ADVERTISEMENT

ರಾಜ್ಯದಲ್ಲಿ ಬಿಆರ್ಎಸ್‌ ಸ್ಪರ್ಧೆಯಿಲ್ಲ: ಎಚ್‌.ಡಿ. ಕುಮಾರಸ್ವಾಮಿ

ಜೆಡಿಎಸ್‌ ಅಭ್ಯರ್ಥಿಗಳಿಗೇ ಕೆಸಿಆರ್‌ ಬೆಂಬಲ: ಎಚ್‌.ಡಿ. ಕುಮಾರಸ್ವಾಮಿ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2022, 21:11 IST
Last Updated 6 ಅಕ್ಟೋಬರ್ 2022, 21:11 IST
 ಎಚ್‌.ಡಿ. ಕುಮಾರಸ್ವಾಮಿ
ಎಚ್‌.ಡಿ. ಕುಮಾರಸ್ವಾಮಿ   

ಬೆಂಗಳೂರು: ‘ಕೆ.ಚಂದ್ರಶೇಖರರಾವ್ ನೇತೃತ್ವದ ಭಾರತ ರಾಷ್ಟ್ರ ಸಮಿತಿಯು (ಬಿಆರ್‌ಎಸ್‌) ಕರ್ನಾಟಕದ ವಿಧಾನಸಭೆ ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುವುದಿಲ್ಲ. ನಮ್ಮ ಅಭ್ಯರ್ಥಿಗಳನ್ನೇ ಬೆಂಬಲಿಸುವ ನಿರ್ಧಾರವನ್ನು ಆ ಪಕ್ಷ ತೆಗೆದುಕೊಂಡಿದೆ’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ‘ತೆಲಂಗಾಣದ ಮುಖ್ಯಮಂತ್ರಿಯೂ ಆಗಿರುವ ಚಂದ್ರಶೇಖರರಾವ್ ಜತೆ ನಮ್ಮ ಪಕ್ಷದ ಶಾಸಕರೊಂದಿಗೆ ಹಲವಾರು ವಿಷಯಗಳ ಕುರಿತು ಚರ್ಚಿಸಿದ್ದೇನೆ. 2024ರ ಲೋಕಸಭೆ ಚುನಾವಣೆಯಲ್ಲಿ 150ಕ್ಕೂ ಹೆಚ್ಚು ಕ್ಷೇತ್ರಗಳಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಕೆಸಿಆರ್ ಚಿಂತನೆ ನಡೆಸಿದ್ದಾರೆ. ರಾಜ್ಯದ ಗಡಿ ಭಾಗದಲ್ಲಿನ ಕೆಲ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಹಾಕಲಿದ್ದಾರೆ’ ಎಂದು ಹೇಳಿದರು.

‘ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದರೆ ತೆಲಂಗಾಣ ಮಾದರಿಯಲ್ಲಿ ರೈತಬಂಧು ಹಾಗೂ ದಲಿತ ಬಂಧು ಯೋಜನೆಯನ್ನು ಜಾರಿಗೆ ತರಲಾಗುವುದು. ರೈತಬಂಧು ಯೋಜನೆಯಡಿ 24 ಗಂಟೆ ಉಚಿತ ವಿದ್ಯುತ್, ಪ್ರತಿ ವರ್ಷ ಎಕರೆಗೆ ₹10 ಸಾವಿರ ಸಹಾಯ ಧನ ನೀಡುತ್ತಿದ್ದಾರೆ. ರೈತ ಅಕಾಲಿಕ ಮರಣಕ್ಕೀಡಾದರೆ ತಕ್ಷಣ ₹5 ಲಕ್ಷ ವಿಮಾ ಪರಿಹಾರ ತಲುಪಿಸುತ್ತಿದ್ದಾರೆ. ದಲಿತ ಬಂಧು ಯೋಜನೆಯಡಿ ಸ್ವ ಉದ್ಯೋಗ ಮಾಡಲು ₹10 ಲಕ್ಷ ನೆರವನ್ನು ನೀಡುತ್ತಿದ್ದಾರೆ ’ ಎಂದು ಅವರು ಹೇಳಿದರು.

