್ದರು’ ಎಂದರು.

ADVERTISEMENT

ಇದಕ್ಕೆ ಗರಂ ಆದ ನ್ಯಾಯಪೀಠ, ‘ಹಾಗೆಲ್ಲಾ ಹೆಸರು ತೆಗೆದುಕೊಳ್ಳಬೇಡಿ. ಜಗದೀಶ್ ಒಬ್ಬ ಉತ್ತಮ ಪ್ರಾಸಿಕ್ಯೂಟರ್‌. ನೀವಿನ್ನೂ ಚಿಕ್ಕವರು. ಆ ರೀತಿ ವೈಯಕ್ತಿಕ ದೂಷಣೆ ಸಲ್ಲ’ ಎಂದು ಕಿವಿಮಾತು ಹೇಳಿತು.

ಸುನಿಲ್‌ ಕುಮಾರ್ ಆಕ್ಷೇಪಣೆಯನ್ನು ತಳ್ಳಿ ಹಾಕಿದ ಪ್ರಕರಣದ ವಿಶೇಷ ಪ್ರಾಸಿಕ್ಯೂಟರ್ ಪಿ.ಪ್ರಸನ್ನ ಕುಮಾರ್, ‘ಅಧಿಕಾರಿಗಳು ಜೈಲಿನ ಕೈಪಿಡಿಯನ್ನು ಉಲ್ಲಂಘಿಸಿ ನಡೆದುಕೊಳ್ಳಲು ಸಾಧ್ಯವಿಲ್ಲ. ವೈದ್ಯಕೀಯ ಶಿಫಾರಸಿನ ಹೊರತಾಗಿ ಯಾವೊಂದೂ ಅವಕಾಶ ಕಲ್ಪಿಸಲು ಆಗದು. ಕಾನೂನಿನ ಅಂಶಗಳ ಅಡಿಯಲ್ಲಿ ನಮಗೂ ಮನೆ ಊಟ ತರಿಸಿಕೊಳ್ಳುವುದಕ್ಕೆ ಅವಕಾಶ ಇದೆ ಎಂಬುದನ್ನು ಅರ್ಜಿದಾರರು ನಿರೂಪಿಸಿದರೆ ಸಾಕು. ಅದು ಬಿಟ್ಟು, ಅವರಿಗೆ ಕೊಟ್ಟಿದ್ದಾರೆ, ಇವರಿಗೆ ಕೊಟ್ಟಿದ್ದಾರೆ ಎಂಬ ನೆಪದಲ್ಲಿ ಫುಡ್‌–ಬೆಡ್‌ ಬೇಕು ಅಂತಾ ವಾದ ಮಾಡುವುದು ತರವಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ವಾದ–ಪ್ರತಿವಾದ ಆಲಿಸಿದ ನ್ಯಾಯಪೀಠ, ‘ಈ ಪ್ರಕರಣದ ಆರೋಪಿಗಳಿಗೆ ವಿಶೇಷ ಸವಲತ್ತುಗಳನ್ನು ನೀಡಿದ್ದ ಬಗ್ಗೆ ಸಂಬಂಧಪಟ್ಟಂತೆ ಸುಪ್ರೀಂ ಕೋರ್ಟ್‌ ಕೂಡಾ ಉಲ್ಲೇಖ ಮಾಡಿದೆಯಲ್ಲವೇ’ ಎಂದು ಪ್ರಶ್ನಿಸಿ ‘ಯಾರಿಗೇ ಆಗಲಿ, ವೈದ್ಯಕೀಯ ಶಿಫಾರಸಿನ ಹೊರತಾಗಿ ಯಾವುದೇ ಸವಲತ್ತು ಒದಗಿಸುವುದು ಕಾನೂನು ಬಾಹಿರ ಎನಿಸಿಕೊಳ್ಳುತ್ತದೆ. ಆದಾಗ್ಯೂ, ಈ ನಿಟ್ಟಿನಲ್ಲಿ ಕೋರ್ಟ್‌ ಸೂಕ್ತ ಮಾರ್ಗಸೂಚಿ ರೂಪಿಸಲಿದೆ’ ಎಂದು ತಿಳಿಸಿ ವಿಚಾರಣೆಯನ್ನು ಫೆಬ್ರುವರಿ 5ಕ್ಕೆ ಮುಂದೂಡಿತು.

ಜೈಲಿನ ದುರವಸ್ಥೆ ಅಷ್ಟಿಷ್ಟಲ್ಲ..!

‘ದರ್ಶನ್‌ ಅವರಿಗೆ ಜೈಲಿನಲ್ಲಿ ವಿಶೇಷ ಸವಲತ್ತುಗಳನ್ನು ನೀಡಲಾಗುತ್ತಿದೆ ಎಂಬ ಆರೋಪದ ಬಳಿಕ ಜೈಲಿನ ಮೇಲೆ ದಾಳಿ ನಡೆಸಲಾಗಿತ್ತು. ದಾಳಿ ವೇಳೆ ಕೈದಿಗಳಿಂದ ಡ್ರಗ್ಸ್‌ ಮತ್ತು 19 ಮೊಬೈಲ್‌ಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿತ್ತು. ಅಷ್ಟೇ ಅಲ್ಲ ಈ ಸಂಬಂಧ ಜೈಲಿನ ಅಧಿಕಾರಿಗಳು ಅಮಾನತುಗೊಂಡಿದ್ದಾರೆ. ಇದು ನಮ್ಮ ಜೈಲಿನ ದುರವಸ್ಥೆ’ ಎಂದು ಸುನಿಲ್‌ ಕುಮಾರ್‌ ನ್ಯಾಯಪೀಠದ ಗಮನ ಸೆಳೆದರು. ‘ನನ್ನ ಅರ್ಜಿದಾರ ಕೈದಿಗಳು ಆರೋಗ್ಯದ ದೃಷ್ಟಿಯಿಂದ ಕೇವಲ ವಾರಕ್ಕೊಮ್ಮೆ ಮನೆ ಊಟ ಕೇಳಿದ್ದಾರೆ. ಅಷ್ಟಕ್ಕೂ ನಾನು ನನ್ನ ಕಕ್ಷಿದಾರರ ಪರ ನ್ಯಾಯ ಕೇಳುತ್ತಿದ್ದೇನೆ ಸ್ವಾಮಿ ಅಷ್ಟೇ. ಇದರಲ್ಲಿ ವೈಯಕ್ತಿಕವಾಗಿ ಯಾರನ್ನೂ ದೂಷಿಸುವ ಇರಾದೆ ಇಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.