ADVERTISEMENT

ಪ್ರವಾಹಪೀಡಿತ ಜಿಲ್ಲೆಗಳ ರೈತರ ಸಾಲ ಸಂಪೂರ್ಣ ಮನ್ನಾ ಮಾಡಿ

ಜೆಡಿಎಸ್‌ ಶಾಸಕ ಎಚ್‌.ಡಿ. ರೇವಣ್ಣ ಆಗ್ರಹ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2019, 13:20 IST
Last Updated 20 ಆಗಸ್ಟ್ 2019, 13:20 IST

ಬೆಳಗಾವಿ: ‘ಹಿಂದೆಂದೂ ಕಂಡರಿಯದಂತಹ ಪ್ರವಾಹದಿಂದಾಗಿ ಸರ್ವಸ್ವವನ್ನೂ ಕಳೆದುಕೊಂಡಿರುವ ರೈತರ ಎಲ್ಲ ಸಾಲವನ್ನೂ ಮನ್ನಾ ಮಾಡಬೇಕು’ ಎಂದು ಶಾಸಕ, ಜೆಡಿಎಸ್ ಮುಖಂಡ ಎಚ್.ಡಿ. ರೇವಣ್ಣ ಸರ್ಕಾರವನ್ನು ಒತ್ತಾಯಿಸಿದರು.

‘ಸಂಕಷ್ಟದ ಸಂದರ್ಭದಲ್ಲಿ ಅವರೊಂದಿಗೆ ಸರ್ಕಾರ ನಿಲ್ಲಬೇಕಾಗಿದೆ. ಇದಕ್ಕಾಗಿ ಮಾರ್ಗಸೂಚಿಗಳನ್ನು ಮೂಲೆಗೆ ಹಾಕಿ, ಮಾನವೀಯತೆಯಿಂದ ‍ಪರಿಹಾರ ಕಾರ್ಯ ಕೈಗೊಳ್ಳಬೇಕು’ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.

‘ನೆರೆಯಿಂದಾಗಿ ಲಕ್ಷಾಂತರ ಕುಟುಂಬಗಳು ಬೀದಿಪಾಲಾಗಿವೆ. 370 ಹಳ್ಳಿಗಳು ನಾಶವಾಗಿವೆ. ಆಗಿರುವ ನಷ್ಟದ ಮೊತ್ತ ಅಂದಾಜಿಗೇ ಸಿಗದಂತಹ ಪರಿಸ್ಥಿತಿ ಇದೆ. ಹೀಗಾಗಿ, ಇದನ್ನು ರಾಷ್ಟ್ರೀಯ ‌ವಿಪತ್ತು ಎಂದು‌ ಘೋಷಣೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು’ ಎಂದರು.

ADVERTISEMENT

‘ಬೆಳಗಾವಿ ಜಿಲ್ಲೆಯೊಂದರಲ್ಲೇ ₹8ಸಾವಿರ ಕೋಟಿ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಕೆಲವು ಕಡೆಗಳಲ್ಲಿ ಸಂತ್ರಸ್ತರಿಗೆ ಇನ್ನೂ ಪರಿಹಾರ ಕೊಟ್ಟಿಲ್ಲ. ಇಲ್ಲಿವರೆಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಒಬ್ಬರೇ ಇದ್ದರು. ಅವರ ಕೈಲಾದ ಸಹಾಯವನ್ನು ಮಾಡಿದ್ದಾರೆ. ಈಗ ಸಂಪುಟ ವಿಸ್ತರಣೆ ಮಾಡಲಾಗಿದ್ದು, ಸಚಿವರು ಬಂದಿದ್ದಾರೆ. ಜಿಲ್ಲೆಗೊಬ್ಬ ಮಂತ್ರಿಯನ್ನು ಪರಿಹಾರ ಕಾರ್ಯಗಳ ಮೇಲುಸ್ತುವಾರಿಗೆ ನಿಯೋಜಿಸಬೇಕು. ಸಂತ್ರಸ್ತರಿಗೆ ಕೂಡಲೇ ಸೂಕ್ತ ಪರಿಹಾರ‌ ಕೊಡಬೇಕು. ಕೇಂದ್ರ ಸರ್ಕಾರವೂ ಹೆಚ್ಚಿನ ಅನುದಾನ ನೀಡಬೇಕು’ ಎಂದು ತಿಳಿಸಿದರು.

‘ಒಡಿಸಾದಲ್ಲಿ ಚುನಾವಣೆ ಇದೆ. ಹೀಗಾಗಿ, ಕೇಂದ್ರ ಸರ್ಕಾರ ಅಲ್ಲಿಗೆ ಈಗಾಗಲೇ ₹ 1ಸಾವಿರ ಕೋಟಿ ಕೊಟ್ಟಿದೆ. ಮತ್ತೆ ₹ 3ಸಾವಿರ‌ ಕೋಟಿ ಘೋಷಿಸಿದ್ದಾರೆ. ಕರ್ನಾಟಕಕ್ಕೆ ಸದ್ಯ ಕನಿಷ್ಠ ₹ 10ಸಾವಿರ ಕೋಟಿಯನ್ನಾದರೂ ಕೊಡಬೇಕು. ಸರ್ವ ಪಕ್ಷಗಳ ಸಭೆ ಕರೆದು, ಕೇಂದ್ರಕ್ಕೆ ನಿಯೋಗ ಕರೆದುಕೊಂಡು ‌ಹೋಗಬೇಕು. ರೈತರು ಬೆಳೆ ಬೆಳೆಯಲು ಮಾಡಿದ ಎಲ್ಲ ಖರ್ಚನ್ನೂ ಕೊಡಬೇಕು. ಸರ್ಕಾರದಿಂದಲೇ ಮನೆ ಕಟ್ಟಿಸಿಕೊಡಬೇಕು. ಅಲ್ಲಿವರೆಗೆ ಅವರ ಜೀವನ ನಿರ್ವಹಣೆ ತಗಲುವ ವೆಚ್ಚ‌ ಕೊಡಬೇಕು’ ಎಂದು ಒತ್ತಾಯಿಸಿದರು.

‘ಈ ಸಂದರ್ಭದಲ್ಲಿ ರಾಜಕಾರಣ ಮಾಡುವುದಕ್ಕೆ ಹೋಗುವುದಿಲ್ಲ. ಸಂತ್ರಸ್ತರಿಗೆ ನೆರವಾಗಬೇಕಾದ ಜವಾಬ್ದಾರಿ ಎಲ್ಲರ ಮೇಲೂ ಇದೆ. ಹೀಗಾಗಿ, ಒಟ್ಟಾಗಿ ಕೆಲಸ ಮಾಡಬೇಕು. ರಾಜ್ಯ ಸರ್ಕಾರ ಇನ್ನಾದರೂ ಚುರುಕಾಗಬೇಕು. ನೊಂದ ಜನರಿಗೆ ಧೈರ್ಯ ತುಂಬಬೇಕು’ ಎಂದರು.

ಮುಖಂಡರಾದ ಎನ್.ಎಚ್. ಕೋನರೆಡ್ಡಿ, ಫೈಜುಲ್ಲಾ ಮಾಡಿವಾಲೆ, ಶಂಕರ ಮಾಡಲಗಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.