ADVERTISEMENT

ಯಾರೆಲ್ಲ ಏಕಪತ್ನಿ ವ್ರತಸ್ಥರು? 224 ಶಾಸಕರ ತನಿಖೆಯಾಗಲಿ: ಸುಧಾಕರ್

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2021, 9:13 IST
Last Updated 24 ಮಾರ್ಚ್ 2021, 9:13 IST
ಡಾ.ಕೆ. ಸುಧಾಕರ್, ಆರೋಗ್ಯ ಸಚಿವ
ಡಾ.ಕೆ. ಸುಧಾಕರ್, ಆರೋಗ್ಯ ಸಚಿವ    

ಬೆಂಗಳೂರು: ಶಾಸಕ ರಮೇಶ್ ಜಾರಕಿಹೊಳಿಗೆ ಸಂಬಂಧಿಸಿದೆ ಎನ್ನಲಾದ ಸಿ.ಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರದ ವಿರುದ್ಧ ಮುಗಿಬಿದ್ದಿರುವ ಪ್ರತಿಪಕ್ಷ ನಾಯಕರ ವಿರುದ್ಧ ವಾಗ್ದಾಳಿ ನಡೆಸಿರುವ ಆರೋಗ್ಯ ಸಚಿವ ಡಾ.ಕೆ. ಸುಧಾಕರ್,224 ಶಾಸಕರವೈಯಕ್ತಿಕ ಜೀವನದ ಬಗ್ಗೆ ತನಿಖೆ ನಡೆಯಲಿ ಎಂದು ಸವಾಲು ಹಾಕಿದ್ದಾರೆ.

ಡಿ.ಕೆ. ಶಿವಕುಮಾರ್, ರಮೇಶ್ ಕುಮಾರ್, ಬಿ.ಮುನಿಯಪ್ಪ, ಸಿದ್ದರಾಮಯ್ಯನವರು ಮತ್ತು ನಮ್ಮ ಕುಮಾರಣ್ಣನವರು ಎಲ್ಲರೂ ಸತ್ಯಹರಿಶ್ಚದ್ರರಲ್ಲವೇ? ಏಕಪತ್ನಿವ್ರತಸ್ಥರಾಗಿ ಇಡೀ ಸಮಾಜಕ್ಕೆ ಮಾದರಿಯಾಗಿದ್ದಾರಲ್ಲವೇ? ಇವರೆಲ್ಲರೂ ಒಪ್ಪಿಕೊಳ್ಳಲಿ. 224 ಶಾಸಕರ ಮೇಲೆ ತನಿಖೆ ನಡೆಯಲಿ. ಯಾರ್‍ಯಾರ ಬಂಡವಾಳ ಏನೆಂಬುದು ರಾಜ್ಯದ ಜನರಿಗೆ ಗೊತ್ತಾಗುತ್ತದೆ ಎಂದು ಸವಾಲು ಹಾಕಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಸಚಿವ ಸುಧಾಕರ್, ಯಾರ್‍ಯಾರು ಮುಖ್ಯಮಂತ್ರಿ ಆಗಿದ್ದಾಗ ಏನೇನು ಮಾಡಿದ್ದಾರೆ ಎಂಬುದು ಹೊರಬರಲಿ. ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಶ್ರೀರಾಮಚಂದ್ರರೆಂದು ಹೇಳಿಕೊಳ್ಳುತ್ತಿದ್ದಾರಲ್ಲ.ಅವರಿಗೆ ಸವಾಲು ಹಾಕುತ್ತೇನೆ. 224 ಶಾಸಕರು ತನಿಖೆ ಎದುರಿಸಲಿ,ಯಾರ್‍ಯಾರು ವಿವಾಹೇತರ ಮತ್ತು ಅನೈತಿಕ ಸಂಬಂಧ ಇಟ್ಟುಕೊಂಡಿದ್ದಾರೆ ಎಂಬುದು ಜನರಿಗೆ ಗೊತ್ತಾಗಲಿ. ಯಾರೆಲ್ಲ ಶ್ರೀರಾಮಚಂದ್ರರು.. ಮರ್ಯಾದಾ ಪುರುಷರು ಎಂಬುದು ಗೊತ್ತಾಗಿಹೋಗಲಿ ಎಂದು ಅವರು ಹೇಳಿದ್ದಾರೆ.

ಸುಧಾಕರ್ ಅವರ ಧಾಟಿಯಲ್ಲೇ ಮಾತನಾಡಿರುವ ಕೃಷಿ ಸಚಿವ ಬಿ.ಸಿ. ಪಾಟೀಲ್, ಯಾರೂ ಶ್ರೀರಾಮಚಂದ್ರ, ಸೀತೆಮಾತೆಯರಲ್ಲ. ಒಂದು ಬೆರಳು ಬೇರೆಯವರನ್ನು ತೋರಿದರೆ, 4 ಬೆರಳು ಅವರ ಕಡೆಯೇ ತೋರಿಸುತ್ತದೆ. ಎಲ್ಲರೂ ಅವರವರ ಆತ್ಮಮುಟ್ಟಿ ನೋಡಿಕೊಳ್ಳಲಿ ಎಂದುಹೇಳಿದ್ದಾರೆ.

ಈ ಮಧ್ಯೆ, ಸಿ.ಡಿ ಪ್ರಕರಣದ ತನಿಖೆಯನ್ನು ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಉಸ್ತುವಾರಿಯಲ್ಲೇ ನಡೆಸಬೇಕು ಎಂದು ಒತ್ತಾಯಿಸಿ ಕಾಂಗ್ರೆಸ್‌ ಸದಸ್ಯರು ವಿಧಾನಸಭೆಯಲ್ಲಿ ಮೂರನೆ ದಿನವೂ ಧರಣಿ ಮುಂದುವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.