ADVERTISEMENT

ರಾಜ್ಯದಲ್ಲಿ ಭರಪೂರ ಮಳೆ: ನದಿಗಳ ಅಬ್ಬರ, ಜನಜೀವನ ತತ್ತರ

​ಪ್ರಜಾವಾಣಿ ವಾರ್ತೆ
Published 16 ಜುಲೈ 2024, 18:58 IST
Last Updated 16 ಜುಲೈ 2024, 18:58 IST
<div class="paragraphs"><p>ಶಿವಮೊಗ್ಗ ನಗರದ ಬಳಿ ತುಂಗಾ ನದಿ ಅಪಾಯದ ಹಂತ ಮೀರಿ ಹರಿಯುತ್ತಿದೆ</p></div>

ಶಿವಮೊಗ್ಗ ನಗರದ ಬಳಿ ತುಂಗಾ ನದಿ ಅಪಾಯದ ಹಂತ ಮೀರಿ ಹರಿಯುತ್ತಿದೆ

   

ಶಿವಮೊಗ್ಗ/ಮಡಿಕೇರಿ: ದಕ್ಷಿಣ ಕನ್ನಡ, ಕೊಡಗು ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಬಿರುಸಿನ ಮಳೆ ಮುಂದುವರಿದಿದೆ. ಸೋಮವಾರ ರಾತ್ರಿಯಿಡೀ ಸುರಿದ ಕುಂಭದ್ರೋಣ ಮಳೆಗೆ ಮಲೆನಾಡಿನಲ್ಲಿ ತುಂಗಾ, ಭದ್ರಾ, ಶರಾವತಿ, ವರದಾ ಹಾಗೂ ಕುಮದ್ವತಿ ನದಿಗಳು ಉಕ್ಕಿ ಹರಿಯುತ್ತಿವೆ.

ಮಂಗಳವಾರ ಬೆಳಿಗ್ಗೆ 8 ಗಂಟೆಗೆ ಕೊನೆಗೊಂಡಂತೆ 24 ಗಂಟೆಗಳ ಅವಧಿಯಲ್ಲಿ ತೀರ್ಥಹಳ್ಳಿ ತಾಲ್ಲೂಕಿನ ಆಗುಂಬೆಯಲ್ಲಿ ಅತಿಹೆಚ್ಚು 34.2 ಸೆಂ.ಮೀ ಮಳೆ ದಾಖಲಾಗಿದೆ. ವರುಣನ ಆರ್ಭಟದಿಂದ ಜಲಾಶಯಗಳಿಗೆ ಈ ಮುಂಗಾರು ಹಂಗಾಮಿನಲ್ಲಿ ದಾಖಲೆ ಪ್ರಮಾಣದ ನೀರು ಹರಿದುಬರುತ್ತಿದೆ.

ADVERTISEMENT

ಗಾಜನೂರು ಬಳಿ ಇರುವ ತುಂಗಾ ಜಲಾಶಯ ಈಗಾಗಲೇ ಭರ್ತಿಯಾಗಿದೆ. ಆದರೆ ಮಂಗಳವಾರ ಜಲಾಶಯಕ್ಕೆ 70,037 ಕ್ಯುಸೆಕ್ ನೀರು ಹರಿದುಬರುತ್ತಿದೆ. ಅಷ್ಟೇ ಪ್ರಮಾಣದ ನೀರನ್ನು ನದಿಗೆ ಹರಿಸಲಾಗುತ್ತಿದೆ. ಇದರಿಂದ ತುಂಗಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಶಿವಮೊಗ್ಗ ನಗರದಲ್ಲಿನ ನದಿ ದಂಡೆಯ ಮಂಟಪ ಸಂಪೂರ್ಣ ಮುಳುಗಡೆ ಆಗಿದೆ. ತುಂಗಾ ಜಲಾಶಯದ ಆಡಳಿತ ಕೂಡ ನದಿ ದಂಡೆಯ‌ ನಿವಾಸಿಗಳಿಗೆ ಪ್ರವಾಹದ ಮುನ್ನೆಚ್ಚರಿಕೆ ನೀಡಿದೆ.

