ಬೆಂಗಳೂರು: ‘ರಾಮನಗರ ತಾಲ್ಲೂಕು ಬಿಡದಿ ಹೋಬಳಿಯ ಕೇತಗಾನಹಳ್ಳಿ ವ್ಯಾಪ್ತಿಯಲ್ಲಿನ ಸರ್ಕಾರಿ ಜಮೀನುಗಳ ಒತ್ತುವರಿ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ, ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿರುವ ರಾಜ್ಯ ಸರ್ಕಾರದ ಆದೇಶಕ್ಕೆ ನೀಡಲಾಗಿರುವ ಮಧ್ಯಂತರ ತಡೆ ಏಕಪಕ್ಷೀಯ ಆದೇಶವಾಗಿದೆ’ ಎಂದು ಅಡ್ವೊಕೇಟ್ ಜನರಲ್ ಆಕ್ಷೇಪಿಸಿದ್ದಾರೆ.
ಎಸ್‌ಐಟಿ ರಚನೆಗೆ ತಡೆ ನೀಡಿರುವ ನ್ಯಾಯಮೂರ್ತಿ ಇ.ಎಸ್.ಇಂದಿರೇಶ್ ಅವರಿದ್ದ ಏಕಸದಸ್ಯ ನ್ಯಾಯಪೀಠದ ಮುಂದೆ ಸೋಮವಾರ ಹಾಜರಾದ ಅಡ್ವೊಕೇಟ್ ಜನರಲ್ ಕೆ.ಶಶಿಕಿರಣ ಶೆಟ್ಟಿ ಅವರು, ‘ಈ ಪ್ರಕರಣದಲ್ಲಿ ಸರ್ಕಾರದ ವಾದವನ್ನು ಆಲಿಸದೆ ಮಧ್ಯಂತರ ತಡೆ ನೀಡಲಾಗಿದೆ. ಆದ್ದರಿಂದ, ಸರ್ಕಾರದ ವಾದವನ್ನು ಆಲಿಸಿ ಸೂಕ್ತ ಆದೇಶ ಹೊರಡಿಸಬೇಕು’ ಎಂದು ಮನವಿ ಮಾಡಿದರು.
‘ಕರ್ನಾಟಕ ಭೂ ಕಂದಾಯ ಕಾಯ್ದೆ–1964ರ ಕಲಂ 195ರ ಅನುಸಾರ ರಾಜ್ಯ ಸರ್ಕಾರಕ್ಕೆ ಎಸ್‌ಐಟಿ ರಚಿಸುವ ಅಧಿಕಾರವಿದೆ. ಅಷ್ಟಕ್ಕೂ ಹೈಕೋರ್ಟ್ ಆದೇಶಕ್ಕೆ ಅನುಗುಣವಾಗಿಯೇ ಈ ಎಸ್‌ಐಟಿ ರಚಿಸಲಾಗಿದೆ’ ಎಂದು ವಿವರಿಸಿದ ಅವರು, ಮಧ್ಯಂತರ ತಡೆ ಆದೇಶ ತೆರವುಗೊಳಿಸುವಂತೆ ಕೋರಿದ ಮತ್ತು ರಿಟ್ ಅರ್ಜಿಗೆ ಸಂಬಂಧಿಸಿದ ಆಕ್ಷೇಪಣೆಯನ್ನು ನ್ಯಾಯಪೀಠಕ್ಕೆ ಸಲ್ಲಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ‘ನಿಮ್ಮ ಮನವಿಯನ್ನು ಪರಿಗಣಿಸಲಾಗುವುದು’ ಎಂದು ತಿಳಿಸಿ ವಿಚಾರಣೆಯನ್ನು ಇದೇ 26ಕ್ಕೆ ಮುಂದೂಡಿತು. ಮಧ್ಯಂತರ ತಡೆ ಆದೇಶ ಮುಂದುವರಿದಿದೆ.
ಏನಿತ್ತು?: ‘ಎಸ್‌ಐಟಿ ರಚಿಸಿರುವ ಆದೇಶ ರದ್ದುಪಡಿಸಬೇಕು’ ಎಂದು ಕೋರಿ ಕೇಂದ್ರ ಬೃಹತ್ ಕೈಗಾರಿಕೆ ಸಚಿವ ಎಚ್.ಡಿ.ಕುಮಾರಸ್ವಾಮಿ ಸಲ್ಲಿಸಿರುವ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಇ.ಎಸ್.ಇಂದಿರೇಶ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಇದೇ 19ರಂದು ವಿಚಾರಣೆ ನಡೆಸಿತ್ತು.
ಅಂದು ವಿಚಾರಣೆ ವೇಳೆ ಕುಮಾರಸ್ವಾಮಿ ಪರ ಪದಾಂಕಿತ ಹಿರಿಯ ವಕೀಲ ಉದಯ ಹೊಳ್ಳ ಅವರು, ‘ಎಸ್‌ಐಟಿ ರಚಿಸಿದ ಬಳಿಕ ಸರ್ಕಾರ ಅಧಿಸೂಚನೆ ಹೊರಡಿಸಬೇಕು. ಆದರೆ, ಈ ಪ್ರಕ್ರಿಯೆ ನಡೆಸದೇ ಅರ್ಜಿದಾರ ಕುಮಾರಸ್ವಾಮಿ ಅವರಿಗೆ ಎಸ್‌ಐಟಿ ಸಮನ್ಸ್ ಜಾರಿ ಮಾಡಿದೆ. ಆದ್ದರಿಂದ, ಎಸ್‌ಐಟಿ ರಚನೆ ಕಾನೂನು ಬಾಹಿರವಾಗಿದ್ದು ಈ ಕುರಿತ ಆದೇಶ ವಜಾಗೊಳಿಸಬೇಕು’ ಎಂದು ಕೋರಿದ್ದರು.
ಪ್ರತಿವಾದಿಗಳಾದ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಮತ್ತು ರಾಮನಗರ ತಹಶೀಲ್ದಾರ್‌ಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿತ್ತು. ಅಂತೆಯೇ, ಎಸ್‌ಐಟಿ ರಚನೆಗೆ ತಡೆ ನೀಡಿ ಮಧ್ಯಂತರ ಆದೇಶ ಹೊರಡಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.