ADVERTISEMENT

ರಾಗಿ ಬೆಂಬಲ ಬೆಲೆ ಹೆಚ್ಚಳಕ್ಕೆ ದೇವೇಗೌಡ ಆಗ್ರಹ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2022, 19:03 IST
Last Updated 17 ಫೆಬ್ರುವರಿ 2022, 19:03 IST
ಎಚ್‌.ಡಿ. ದೇವೇಗೌಡ
ಎಚ್‌.ಡಿ. ದೇವೇಗೌಡ    

ಬೆಂಗಳೂರು: ಪ್ರತಿ ಕ್ವಿಂಟಲ್‌ ರಾಗಿಯ ಬೆಂಬಲ ಬೆಲೆಯನ್ನು ಕನಿಷ್ಠ ₹ 4,000ಕ್ಕೆ ಹೆಚ್ಚಳ ಮಾಡಬೇಕು ಎಂದು ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ. ದೇವೇಗೌಡ ಒತ್ತಾಯಿಸಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಳೆದ ವರ್ಷ ಒಂದು ಕ್ವಿಂಟಲ್‌ ರಾಗಿಗೆ ₹ 3,295 ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಲಾಗಿತ್ತು. ಈ ವರ್ಷ ₹ 3,377 ನಿಗದಿ ಮಾಡಲಾಗಿದೆ. ಕೇವಲ ₹ 52 ಹೆಚ್ಚಳ ಮಾಡಲಾಗಿದೆ. ಇದರಿಂದ ರೈತರಿಗೆ ಯಾವ ಅನುಕೂಲವೂ ಆಗುವುದಿಲ್ಲ’ ಎಂದರು.

ರಾಗಿ ಬೆಂಬಲ ಬೆಲೆ ಕಡಿಮೆ ಇರುವ ಕುರಿತು ಪಕ್ಷದ ಮುಖಂಡ ವೈ.ಎಸ್‌.ವಿ. ದತ್ತ ಈಗಾಗಲೇ ರಾಜ್ಯ ಸರ್ಕಾರದ ಗಮನ ಸೆಳೆದಿದ್ದಾರೆ. ತಕ್ಷಣವೇ ಬೆಂಬಲ ಬೆಲೆ ಹೆಚ್ಚಿಸಬೇಕು. ಬೆಂಬಲ ಬೆಲೆಯಡಿ ಆಹಾರ ಧಾನ್ಯ ಖರೀದಿ ಮಾಡುವಾಗ ಸಣ್ಣ ರೈತರು, ದೊಡ್ಡ ರೈತರು ಎಂಬ ಬೇಧ ಮಾಡಬಾರದು ಎಂದು ಆಗ್ರಹಿಸಿದರು.

ADVERTISEMENT

‘ಪ್ರತಿ ಕ್ವಿಂಟಲ್‌ ದರವನ್ನು ₹ 57 ಮಾತ್ರ ಹೆಚ್ಚಿಸಿದರೆ ರೈತರಿಗೆ ಏನು ಲಾಭ ಆಗುತ್ತದೆಯೊ ಗೊತ್ತಿಲ್ಲ. ರಸಗೊಬ್ಬರದ ದರದಲ್ಲಿ ಎಷ್ಟು ಹೆಚ್ಚಳ ಆಗಿದೆ ಎಂಬುದನ್ನು ಸರ್ಕಾರ ನೋಡಬೇಕು. ಇದೇ 20ರಂದು ದೆಹಲಿಗೆ ಹೋಗುತ್ತೇನೆ. ಅವಕಾಶ ಸಿಕ್ಕರೆ ಪ್ರಧಾನಿ ನರೇಂದ್ರ ಮೋದಿ ಅವರನ್ನೂ ಭೇಟಿಮಾಡಿ ಬೆಂಬಲ ಬೆಲೆ ಹೆಚ್ಚಳಕ್ಕೆ ಒತ್ತಾಯ ಮಾಡುತ್ತೇನೆ’ ಎಂದರು.

ವೈ.ಎಸ್‌.ವಿ. ದತ್ತ ಇದ್ದರು.

‘ಕಲಾಪ ಕೆಳಮಟ್ಟಕ್ಕೆ ಕುಸಿಯುತ್ತಿದೆ’

‘ನಾನು ವಿರೋಧ ಪಕ್ಷದ ನಾಯಕನಾಗಿ ನನ್ನ ಅಭಿಪ್ರಾಯ ಹೇಳುತ್ತಾ ಇದ್ದೆ. ಯಾವತ್ತೂ ಸಭಾಧ್ಯಕ್ಷರ ಪೀಠದ ಎದುರು ಧರಣಿ ನಡೆಸಲೇ ಇಲ್ಲ. ಈಗ ಕಲಾಪ ಕೆಳಮಟ್ಟಕ್ಕೆ ಕುಸಿಯುತ್ತಿದೆ’ ಎಂದು ಎಚ್‌.ಡಿ. ದೇವೇಗೌಡ ಅಸಮಾಧಾನ ವ್ಯಕ್ತಪಡಿಸಿದರು.

ಹಿಜಾಬ್‌ ವಿಚಾರ ದಾರಿ ತಪ್ಪಿ ಹೋಗುತ್ತಿದೆ. ಪ್ರಾರಂಭದಲ್ಲೇ ಅದನ್ನು ಚಿವುಟಿ ಹಾಕಬೇಕಿತ್ತು. ಆಡಳಿತ ಪಕ್ಷ ಆ ಕೆಲಸವನ್ನು ಮಾಡಬೇಕಿತ್ತು. ನ್ಯಾಯಾಲಯದ ಆದೇಶಕ್ಕೂ ಬಗ್ಗುವುದಿಲ್ಲ ಎಂದು ಹೆಣ್ಣು ಮಕ್ಕಳು ಹೇಳುತ್ತಿದ್ದಾರೆ. ಇದನ್ನು ಹೀಗೆಯೇ ಹರಡಲು ಬಿಟ್ಟರೆ ಕಷ್ಟವಾಗುತ್ತದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.