ಶರಾವತಿ ನದಿಯೂ ಮೈದುಂಬಿದ್ದು, ಲಿಂಗನಮಕ್ಕಿ ಜಲಾಶಯಕ್ಕೆ ದಾಖಲೆಯ 77,911 ಕ್ಯುಸೆಕ್ ಒಳಹರಿವು ಇದ್ದು, 24 ಗಂಟೆಗಳಲ್ಲಿ 35,000 ಕ್ಯುಸೆಕ್‌ನಷ್ಟು ನೀರಿನ ಪ್ರಮಾಣ ಏರಿಕೆಯಾಗಿದೆ. ಶರಾವತಿ ಜಲಾನಯನ ಪ್ರದೇಶದಲ್ಲಿ ಹೊಸನಗರ ತಾಲ್ಲೂಕಿನ ಮಾಸ್ತಿಕಟ್ಟೆಯಲ್ಲಿ 24.70 ಸೆಂ.ಮೀ ಹಾಗೂ ಹುಲಿಕಲ್‌ನಲ್ಲಿ 24.50 ಸೆಂ.ಮೀ ಮಳೆ ದಾಖಲಾಗಿದೆ.

ಭದ್ರಾಗೆ ಒಂದೇ ದಿನ 3.4 ಅಡಿ ನೀರು:  ಲಕ್ಕವಳ್ಳಿಯ ಭದ್ರಾ ಜಲಾಶಯಕ್ಕೆ 27,839 ಕ್ಯುಸೆಕ್ ನೀರು ಹರಿದುಬರುತ್ತಿದೆ. ಇದರಿಂದ ಜಲಾಶಯದಲ್ಲಿ ನೀರಿನ‌ಮಟ್ಟ 144.7 ಅಡಿಗೆ ಏರಿಕೆ ಆಗಿದೆ. ಸೋಮವಾರ ಜಲಾ
ಶಯದಲ್ಲಿ 141.3 ಅಡಿ ನೀರು
ಇತ್ತು. 

ಮಳೆ ಬಿರುಸು: ಕೊಡಗು ಜಿಲ್ಲೆಯಲ್ಲಿ ಮುಂಗಾರು ಬಿರುಸುಗೊಂಡಿದ್ದು, ಮಡಿಕೇರಿ ತಾಲ್ಲೂಕಿನ ಕೊಯನಾಡು ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಮೇಲೆ ಸೋಮವಾರ ತಡರಾತ್ರಿ ಭಾರಿ ಪ್ರಮಾಣದ ಮಣ್ಣು ಕುಸಿದು, 5 ಕೋಣೆಗಳು ಸಂಪೂರ್ಣ ಹಾನಿಯಾಗಿವೆ. ಹಗಲಿನಲ್ಲಿ ಕುಸಿದಿದ್ದರೆ ಹೆಚ್ಚು ಅನಾಹುತವಾಗುತ್ತಿತ್ತು. ಶಾಲೆಯ ಎಲ್ಲ 86 ಮಕ್ಕಳನ್ನು ಇಲ್ಲಿಗೆ 2.5 ಕಿ.ಮೀ ದೂರದ ಸಂಪಾಜೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಸ್ಥಳಾಂತರಿಸಲಾಗಿದೆ.

ತ್ರಿವೇಣಿ ಸಂಗಮ ಭರ್ತಿಯಾಗಿರುವುದರಿಂದ ಭಾಗಮಂಡಲ– ನಾಪೋಕ್ಲು ರಸ್ತೆಗೆ ನೀರು ಬಂದಿದ್ದರೂ ಮೇಲ್ಸೇತುವೆ ಇರುವುದರಿಂದ ಸಂಚಾರಕ್ಕೆ ಸಮಸ್ಯೆಯಾಗಿಲ್ಲ. ಜಿಲ್ಲೆಯಲ್ಲಿ ವಿಪತ್ತು ನಿರ್ವಹಣಾ ಕೇಂದ್ರವನ್ನು ತೆರೆಯಲಾಗಿದೆ. ಸೋಮವಾರಪೇಟೆ ತಾಲ್ಲೂಕಿನ ಗ್ರಾಮೀಣ ಭಾಗಗಳಲ್ಲಿ ಜನ ವಿದ್ಯುತ್ ಮತ್ತು ಕುಡಿಯುವ ನೀರಿಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಹಾರಂಗಿಗೆ ಹರಿದು ಬರುತ್ತಿರುವ ನೀರಿನ ಪ್ರಮಾಣ 8,764 ಕ್ಯುಸೆಕ್‌ಗೆ ಇಳಿಕೆಯಾಗಿರುವುದರಿಂದ ನದಿಗೆ ಬಿಡುತ್ತಿರುವ ನೀರಿನ ಪ್ರಮಾಣವನ್ನು 10 ಸಾವಿರ ಕ್ಯುಸೆಕ್‌ಗೆ ಇಳಿಸಲಾಗಿದೆ.

