ADVERTISEMENT

ದುಷ್ಟ ಶಕ್ತಿಗಳ ಬಗ್ಗೆ ಎಚ್ಚರವಿರಲಿ: ಮಹದೇವಪ್ಪ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2022, 19:45 IST
Last Updated 24 ಮಾರ್ಚ್ 2022, 19:45 IST
   

ಬೆಂಗಳೂರು: ಭಾವೈಕ್ಯತೆ ಗೂಡಾಗಿರುವ ಜಾತ್ರೆ, ಹಬ್ಬದ ಆಚರಣೆಗಳಲ್ಲಿ ಧರ್ಮಾಧಾರಿತ ದ್ವೇಷ ಮೂಡಿಸುವ ದುಷ್ಟ ಶಕ್ತಿಗಳನ್ನು ಅರಿಯಬೇಕು. ಇಲ್ಲದೇ ಹೋದರೆ ಬದುಕು ನಡೆಸಲೂ ಕೂಡಾ ಕಠಿಣವಾಗುವ ದಿನಗಳು ಬರಲಿವೆ ಎಂದು ಮಾಜಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಎಚ್ಚರಿಸಿದ್ದಾರೆ.

‘ಜಾತ್ರೆ, ಹಬ್ಬ ಮತ್ತು ಆಚರಣೆಗಳು ಎಂದಿಗೂ ಸರ್ವ ಧರ್ಮ ಮತ್ತು ಜಾತಿಯ ಭಾವೈಕ್ಯತೆಯ ಸಂಕೇತ. ಯುಗಾದಿಯ ಹೋಳಿಗೆಯ ಹೂರಣ ಮತ್ತು ರಂಜಾನ್‌ ಖೀರನ್ನು ವಿನಿಮಯ ಮಾಡಿಕೊಳ್ಳುವ ಎಷ್ಟೋ ಕುಟುಂಬಗಳನ್ನು ನಾನು ನೋಡಿದ್ದೇನೆ. ಹಲವು ಬಾರಿ ಭಾಗವಹಿಸಿದ್ದೇನೆ’ ಎಂದು ಅವರು ಹೇಳಿದ್ದಾರೆ.

‘ಸೂಫಿಗಳು, ಸಾಧು–ಸಂತರು, ಶರಣರು ಹುಟ್ಟಿದ ನಾಡಿನಲ್ಲಿ ಧಾರ್ಮಿಕ ಐಕ್ಯುತೆ ಮತ್ತು ಸಾಮಾಜಿಕ ಸಾಮರಸ್ಯದ ವಾತಾವರಣವು ಇದೆ. ಇದಕ್ಕೆ ಸಾಕ್ಷಿ ಎಂಬಂತೆ ಗುಡಿ ಮತ್ತು ದರ್ಗಾಗಳು ಒಂದೆಡೆ ಇರುವ ಎಷ್ಟೋ ಸ್ಥಳಗಳು ಕರಾವಳಿಯಲ್ಲೂ, ಉತ್ತರ ಕರ್ನಾಟಕದಲ್ಲಿ ಇವೆ’ ಎಂದು ಅವರು ತಿಳಿಸಿದ್ದಾರೆ.

ADVERTISEMENT

‘ಬದುಕು ಕಟ್ಟಿಕೊಳ್ಳಬೇಕಾದ ಪರಿಸ್ಥಿತಿಯಲ್ಲಿ ಇನ್ನೂ ಹೆಣಗುತ್ತಿರುವ ಸಣ್ಣಪುಟ್ಟ ವ್ಯಾಪಾರಿಗಳು ಮತ್ತು ಬಡ ಜನರಲ್ಲಿ ಧರ್ಮದ ಆಧಾರದಲ್ಲಿ ಕಲಹ ಹುಟ್ಟು ಹಾಕುತ್ತಿರುವುದು ಅಪಾಯಕಾರಿ ಸಂಗತಿ. ಕೋವಿಡ್‌ ಬಳಿಕ ಶಾಲೆಗಳು ತೆರೆದ ನಂತರ ತರಗತಿಗಳು ನಡೆಯಬೇಕಾದ ಸ್ಥಳದಲ್ಲಿ ಹಿಜಾಬ್‌ ಗಲಾಟೆ ನಡೆಯುತ್ತಿರುವುದು ಅದಕ್ಕಿಂತಲೂ ಅಪಾಯಕಾರಿ’ ಎಂದು ಮಹದೇವಪ್ಪ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.