ನವದೆಹಲಿ: ಕರ್ನಾಟಕದ ಮೇಕೆದಾಟು ಯೋಜನೆಗೆ ಅನುಮತಿ ನೀಡಬೇಕು ಎಂದು ರಾಜ್ಯಸಭೆಯ ಜೆಡಿಎಸ್ ಸದಸ್ಯ ಎಚ್.ಡಿ.ದೇವೇಗೌಡ ಒತ್ತಾಯಿಸಿದರು.
ಬೆಂಗಳೂರಿನ ಕುಡಿಯುವ ನೀರಿನ ಸಮಸ್ಯೆ ಕುರಿತು ರಾಜ್ಯಸಭೆಯಲ್ಲಿ ಬುಧವಾರ ಪ್ರಸ್ತಾಪಿಸಿದ ಅವರು, ‘ರಾಜ್ಯದಲ್ಲಿ ಆಡಳಿತ ನಡೆಸಿದ ಎಲ್ಲ ಸರ್ಕಾರಗಳು ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಪ್ರಯತ್ನ ಮಾಡಿವೆ. ಆದರೆ, ಇಲ್ಲಿಯವರೆಗೆ ಯಶಸ್ಸು ಸಿಕ್ಕಿಲ್ಲ. ಈ ಯೋಜನೆಗೆ ಅನುಮೋದನೆ ನೀಡುವಂತೆ ರಾಜ್ಯ ಸರ್ಕಾರ ಪ್ರಸ್ತಾವನೆ ಸಲ್ಲಿಸಿದೆ. ಎಲ್ಲ ರಾಜಕೀಯಗಳನ್ನು ಬದಿಗಿಟ್ಟು ಈ ಯೋಜನೆಗೆ ಒಪ್ಪಿಗೆ ನೀಡಬೇಕು’ ಎಂದು ಕೇಂದ್ರ ಸರ್ಕಾರವನ್ನು ಆಗ್ರಹಿಸಿದರು.
‘ಬೆಂಗಳೂರಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗಿದೆ. ನಗರದಲ್ಲಿ 1.45 ಕೋಟಿ ಜನರು ಇದ್ದಾರೆ. ಪ್ರಸ್ತುತ 19 ಟಿಎಂಸಿ ಅಡಿ ಕಾವೇರಿ ನೀರನ್ನು ನಗರಕ್ಕೆ ಸರಬರಾಜು ಮಾಡಲಾಗುತ್ತಿದೆ. ಆದರೆ, ನಗರದ ಬೇಡಿಕೆ ಪೂರೈಸಲು ಸಾಲುತ್ತಿಲ್ಲ. ಟ್ಯಾಂಕರ್ ಮಾಫಿಯಾ ಜನರನ್ನು ಲೂಟಿ ಮಾಡುತ್ತಿದೆ. ನೀರಿನ ಒಂದು ಟ್ಯಾಂಕರ್‌ಗೆ ₹3 ಸಾವಿರ ನೀಡಬೇಕಿದೆ. ನಾಲ್ಕು ಜನರು ಇರುವ ಒಂದು ಕುಟುಂಬವು ತಿಂಗಳಿಗೆ ಕುಡಿಯುವ ನೀರಿಗೆ ₹20 ಸಾವಿರ ಖರ್ಚು ಮಾಡಬೇಕಾದ ದಯನೀಯ ಸ್ಥಿತಿ ಇದೆ. ಮೇಕೆದಾಟು ಯೋಜನೆ ಅನುಷ್ಠಾನದಿಂದ ಈ ಎಲ್ಲ ಸಮಸ್ಯೆಗಳನ್ನು ಬಗೆಹರಿಸಬಹುದು’ ಎಂದು ಗಮನ ಸೆಳೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.