ADVERTISEMENT

ಕ್ರೀಡೆಯಲ್ಲಿ ಧರ್ಮದ ಹೇರಿಕೆ ಸಲ್ಲ: ಖ್ಯಾತ ಶೂಟಿಂಗ್‌ ಪಟು ಹೀನಾ ಸಿಧು ಪ್ರತಿಪಾದನೆ

​ಪ್ರಜಾವಾಣಿ ವಾರ್ತೆ
Published 11 ಜನವರಿ 2020, 10:09 IST
Last Updated 11 ಜನವರಿ 2020, 10:09 IST
ಮಂಗಳೂರಿನ ಸೇಂಟ್‌ ಆಗ್ನೆಸ್ ಕಾಲೇಜಿನಲ್ಲಿ ಶುಕ್ರವಾರ ನಡೆದ ‘ನಾಲೆಜ್‌ ಫ್ಯಾಕ್ಟರಿ’ ಕಾರ್ಯಕ್ರಮದಲ್ಲಿ ನೀತಿ ಕನ್ಸಲ್ಟಿಂಗ್‌ನ ಸಂಸ್ಥಾಪಕಿ ಮೀನಾ ವೈದ್ಯನಾಥನ್‌ ಅವರೊಂದಿಗೆ ಸಂವಾದದಲ್ಲಿ ತೊಡಗಿರುವ ಶೂಟಿಂಗ್‌ ಪಟು ಹೀನಾ ಸಿಧು.– ಪ್ರಜಾವಾಣಿ ಚಿತ್ರ
ಮಂಗಳೂರಿನ ಸೇಂಟ್‌ ಆಗ್ನೆಸ್ ಕಾಲೇಜಿನಲ್ಲಿ ಶುಕ್ರವಾರ ನಡೆದ ‘ನಾಲೆಜ್‌ ಫ್ಯಾಕ್ಟರಿ’ ಕಾರ್ಯಕ್ರಮದಲ್ಲಿ ನೀತಿ ಕನ್ಸಲ್ಟಿಂಗ್‌ನ ಸಂಸ್ಥಾಪಕಿ ಮೀನಾ ವೈದ್ಯನಾಥನ್‌ ಅವರೊಂದಿಗೆ ಸಂವಾದದಲ್ಲಿ ತೊಡಗಿರುವ ಶೂಟಿಂಗ್‌ ಪಟು ಹೀನಾ ಸಿಧು.– ಪ್ರಜಾವಾಣಿ ಚಿತ್ರ   

ಮಂಗಳೂರು: ‘ಕ್ರೀಡೆ ಅತ್ಯಂತ ಪರಿಶುದ್ಧವಾದುದು. ಅದು ಯಾವ ಬಗೆಯಲ್ಲೂ ತಾರತಮ್ಯವನ್ನು ಹೊಂದಿರುವುದಿಲ್ಲ. ಕ್ರೀಡೆಯಲ್ಲಿ ಧರ್ಮ ತುರುಕುವುದು ಮತ್ತು ಅದರ ಆಧಾರದಲ್ಲಿ ನಿಯಂತ್ರಣಗಳನ್ನು ಹೇರಲು ಯತ್ನಿಸುವುದು ಕ್ರೀಡೆಯ ಆತ್ಮಕ್ಕೆ ವಿರುದ್ಧವಾಗಿ ನಡೆದಂತೆ’ ಎಂದು ಭಾರತದ ಖ್ಯಾತ ಶೂಟರ್‌ ಹೀನಾ ಸಿಧು ಪ್ರತಿಪಾದಿಸಿದರು.

ನಗರದ ಸೇಂಟ್‌ ಆಗ್ನೆಸ್‌ ಕಾಲೇಜಿನಲ್ಲಿ ಶುಕ್ರವಾರ ನಡೆದ ‘ನಾಲೆಜ್‌ ಫ್ಯಾಕ್ಟರಿ’ ಕಾರ್ಯಕ್ರಮದಲ್ಲಿ ನೀತಿ ಕನ್ಸಲ್ಟಿಂಗ್‌ನ ಸಂಸ್ಥಾಪಕಿ ಮೀನಾ ವೈದ್ಯನಾಥನ್‌ ಅವರೊಂದಿಗೆ ಕ್ರೀಡೆಯ ಕುರಿತು ಸಂವಾದದಲ್ಲಿ ಭಾಗಿಯಾದ ಹೀನಾ, ‘ಕ್ರೀಡೆ ಕಠಿಣ ಪರಿಶ್ರಮ ಮತ್ತು ಸಾಮರ್ಥ್ಯವನ್ನು ಪ್ರದರ್ಶಿಸುವುದಕ್ಕೆ ಇರುವ ವೇದಿಕೆ. ಈ ಕ್ಷೇತ್ರವನ್ನು ಬಾಹ್ಯ ವಿಚಾರಗಳ ಒತ್ತಡಗಳಿಂದ ಮುಕ್ತಗೊಳಿಸಲು ಎಲ್ಲರೂ ಹೋರಾಡಬೇಕು’ ಎಂದು ಸಲಹೆ ನೀಡಿದರು.

