ADVERTISEMENT

ನಾಳೆಯಿಂದ ಕರಾವಳಿ ಜಿಲ್ಲೆಗಳಲ್ಲಿ ‘ಯೆಲ್ಲೊ ಅಲರ್ಟ್‌’

​ಪ್ರಜಾವಾಣಿ ವಾರ್ತೆ
Published 26 ಜೂನ್ 2021, 18:54 IST
Last Updated 26 ಜೂನ್ 2021, 18:54 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಚುರುಕುಗೊಂಡಿರುವುದರಿಂದ ಕರಾವಳಿ ಜಿಲ್ಲೆಗಳಲ್ಲಿ ಜೂ.28ರಿಂದ ಜುಲೈ 1ರವರೆಗೆ ಧಾರಾಕಾರ ಮಳೆಯಾಗುವ ಮುನ್ಸೂಚನೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

‘ಕೆಲ ದಿನಗಳಿಂದ ತಗ್ಗಿದ್ದ ಮಳೆ ಮತ್ತೆ ಬಿರುಸುಗೊಳ್ಳಲಿದೆ. ಕರಾವಳಿಯ ದಕ್ಷಿಣ ಕನ್ನಡ, ಉತ್ತರ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಜು.1ರವರೆಗೆ ಭಾರಿ ಮಳೆಯಾಗುವ ಸಾಧ್ಯತೆ ಇರುವುದರಿಂದ ‘ಯೆಲ್ಲೊ ಅಲರ್ಟ್‌’ ಘೋಷಿಸಲಾಗಿದೆ’.

‘ಚಿಕ್ಕಮಗಳೂರು, ಹಾಸನ, ಶಿವಮೊಗ್ಗ ಹಾಗೂ ಕೊಡಗು ಜಿಲ್ಲೆಗಳಲ್ಲಿ ಇದೇ 29ರಿಂದ ಮಳೆ ಹೆಚ್ಚಾಗಲಿದ್ದು, ಈ ಜಿಲ್ಲೆಗಳಿಗೂ ‘ಯೆಲ್ಲೊ ಅಲರ್ಟ್‌’ ನೀಡಲಾಗಿದೆ. ದಕ್ಷಿಣ ಒಳನಾಡಿನ ಉಳಿದ ಜಿಲ್ಲೆಗಳಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗಬಹುದು. ಉತ್ತರ ಒಳನಾಡಿನಲ್ಲಿ ಒಣಹವೆ ಇರಲಿದೆ’ ಎಂದೂ ತಿಳಿಸಿದೆ.

ADVERTISEMENT

ಮಳೆ–ಎಲ್ಲಿ, ಎಷ್ಟು?: ಗೋಕರ್ಣದಲ್ಲಿ 5 ಸೆಂ.ಮೀ ಗರಿಷ್ಠ ಮಳೆಯಾಗಿದೆ. ಕಾರವಾರ 4, ಶಿರಸಿ 3, ಕುಂದಾಪುರ, ಪುತ್ತೂರು 2, ಕಾರ್ಕಳ, ಮಂಗಳೂರಿನಲ್ಲಿ ತಲಾ 1 ಸೆಂ.ಮೀ ಮಳೆಯಾಗಿದೆ.

ರಾಯಚೂರಿನಲ್ಲಿ 33 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲಾಗಿದೆ.

ಕರಾವಳಿ, ಕೊಡಗಿನಲ್ಲಿ ಮಳೆ
ಮಂಗಳೂರು/ಮಡಿಕೇರಿ: ಕರಾವಳಿ ಜಿಲ್ಲೆಗಳಲ್ಲಿ ಶನಿವಾರ ಮಳೆ ಆರಂಭವಾಗಿದೆ. ಹಲವೆಡೆ ಸಾಧಾರಣ ಮಳೆ ಸುರಿದಿದ್ದು, ಕರಾವಳಿಯಲ್ಲಿ ಕಡಲ್ಕೊರೆತ ಉಂಟಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗಿದೆ. ಉಡುಪಿ ಜಿಲ್ಲೆಯಲ್ಲಿ ಮಳೆ ಬಿರುಸಾಗಿದ್ದು, ಪಡುಬಿದ್ರಿಯಲ್ಲಿ ಕಡಲ್ಕೊರೆತವಾಗಿದೆ. ಕಾಪು ತಾಲ್ಲೂಕು ಮೂಳೂರಿನಲ್ಲಿ ಮನೆ ಚಾವಣಿ ಕುಸಿದು, ಮಹಿಳೆ ಗಾಯಗೊಂಡಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯಲ್ಲಿ ಮೂಡಿಗೆರೆ, ಕೊಪ್ಪ, ಎನ್‌.ಆರ್‌.ಪುರ ಭಾಗದಲ್ಲಿ ಮಳೆಯಾಗಿದೆ. ಕೊಡಗು ಜಿಲ್ಲೆಯಲ್ಲಿ ಮಡಿಕೇರಿ, ಚೇರಂಬಾಣೆ, ಬಕ್ಕ, ನಾಪೋಕ್ಲು, ತಲಕಾವೇರಿ ಸೇರಿ ವಿವಿಧೆಡೆ ಮಳೆಯಾಗುತ್ತಿದೆ. ಮೈಸೂರು ನಗರ ಸೇರಿ ಜಿಲ್ಲೆಯ ವಿವಿಧೆಡೆ ಮಳೆಯಾಗಿದೆ.

ಕಲಬುರ್ಗಿ ಜಿಲ್ಲೆಯ ಸೇಡಂ, ಚಿತ್ತಾಪುರ, ಕಾಳಗಿ ಮತ್ತು ಯಡ್ರಾಮಿ, ಯಾದಗಿರಿ ಜಿಲ್ಲೆಯ ಸುರಪುರ, ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲ್ಲೂಕಿನಲ್ಲಿ ಮತ್ತು ಬೀದರ್‌ನಲ್ಲಿ ಮಳೆಯಾಗಿದೆ.

ಮಣ್ಣು ಕುಸಿತ: ಹಾಸನ ಜಿಲ್ಲೆಯ ದ್ಯಾವೇನಹಳ್ಳಿ ಗ್ರಾಮದ ಬಳಿ ಬಳೀ ಹೇಮಾವತಿ ನಾಲೆಯ ಪಂಪ್‌ಹೌಸ್ ಸಮೀಪ, 80 ಅಡಿ ಎತ್ತರದಿಂದ ನಾಲೆಗೆ ಭಾರಿ ಪ್ರಮಾಣದಲ್ಲಿ ಮಣ್ಣು ಕುಸಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.