ADVERTISEMENT

ಯುವಜನರ ಹೃದಯಾಘಾತಕ್ಕೆ ಲಸಿಕೆ ಕಾರಣ ಅಲ್ಲ: ಕೇಂದ್ರ ಆರೋಗ್ಯ ಸಚಿವಾಲಯ

​ಪ್ರಜಾವಾಣಿ ವಾರ್ತೆ
Published 2 ಜುಲೈ 2025, 15:37 IST
Last Updated 2 ಜುಲೈ 2025, 15:37 IST
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ   

ನವದೆಹಲಿ: ಯುವಜನರಲ್ಲಿ ಹಠಾತ್‌ ಹೃದಯಾಘಾತಕ್ಕೆ ಕೋವಿಡ್‌ ಲಸಿಕೆ ಕಾರಣ ಎಂಬುದನ್ನು ಅಲ್ಲಗಳೆಯಲಾಗದು ಎಂದು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅನುಮಾನ ವ್ಯಕ್ತಪಡಿಸಿದ ಬೆನ್ನಲ್ಲೇ ಸ್ಪಷ್ಟನೆ ನೀಡಿರುವ ಕೇಂದ್ರ ಆರೋಗ್ಯ ಸಚಿವಾಲಯ, ‘ಇಂತಹ ಹೇಳಿಕೆ ಸುಳ್ಳು ಹಾಗೂ ದಾರಿ ತಪ್ಪಿಸುವಂತಹುದು. ಇದಕ್ಕೆ ಯಾವುದೇ ವೈಜ್ಞಾನಿಕ ಪುರಾವೆ ಇಲ್ಲ’ ಎಂದು ಹೇಳಿದೆ.

‘ಹಠಾತ್‌ ಹೃದಯಾಘಾತಕ್ಕೂ ಕೋವಿಡ್‌ ಲಸಿಕೆಗೂ ಸಂಬಂಧ ಇಲ್ಲ ಎಂಬುದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಮತ್ತು ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರ (ಎನ್‌ಸಿಡಿಸಿ) ನಡೆಸಿರುವ ಅಧ್ಯಯನಗಳಿಂದ ಸಾಬೀತಾಗಿದೆ. ಭಾರತದಲ್ಲಿ ನೀಡಲಾಗುವ ಕೋವಿಡ್‌ ಲಸಿಕೆಗಳು ಸುರಕ್ಷಿತ ಮತ್ತು ಪರಿಣಾಮಕಾರಿ ಎಂದು ಅಧ್ಯಯನಗಳು ಹೇಳಿವೆ. ಈ ಲಸಿಕೆಗಳು ಅತ್ಯಂತ ಕಡಿಮೆ ಅಡ್ಡಪರಿಣಾಮಗಳನ್ನು ಹೊಂದಿವೆ’ ಎಂದು ಸಚಿವಾಲಯ ತಿಳಿಸಿದೆ.

ಕೆಲವರು ಮಾಡುತ್ತಿರುವ ಆಧಾರರಹಿತ ಆರೋಪದಿಂದಾಗಿ ಜನರು ಲಸಿಕೆ ಹಾಕಿಸಿಕೊಳ್ಳಲು ಹಿಂಜರಿಯಬಹುದು. ಇದರಿಂದ ಸಾರ್ವಜನಿಕ ಆರೋಗ್ಯ ಪರಿಸ್ಥಿತಿಯ ಮೇಲೆ ಪರಿಣಾಮ ಬೀರುತ್ತದೆ ಎಂದೂ ತಿಳಿಸಿದೆ. 