ಕಲ್ಯಾಣ ಕರ್ನಾಟಕ ಭಾಗದ ಕಲ
ಬುರಗಿ ಮತ್ತು ಬೀದರ್ ಜಿಲ್ಲೆಗಳಲ್ಲಿ ಸೋಮವಾರ ತಡರಾತ್ರಿ ಮತ್ತು ಮಂಗಳ
ವಾರವೂ ಉತ್ತಮ ಮಳೆಯಾಗಿದೆ.

ಮಂಗಳೂರು ವರದಿ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗಾಳಿಯಿಂದ ಕೂಡಿದ ಬಿರುಸಿನ ಮಳೆ ಸುರಿಯಿತು. 

ನೇತ್ರಾವತಿ, ಕುಮಾರಧಾರಾ, ಫಲ್ಗುಣಿ, ಶಾಂಭವಿ ಹಾಗೂ ನಂದಿನಿ ನದಿಗಳು ತುಂಬಿ ಹರಿಯುತ್ತಿವೆ. ಭಾರಿ ಮಳೆಯಿಂದಾಗಿ ಬೆಳ್ತಂಗಡಿ– ಉಜಿರೆ ರಸ್ತೆಯು ಜಲಾವೃತವಾಗಿ, ವಾಹನ ಸವಾರರು ಸಮಸ್ಯೆ ಎದುರಿಸಿದರು. 

ಉಡುಪಿ ಜಿಲ್ಲೆಯಲ್ಲಿಯೂ ಧಾರಾಕಾರ ಮಳೆ ಸುರಿದಿದೆ. ಬ್ರಹ್ಮಾವರ, ಕುಂದಾಪುರ, ಬೈಂದೂರು ವ್ಯಾಪ್ತಿಯಲ್ಲಿ ಹಲವೆಡೆ ನದಿಗಳು ಉಕ್ಕಿ ಹರಿಯುವುತ್ತಿರುವುದರಿಂದ ನೆರೆ ನಿರ್ಮಾಣವಾಗಿದೆ. ಬೈಂದೂರಿನ  ಶಿರೂರು, ಉಪ್ಪುಂದ, ನಾಗೂರು, ಕಿರಿಮಂಜೇಶ್ವರ, ಮುಂತಾದೆಡೆ ಭಾರಿ ಮಳೆಗೆ ಅಪಾರ ಹಾನಿ ಸಂಭವಿಸಿದೆ.

ಕೋಟ, ಬ್ರಹ್ಮಾವರ ಪರಿಸರದ ಹಲವೆಡೆ ಧಾರಾಕಾರ ಮಳೆಯಾಗಿದ್ದು, ಸೀತಾ, ಮಡಿಸಾಲು ನದಿಗಳು ಉಕ್ಕಿ ಹರಿದು ಅನೇಕ ಮನೆಗಳು ಜಲಾವೃತಗೊಂಡಿವೆ. ಮಡಿಸಾಲು ನದಿ ನೀರು ಮಡಿ ಕುಕ್ಜೆಹಳ್ಳಿ, ಹೇರೂರು ಉಗ್ಗೇಲ್ ವೆಟ್ಟು, ಆರೂರು ಬೆಳ್ಮಾರು ಸಂಪರ್ಕ ರಸ್ತೆ, ಸೇತುವೆ ಮೇಲೆ ಹರಿದು ಮಂಗಳವಾರ
ಮಧ್ಯಾಹ್ನದವರೆಗೆ ಈ ಮಾರ್ಗದಲ್ಲಿ ರಸ್ತೆ ಸಂಪರ್ಕ ಕಡಿತಗೊಂಡಿತ್ತು. ಆರೂರು ವಿಷ್ಣುಮೂರ್ತಿ ದೇವಸ್ಥಾನದೊಳಗೆ ನೀರು ನುಗ್ಗಿದೆ. 

12 ತಾಸು ಸಂಚಾರ ವ್ಯತ್ಯಯ

ಕಾರವಾರ: ಮಳೆಯಿಂದ ಗುಂಡಬಾಳ ನದಿ ಉಕ್ಕೇರಿದ್ದರಿಂದ ಹೊನ್ನಾವರದ ಕಡತೋಕಾ, ಭಾಸ್ಕೇರಿ ಸೇರಿ ಹಲವೆಡೆ ನೆರೆ ಪರಿಸ್ಥಿತಿ ಉದ್ಭವಿಸಿದೆ. ಅಘನಾಶಿನಿ ನದಿ ಉಕ್ಕಿ ಹರಿದು ದೀವಗಿ, ಹೆಗಡೆ ಸೇರಿ 13ಕ್ಕೂ ಹೆಚ್ಚು ಗ್ರಾಮಗಳು ಜಲಾವೃತ ಆಗಿವೆ. ಕಾಳಜಿ ಕೇಂದ್ರಗಳಲ್ಲಿ 2,368 ಹೆಚ್ಚು ಜನರು ಆಶ್ರಯ ಪಡೆದಿದ್ದಾರೆ’ ಎಂದು ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ ತಿಳಿಸಿದರು.

