ADVERTISEMENT

ಪಾದಯಾತ್ರೆ ನಿಲ್ಲಿಸದಿದ್ದರೆ ಕಠಿಣ ಕ್ರಮ ಕೈಗೊಳ್ಳಿ: ಎಚ್‌ಡಿಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 12 ಜನವರಿ 2022, 19:31 IST
Last Updated 12 ಜನವರಿ 2022, 19:31 IST
ಎಚ್.ಡಿ. ಕುಮಾರಸ್ವಾಮಿ
ಎಚ್.ಡಿ. ಕುಮಾರಸ್ವಾಮಿ   

ಬೆಂಗಳೂರು: ಹೈಕೋರ್ಟ್‌ ಛೀಮಾರಿ ಹಾಕಿದ ಬಳಿಕವೂ ಕಾಂಗ್ರೆಸ್‌ ಮುಖಂಡರು ಮೇಕೆದಾಟು ಹೆಸರಿನಲ್ಲಿ ನಡೆಸುತ್ತಿರುವ ಪಾದಯಾತ್ರೆಯನ್ನು ನಿಲ್ಲಿಸದಿದ್ದರೆ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

ಈ ಕುರಿತು ಬುಧವಾರ ಸರಣಿ ಟ್ವೀಟ್‌ ಮಾಡಿರುವ ಅವರು, ‘ಮೇಕೆದಾಟು ಪಾದಯಾತ್ರೆಯನ್ನು ‘ಓಮೈಕ್ರಾನ್‌ ಜಾತ್ರೆ’ಯನ್ನಾಗಿ ಪರಿವರ್ತಿಸಿದ ಕಾಂಗ್ರೆಸ್‌ ಪಕ್ಷಕ್ಕೆ ಹೈಕೋರ್ಟ್‌ ಛೀಮಾರಿ ಹಾಕಿದೆ. ಕೋವಿಡ್‌ ಸೋಂಕಿನ ಬಗ್ಗೆ ನಿರ್ಲಕ್ಷ್ಯ ತೋರಿದ ಸರ್ಕಾರಕ್ಕೂ ಚಾಟಿ ಬೀಸಿದೆ. ಸರ್ಕಾರ ಮತ್ತೆ ನ್ಯಾಯಾಲಯದಿಂದ ಛೀಮಾರಿ ಹಾಕಿಸಿಕೊಳ್ಳಬಾರದು’ ಎಂದಿದ್ದಾರೆ.

ಈಗಾಗಲೇ ಪರಿಸ್ಥಿತಿ ಕೈಮೀರಿದೆ. ನಾಲ್ಕು ದಿನಗಳಿಂದ ಬಸ್‌ಗಳಲ್ಲಿ ಜನರನ್ನು ಕರೆತಂದು ಜಾತ್ರೆ ನಡೆಸುತ್ತಿದ್ದಾರೆ. ಇದರಿಂದ ಮೇಕೆದಾಟು ಯೋಜನೆಯ ಸಾಕಾರ ಅಸಾಧ್ಯ. ಕಾಂಗ್ರೆಸ್‌ ಪಾದಯಾತ್ರೆಯಿಂದ ಜೆಡಿಎಸ್‌ಗೆ ಆತಂಕವಿಲ್ಲ. ಜನರು ಆರೋಗ್ಯದ ಕುರಿತು ಆತಂಕದಲ್ಲಿದ್ದಾರೆ. ಕೋವಿಡ್‌ ಅಟ್ಟಹಾಸದ ಹೊತ್ತಿನಲ್ಲಿ ಈ ಯಾತ್ರೆ ಬೇಕಿರಲಿಲ್ಲ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ADVERTISEMENT

ಚುನಾವಣೆ ಹತ್ತಿರದಲ್ಲಿದೆ. ಕಾಂಗ್ರೆಸ್‌ ನಾಯಕರು ಬೇಕಿದ್ದರೆ ಕೋವಿಡ್‌ ಇಳಿಮುಖವಾದ ಬಳಿಕ ಪಕ್ಷ ಸಂಘಟನೆ ಮಾಡಿಕೊಳ್ಳಲಿ. ಈಗ ಜನರ ಜೀವದ ಜತೆ ಚೆಲ್ಲಾಟ ಆಡಬಾರದು. ಕಾಂಗ್ರೆಸ್‌ ಜವಾಬ್ದಾರಿಯುತ ರಾಜಕೀಯ ಪಕ್ಷವಾಗಿದ್ದರೆ ತಕ್ಷಣ ಯಾತ್ರೆ ನಿಲ್ಲಿಸಲಿ. ‘ಗಂಡಸ್ತನ’ ತೋರಿಸಲು ಹೋಗಿ ಮೇಕೆದಾಟನ್ನು ಮಸಣ ಮಾಡುವುದು ಬೇಡ ಎಂದು ಆಗ್ರಹಿಸಿದ್ದಾರೆ.

ಸರ್ಕಾರ ನಾಲ್ಕು ದಿನಗಳಿಂದ ತೋರಿದ ಔದಾರ್ಯ ಸಾಕು. ಇನ್ನೂ ಔದಾರ್ಯ ತೋರುವುದು ರಾಜ್ಯದ ಅವನತಿಗೆ ದಾರಿಯಾಗುತ್ತದೆ. ಕೋವಿಡ್‌ ನಿಯಮ ಪಾಲಿಸುವಂತೆ ಜನರಿಗೆ ಹಿಂಸೆ ಕೊಟ್ಟು, ರಾಜಕಾರಣಿಗಳಿಗೆ ವಿನಾಯ್ತಿ ನೀಡುವುದು ಉತ್ತಮ ಆಡಳಿತದ ಲಕ್ಷಣವಲ್ಲ. ಸರ್ಕಾರ ಕೆಚ್ಚೆದೆಯ ಕ್ರಮ ಕೈಗೊಳ್ಳಬೇಕು ಎಂದು ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.