ADVERTISEMENT

ಕಾಂಗ್ರೆಸ್ ಜೋಡೊ ಯಾತ್ರೆ: ‘ರಾಹುಲ್ ಗಾಂಧಿ ಅವರ ಹೇಳಿಕೆ ನೋಡಿದರೆ ಭಾರತ್ ಜೋಡೊಗಿಂತ ಕಾಂಗ್ರೆಸ್ ಜೋಡೊ ಎನ್ನುವ ರೀತಿ ಅವರ ಯಾತ್ರೆ ಕಾಣಿಸುತ್ತಿದೆ. ಕರ್ನಾಟಕಕ್ಕೆ ಯಾತ್ರೆ ಪ್ರವೇಶಿಸಿದಾಗ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಕೈ ಹಿಡಿದು ರಾಹುಲ್ ನಗಾರಿ ಬಾರಿಸಿದ್ದಾರೆ. ಎಲ್ಲರೂ
ಒಗ್ಗಟ್ಟಾಗಿ ಹೋಗಿ ಅಂತ ಪದೇ ಪದೇ ಹೇಳುತ್ತಿದ್ದಾರೆ. ಈ ಪಾದಯಾತ್ರೆ ಆಧರಿಸಿ
ಮುಂದಿನ ಚುನಾವಣಾ ಫಲಿತಾಂಶ ನಿರ್ಧಾರವಾಗುವುದಿಲ್ಲ’ ಎಂದರು.

ಜನತಾ‌ಮಿತ್ರ ಸಮಾರೋಪ ಸಮಾರಂಭ ಇದೇ 8ರಂದು ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಮಧ್ಯಾಹ್ನ 3 ಗಂಟೆಗೆ ನಡೆಯಲಿದೆ. ಮಳೆಯಿಂದ ಈ ಕಾರ್ಯಕ್ರಮ ಎರಡು ಬಾರಿ ಮುಂದೂಡಿಕೆಯಾಗಿತ್ತು. ಬಿಬಿಎಂಪಿ ಚುನಾವಣಾ ಪ್ರಚಾರವನ್ನೂ ಈ ಕಾರ್ಯಕ್ರಮದಿಂದಲೇ ಶುರು ಮಾಡಲಾಗುತ್ತದೆ ಎಂದು ಹೇಳಿದರು.

ತನಿಖೆಗೆ ಆಗ್ರಹಿಸಿ ಮುಖ್ಯಮಂತ್ರಿಗೆ ಪತ್ರ

‘ಚನ್ನಪಟ್ಟಣ ಕ್ಷೇತ್ರದ ಶಾಸಕನಾದ ನನ್ನನ್ನು ಹೊರಗಿಟ್ಟು ಕಾರ್ಯಕ್ರಮ ನಡೆಸಲು ಕಾರಣರಾದ ರಾಮನಗರ ಜಿಲ್ಲಾಧಿಕಾರಿ, ಜಿಲ್ಲಾ ಎಸ್ಪಿ ಸೇರಿದಂತೆ ಎಲ್ಲ ಅಧಿಕಾರಿಗಳನ್ನು ಅಮಾನತು ಮಾಡಿ, ಮುಖ್ಯಕಾರ್ಯದರ್ಶಿ ಶ್ರೇಣಿಯ ಅಧಿಕಾರಿಯಿಂದ ತನಿಖೆ ನಡೆಸಬೇಕು’ ಎಂದು ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಆಗ್ರಹಿಸಿದ್ದಾರೆ.

ಈ ಕುರಿತು ಪತ್ರ ಬರೆದಿರುವ ಅವರು, ‘ಕಲಾವಿದರ ಕೋಟಾದಿಂದ ವಿಧಾನಪರಿಷತ್ತಿನ ಸದಸ್ಯರಾದವರಿಗೆ ₹50 ಕೋಟಿ ಅನುದಾನ ನೀಡಿದ್ದೇ ಸರಿಯಲ್ಲ. ಕಾರ್ಯಕ್ರಮ ನಡೆಸುವ ಮುನ್ನ ತಮ್ಮ ಜತೆ ಸಮಾಲೋಚನೆಯನ್ನೂ ನಡೆಸಲಿಲ್ಲ. ಈ ಸಂಬಂಧ ಸೂಕ್ತ ಕ್ರಮ ಕೈಗೊಳ್ಳದೇ ಇದ್ದರೆ ಶಾಸಕರ ಜತೆ ವಿಧಾನಸೌಧದ ಗಾಂಧಿ ಪ್ರತಿಮೆ ಎದುರು ಧರಣಿ ಸತ್ಯಾಗ್ರಹ ನಡೆಸಬೇಕಾ
ಗುತ್ತದೆ’ ಎಂದೂ ಅವರು ಎಚ್ಚರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.