ಚತುಷ್ಪಥ ರಾಷ್ಟ್ರೀಯ ಹೆದ್ದಾರಿ-66ರಲ್ಲಿ ಕಾರವಾರ ತಾಲ್ಲೂಕಿನ ಚೆಂಡಿಯಾ ಬಳಿ ನೀರು ತುಂಬಿಕೊಂಡು 12 ತಾಸುಗಳಿಗೂ ಹೆಚ್ಚು ಸಮಯ ವಾಹನ ಸಂಚಾರಕ್ಕೆ ಅಡ್ಡಿಯಾಗಿತ್ತು. ಶಿರಸಿ ತಾಲ್ಲೂಕಿನ ರಾಗಿಹೊಸಳ್ಳಿ ಸಮೀಪ ಗುಡ್ಡ ಕುಸಿದು ಶಿರಸಿ-ಕುಮಟಾ ಸಂಪರ್ಕಿಸುವ  ರಾಷ್ಟ್ರೀಯ ಹೆದ್ದಾರಿ 766ಇ ಮೇಲೆ ಮಣ್ಣಿನ ರಾಶಿ ಆವರಿಸಿಕೊಂಡಿದ್ದಲ್ಲದೆ, ಇದೇ ರಸ್ತೆಯಲ್ಲಿ ಕುಮಟಾ ತಾಲ್ಲೂಕಿನ ಕತಗಾಲ ಸಮೀಪ ಚಂಡಿಕಾ ನದಿ ಉಕ್ಕಿ ಹರಿದ ಪರಿಣಾಮ ಕರಾವಳಿ–ಮಲೆನಾಡು ಸಂಪರ್ಕಿಸುವ ರಸ್ತೆಗಳಲ್ಲಿ ಸಂಚಾರ ಸ್ಥಗಿತಗೊಂಡಿತ್ತು.

ಹೊನ್ನಾವರ ತಾಲ್ಲೂಕಿನ ಖರ್ವಾ ಕಲಭಾಗ ಬಳಿ ಹೊನ್ನಾವರ-
ಬೆಂಗಳೂರು ಸಂಪರ್ಕಿಸುವ  ರಾಷ್ಟ್ರೀಯ ಹೆದ್ದಾರಿ-69ರಲ್ಲಿ ಗುಡ್ಡ ಕುಸಿದು ಕೆಲ ತಾಸು ಸಂಚಾರ ಸ್ಥಗಿತವಾಗಿತ್ತು. ಗೋಕರ್ಣದ ರಾಮತೀರ್ಥದ ದೇವಸ್ಥಾನದ ಬಳಿ ಗುಡ್ಡ ಕುಸಿತ ಉಂಟಾಯಿತು.

ಕರಾವಳಿಯಲ್ಲಿ ಭೂಕುಸಿತ ತಡೆಗೆ ಹಸಿರು ಕವಚಯೋಜನೆ ಅನುಷ್ಠಾನದ ಜತೆ, ಮಲೆನಾಡು ಭೂ ಕುಸಿತ ತಡೆ ಅಧ್ಯಯನ ವರದಿಯ ಶಿಫಾರಸು ಜಾರಿ ಮಾಡಬೇಕು
–ಅನಂತ ಅಶೀಸರ, ವೃಕ್ಷಲಕ್ಷ ಆಂದೋಲನದ ಅಧ್ಯಕ್ಷ
ಧಾರಾಕಾರವಾಗಿ ಮಳೆ ಸುರಿಯುತ್ತಿರುವ ಕಾರಣ, ಸುರಕ್ಷತೆ ದೃಷ್ಟಿಯಿಂದ ಚಿಕ್ಕಮಗಳೂರು ಜಿಲ್ಲೆಗೆ ಪ್ರವಾಸ ಕೈಗೊಳ್ಳಬೇಡಿ
–ಮೀನಾ ನಾಗರಾಜ್‌, ಜಿಲ್ಲಾಧಿಕಾರಿ ಚಿಕ್ಕಮಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.