ADVERTISEMENT

ರಾಜ್ಯದ ಹಲವೆಡೆ ಧಾರಾಕಾರ ಮಳೆ

ಗೋಡೆ ಕುಸಿದು ವ್ಯಕ್ತಿ ಸಾವು l ಚಿತ್ರದುರ್ಗ: 36 ಎಕರೆ ಬೆಳೆಗೆ ಹಾನಿ

​ಪ್ರಜಾವಾಣಿ ವಾರ್ತೆ
Published 18 ಜುಲೈ 2021, 19:52 IST
Last Updated 18 ಜುಲೈ 2021, 19:52 IST
ಭಾರೀ ಮಳೆಯಿಂದಾಗಿ ಮಂಗಳೂರಿನ ಹೊರವಲಯದ ಕುಲಶೇಖರದ ರೈಲ್ವೇ ಸುರಂಗದ ಬಳಿ ಶುಕ್ರವಾರ ತಡೆಗೋಡೆಯೊಂದಿಗೆ ರೈಲ್ವೇ ಹಳಿ ಮೇಲೆ ಬಿದ್ದ ಮಣ್ಣನ್ನು ತೆರವುಗೊಳಿಸುವ ಕಾರ್ಯಾಚರಣೆಯಲ್ಲಿ ತೊಡಗಿದ್ದ ರೈಲ್ವೇ ಇಲಾಖೆ ಸಿಬ್ಬಂದಿ –ಪ್ರಜಾವಾಣಿ ಚಿತ್ರ/ಇರ್ಷಾದ್‌ ಮಹಮ್ಮದ್‌
ಭಾರೀ ಮಳೆಯಿಂದಾಗಿ ಮಂಗಳೂರಿನ ಹೊರವಲಯದ ಕುಲಶೇಖರದ ರೈಲ್ವೇ ಸುರಂಗದ ಬಳಿ ಶುಕ್ರವಾರ ತಡೆಗೋಡೆಯೊಂದಿಗೆ ರೈಲ್ವೇ ಹಳಿ ಮೇಲೆ ಬಿದ್ದ ಮಣ್ಣನ್ನು ತೆರವುಗೊಳಿಸುವ ಕಾರ್ಯಾಚರಣೆಯಲ್ಲಿ ತೊಡಗಿದ್ದ ರೈಲ್ವೇ ಇಲಾಖೆ ಸಿಬ್ಬಂದಿ –ಪ್ರಜಾವಾಣಿ ಚಿತ್ರ/ಇರ್ಷಾದ್‌ ಮಹಮ್ಮದ್‌   

ಬೆಂಗಳೂರು: ಕರಾವಳಿ ಜಿಲ್ಲೆಗಳು ಸೇರಿದಂತೆ ರಾಜ್ಯದ ಹಲವೆಡೆ ಭಾನುವಾರ ಧಾರಾಕಾರ ಮಳೆಯಾಗಿದೆ. ಜಲಾಶಯಗಳ ಒಳಹರಿವು ಹೆಚ್ಚತೊಡಗಿದೆ.

ತುರುವೇಕೆರೆ ತಾಲ್ಲೂಕಿನಲ್ಲಿ ಶನಿವಾರ ರಾತ್ರಿ ಸುರಿದ ಮಳೆಗೆ ಮನೆಯ ಗೋಡೆ ಕುಸಿದು ದಂಡಿನಶಿವರ ಹೋಬಳಿಯ ಅರಕೆರೆ ಗ್ರಾಮದ ನಿವಾಸಿ ಪುಟ್ಟಯ್ಯ (65) ಮೃತಪಟ್ಟಿದ್ದಾರೆ. ಮಳೆಗೆ ಮನೆಯ ಗೋಡೆ ಸಂಪೂರ್ಣ ನೆನೆದು ರಾತ್ರಿ ಮನೆಯಲ್ಲಿ ಮಲಗಿದ್ದ ಪುಟ್ಟಯ್ಯ ಅವರ ಮೇಲೆ ಗೋಡೆ ಕುಸಿದಿದೆ. ಅವರ ಪತ್ನಿ ಲಕ್ಕಮ್ಮ ಅವರ ಕಾಲುಗಳ ಮೇಲೆ ಗೋಡೆಯ ಕಲ್ಲು, ಇಟ್ಟಿಗೆ ಬಿದ್ದು ಸಣ್ಣ ಪುಟ್ಟ ಗಾಯಗಳಾಗಿವೆ.

ಕಲಬುರ್ಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ಪೋತಂಗಲ್‌ ಗ್ರಾಮದಲ್ಲಿ ಶನಿವಾರ ಸಂಜೆ ಕಾಗಿಣಾ ನದಿಯಲ್ಲಿ ವ್ಯಕ್ತಿಯೊಬ್ಬರು ಕೊಚ್ಚಿಕೊಂಡು ಹೋಗಿದ್ದಾರೆ. ಅವರ ಪತ್ತೆಗೆ ಶೋಧ ಕಾರ್ಯಾಚರಣೆ ನಡೆಯುತ್ತಿದೆ.

ADVERTISEMENT

ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲ್ಲೂಕಿನಲ್ಲಿ 20.9 ಸೆಂ.ಮೀ.ನಷ್ಟು ಭಾರಿ ಮಳೆಯಾಗಿದೆ. ಚೌಥನಿಯ ಶರಾಬಿ ನದಿ ಉಕ್ಕಿಹರಿದು ಚೌಥನಿ ಗ್ರಾಮ‌ ಸಂಪೂರ್ಣ ಜಲಾವೃತವಾಗಿದೆ.‌

ಬಂಟ್ವಾಳ ತಾಲ್ಲೂಕಿನ ವಿಟ್ಲಪಡ್ನೂರು ಗ್ರಾಮದ ಕೊಡಂಗೆ ಎಂಬಲ್ಲಿ ಗುಡ್ಡ ಕುಸಿದು 100ಕ್ಕೂ ಹೆಚ್ಚು ಅಡಿಕೆ ಮರಗಳು ಧರೆಗೆ ಉರುಳಿವೆ. ಚಿತ್ರದುರ್ಗ ಜಿಲ್ಲೆಯಲ್ಲಿ 26 ಮನೆಗಳಿಗೆ ಭಾಗಶಃ ಹಾನಿ ಉಂಟಾಗಿದ್ದು, 36 ಎಕರೆ ಬೆಳೆ ನಷ್ಟವಾಗಿದೆ.

ಜುಲೈ19 ಮತ್ತು 20ರಂದು ಏಳು ಜಿಲ್ಲೆಗಳಲ್ಲಿ ‘ರೆಡ್ ಅಲರ್ಟ್‌’ ಹಾಗೂ ಐದು ಜಿಲ್ಲೆಗಳಲ್ಲಿ ‘ಆರೆಂಜ್ ಅಲರ್ಟ್‌’ ಘೋಷಿಸಿರುವುದಾಗಿ ಹವಾಮಾನ ಇಲಾಖೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.