ADVERTISEMENT

ಆನುವಂಶಿಕ ಗುಣಲಕ್ಷಣಗಳು, ಜೀವನಶೈಲಿ, ಮೊದಲಿನಿಂದ ಇರುವ ಆರೋಗ್ಯ ತೊಂದರೆಗಳು ಹಾಗೂ ಕೋವಿಡ್‌ ನಂತರದ ಸಮಸ್ಯೆಗಳು ಸೇರಿದಂತೆ ಹಲವಾರು ಅಂಶಗಳು ಹಠಾತ್ ಹೃದಯಾಘಾತ ಮತ್ತು ಸಾವುಗಳಿಗೆ ಕಾರಣವಾಗಬಹುದು ಎಂದು ಸಚಿವಾಲಯ ಅಭಿಪ್ರಾಯಪಟ್ಟಿದೆ. 

‘ಜನರ ಹಠಾತ್ ಸಾವುಗಳ ಹಿಂದಿನ ಕಾರಣಗಳನ್ನು ಪತ್ತೆ ಹಚ್ಚಲು ಐಸಿಎಂಆರ್‌ ಹಾಗೂ ಎನ್‌ಸಿಡಿಸಿ ಜತೆಗೂಡಿ ಕೆಲಸ ಮಾಡುತ್ತಿವೆ. ವಿಶೇಷವಾಗಿ 18ರಿಂದ 45 ವರ್ಷ ವಯಸ್ಸಿನ ಯುವಜನರ ಸಾವಿನ ಬಗ್ಗೆ ತನಿಖೆ ಮಾಡಲು ವಿಭಿನ್ನ ಸಂಶೋಧನಾ ವಿಧಾನಗಳನ್ನು ಬಳಸಿಕೊಂಡು ಎರಡು ಅಧ್ಯಯನಗಳನ್ನು ನಡೆಸಲಾಗಿದೆ. ಒಂದು ಐತಿಹಾಸಿಕ ದತ್ತಾಂಶ ಆಧರಿಸಿದೆ. ಇನ್ನೊಂದು ಪ್ರಸ್ತುತ ಸಂದರ್ಭವನ್ನು ಆಧರಿಸಿದೆ. ಐಸಿಎಂಆರ್‌ನ ರಾಷ್ಟ್ರೀಯ ಸಾಂಕ್ರಾಮಿಕ ರೋಗಗಳ ಸಂಸ್ಥೆಯು 19 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ 47 ಆಸ್ಪತ್ರೆಗಳಲ್ಲಿ 2023ರ ಮೇ ತಿಂಗಳಿಂದ ಆಗಸ್ಟ್‌ ವರೆಗೆ ಮೊದಲ ಅಧ್ಯಯನ ನಡೆಸಿದೆ. ಕೋವಿಡ್‌ ಲಸಿಕೆಯಿಂದಾಗಿ ಹಠಾತ್ ಸಾವು ಉಂಟಾಗುವುದಿಲ್ಲ ಎಂದು ಅಧ್ಯಯನದಿಂದ ಬಹಿರಂಗಗೊಂಡಿದೆ’ ಎಂದು ತಿಳಿಸಿದೆ.

‘ಯುವಜನರಲ್ಲಿ ಹಠಾತ್ ಸಾವಿನ ಕಾರಣಗಳನ್ನು ಗುರುತಿಸುವುದು’ ಎಂಬ ಎರಡನೇ ಅಧ್ಯಯನವನ್ನು ಐಸಿಎಂಆರ್‌ ಹಾಗೂ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್‌) ಜಂಟಿಯಾಗಿ ನಡೆಸುತ್ತಿವೆ. ಅಧ್ಯಯನ ಪೂರ್ಣಗೊಂಡ ನಂತರ ಅಂತಿಮ ಫಲಿತಾಂಶಗಳನ್ನು ಹಂಚಿಕೊಳ್ಳಲಾಗುತ್ತದೆ’ ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. 

ಪುರಾವೆ ಆಧಾರಿತ ಸಾರ್ವಜನಿಕ ಆರೋಗ್ಯ ಸಂಶೋಧನೆಗೆ ಸರ್ಕಾರ ಬದ್ಧವಾಗಿದೆ ಎಂದೂ ತಿಳಿಸಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.