ADVERTISEMENT

ಚಾಮುಂಡೇಶ್ವರಿ ಆಯ್ತು, ಬಾದಾಮಿಯಿಂದಲೂ ಓಡಬೇಕು: ಎಚ್‌.ಡಿ. ಕುಮಾರಸ್ವಾಮಿ

​ಪ್ರಜಾವಾಣಿ ವಾರ್ತೆ
Published 22 ಜನವರಿ 2022, 16:42 IST
Last Updated 22 ಜನವರಿ 2022, 16:42 IST
ಎಚ್.ಡಿ. ಕುಮಾರಸ್ವಾಮಿ
ಎಚ್.ಡಿ. ಕುಮಾರಸ್ವಾಮಿ   

ಬೆಂಗಳೂರು: ‘ಚಾಮುಂಡೇಶ್ವರಿ ಕ್ಷೇತ್ರದಿಂದ ನಿಮ್ಮನ್ನು ಜನರು ಓಡಿಸಿದ್ದು ಮರೆತುಬಿಟ್ಟಿರಾ? ಈ ಸಲ ಬಾದಾಮಿ ಕ್ಷೇತ್ರದಿಂದಲೂ ಓಡಬೇಕಾಗುತ್ತದೆ. ಕಾಯಿರಿ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಸವಾಲು ಹಾಕಿದ್ದಾರೆ.

‘ತುಮಕೂರಿನಿಂದ ಜೆಡಿಎಸ್‌ ಅನ್ನು ಓಡಿಸಿ’ ಎಂದು ಸಿದ್ದರಾಮಯ್ಯ ಶುಕ್ರವಾರ ನೀಡಿದ್ದ ಹೇಳಿಕೆಗೆ ಶನಿವಾರ ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸಿರುವ ಕುಮಾರಸ್ವಾಮಿ, ‘ತುಮಕೂರು ಜಿಲ್ಲೆಯೇನು ನಿಮ್ಮಪ್ಪನ ಜಹಗೀರಾ? ಅಥವಾ ಕಾಂಗ್ರೆಸ್‌ನ ಪಿತ್ರಾರ್ಜಿತ ಆಸ್ತಿಯಾ’ ಎಂದು ಪ್ರಶ್ನಿಸಿದ್ದಾರೆ.

‘ಒಬ್ಬ ನಾಯಕನನ್ನು ಸೃಷ್ಟಿ ಮಾಡುವ ಯೋಗ್ಯತೆ ಇಲ್ಲ. ಪಕ್ಷ ಕಟ್ಟುವ ಧಮ್‌ ಇಲ್ಲ. ಗೆದ್ದಲು ಕಟ್ಟುವ ಹುತ್ತದಲ್ಲಿ ವಿಷ ಸರ್ಪದಂತೆ ಸೇರಿಕೊಳ್ಳುವ, ಬೇರೆಯವರ ಕಷ್ಟದ ಫಲವಾಗಿ ಅಧಿಕಾರ ಅನುಭವಿಸುವ ನೀವು ಜೆಡಿಎಸ್‌ ಬಗ್ಗೆ ಮಾತನಾಡುವುದೆ? ಕಾಂಗ್ರೆಸ್‌ ಸೇರುವ ಮುನ್ನ ನೀವು ಯಾರ ಬಾಲಂಗೋಚಿ ಆಗಿದ್ದೀರಿ? ಗುರುಸ್ವಾಮಿ ಎದುರು ಸೋತು ಸುಣ್ಣವಾದ ಬಳಿಕ ಅನುಗ್ರಹಕ್ಕೆ ಬಂದು ಯಾರ ಮುಂದೆ ಗಳಗಳನೆ ಅತ್ತು ರಾಜಕೀಯ ಬಿಟ್ಟು ವಕೀಲಿ ಮಾಡುತ್ತೇನೆ ಎಂದಿರಿ ಎನ್ನುವುದು ನೆನಪಿದೆಯಾ? ಆಗ ನಿಮಗೆ ಬಾಲಂಗೋಚಿತನ ನೆನಪಾಗಲಿಲ್ಲವೆ?’ ಎಂದು ಕೇಳಿದ್ದಾರೆ.

ADVERTISEMENT

‘ಪ್ರತಿಯೊಂದಕ್ಕೂ ಈ ಸರ್ಕಾರಕ್ಕೆ ಜೆಡಿಎಸ್‌ ಬೆಂಬಲ ನೀಡುತ್ತಿದೆ ಎನ್ನುವ ನಿಮ್ಮ ‘ಸುಳ್ಳು ನಾಲಗೆ’, ಅದೇ ಸರ್ಕಾರ ಬರಲು ಮೂಲ ಕಾರಣರಾದ ‘ಸಿದ್ಧ ಪುರುಷ’ ಯಾರು ಎನ್ನುವುದನ್ನು ಹೇಳಲಿಲ್ಲವೆ? ಪಕ್ಷ ದ್ರೋಹ ತಾಯಿಗೆ ಮಾಡುವ ದ್ರೋಹಕ್ಕೆ ಸಮಾನ. ನಿಮ್ಮ ದ್ರೋಹ ಮುಚ್ಚಿಟ್ಟುಕೊಳ್ಳಲು ಜೆಡಿಎಸ್‌ ಜಪವೆ?’ ಎಂದು ಟೀಕಿಸಿದ್ದಾರೆ.

‘ಮತ್ತೆ ಮುಖ್ಯಮಂತ್ರಿ ಆಗಬೇಕೆನ್ನುವ ದುರಾಸೆ, ಅವಕಾಶ ಸಿಗುವುದಿಲ್ಲವೇನೋ ಎಂಬ ಹತಾಶೆ ನಿಮ್ಮನ್ನು ಕಾಡುತ್ತಿದೆ. ಜೆಡಿಎಸ್‌ ಮುಖಂಡರನ್ನು ಕಾಂಗ್ರೆಸ್‌ಗೆ ಕರೆದೊಯ್ಯುತ್ತಿದ್ದೀರಿ. ನಿಮ್ಮ ಯೋಗ್ಯತೆಗೆ ಜೆಡಿಎಸ್‌ ಬಿಟ್ಟರೆ ಗತಿ ಇಲ್ಲ.’ ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.