‘ಹಿಜಾಬ್‌ ಧರಿಸುವುದನ್ನು ಕಡ್ಡಾಯಗೊಳಿಸಿದ ಕಾರಣದಿಂದ ಇರಾನ್‌ನಲ್ಲಿ ನಡೆದ ಏಷ್ಯನ್‌ ಏರ್‌ ಗನ್‌ ಶೂಟಿಂಗ್‌ ಚಾಂಪಿಯನ್‌ ಷಿಪ್‌ನಿಂದ ನಾನು ಹೊರಗುಳಿದೆ. ನಾನು ಕ್ರಾಂತಿಕಾರಿಯಲ್ಲ. ಆದರೆ, ಒಬ್ಬ ಕ್ರೀಡಾಪಟುವೂ ಹಿಜಾಬ್‌ ಧರಿಸಲೇಬೇಕು ಎಂಬ ನಿರ್ಬಂಧ ಕ್ರೀಡೆಯ ಚೈತನ್ಯಕ್ಕೆ ವಿರುದ್ಧವಾದುದು’ ಎಂದರು.

ADVERTISEMENT

‘ಒಲಿಂಪಿಕ್‌ನಲ್ಲಿ ಪದಕ ಗೆಲ್ಲುವುದೇ ಪ್ರತಿಯೊಬ್ಬ ಕ್ರೀಡಾಪಟುವಿನ ಕನಸು ಆಗಿರುತ್ತದೆ. ನಾನು ಕೂಡ ಅದೇ ದಿಕ್ಕಿನಲ್ಲಿ ಕೆಲಸ ಮಾಡುತ್ತಿದ್ದೇನೆ. ನಮ್ಮ ರಾಷ್ಟ್ರದಲ್ಲಿ ಶಿಕ್ಷಣ ಮತ್ತು ಕ್ರೀಡೆಯನ್ನು ಸಮಾನವಾಗಿ ನೋಡುವ ಮನೋಭಾವ ಬೆಳೆದಿಲ್ಲ. ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಹಣ ವ್ಯಯಿಸಲು ಬಯಸುವ ಪೋಷಕರು, ಕ್ರೀಡಾ ಸಾಧನೆಗೆ ಪ್ರೋತ್ಸಾಹ ನೀಡಲು ಹಿಂದೇಟು ಹಾಕುತ್ತಾರೆ’ ಎಂದು ಹೇಳಿದರು.

ಆಯಾ ಶಿಕ್ಷಣ ಸಂಸ್ಥೆಗಳು ಹೊಂದಿರುವ ಸೌಲಭ್ಯಗಳ ಆಧಾರದಲ್ಲಿ ಕೆಲವು ಕ್ರೀಡೆಗಳ ಕಲಿಕೆಯನ್ನು ಅಲ್ಲಿ ಕಡ್ಡಾಯ ಗೊಳಿಸುವ ಕೆಲಸವನ್ನು ಸರ್ಕಾರ ಮಾಡಬೇಕು. ಆಗ ಭಾರತದಲ್ಲಿ ತಾನಾಗಿಯೇ ಕ್ರೀಡಾ ಚಟುವಟಿಕೆಗಳಿಗೆ ಬೆಂಬಲ ದೊರಕುತ್ತದೆ ಎಂದರು.

ಸುಸ್ಥಿರ ಫ್ಯಾಷನ್‌ ಅಗತ್ಯ

ಫ್ಯಾಷನ್‌ ಕ್ಷೇತ್ರದಲ್ಲಿನ ಬದಲಾವಣೆಗಳ ಕುರಿತ ಚರ್ಚೆಯಲ್ಲಿ ಭಾಗಿಯಾದ ‘ಡೂಡ್ಲೇಜ್‌’ ಫ್ಯಾಷನ್‌ ಬ್ರಾಂಡ್‌ ಸಂಸ್ಥಾಪಕಿ ಕ್ರಿತಿ ತುಲಾ ಮತ್ತು ನಟಿ ದೀಪಾನ್ನಿತಾ ಶರ್ಮ, ಸುಸ್ಥಿರ ಫ್ಯಾಷನ್‌ ಕಡೆಗೆ ಹೆಚ್ಚಿನ ಒಲವು ಅಗತ್ಯ ಎಂದು ಪ್ರತಿಪಾದಿಸಿದರು.

‘ನಮ್ಮ ಫ್ಯಾಷನ್‌ನಿಂದ ಪರಿಸರದ ಮೇಲೆ ಹೊರೆಯಾಗದಂತೆ ಎಚ್ಚರ ವಹಿಸಬೇಕಿದೆ. ಇದಕ್ಕಾಗಿ ಹೊಸ ಬಟ್ಟೆಗಳನ್ನು ಖರೀದಿಸುವ ಬದಲಿಗೆ ವಸ್ತ್ರ ವಿನ್ಯಾಸಕಾರರಿಂದ ವಸ್ತ್ರಗಳನ್ನು ಬಾಡಿಗೆಗೆ ತಂದು ಬಳಸುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು’ ಎಂದು ದೀಪಾನ್ನಿತಾ ಸಲಹೆ ನೀಡಿದರು.

‘ಫ್ಯಾಷನ್‌ ಉದ್ಯಮ ಪರಿಸರ ಮಾಲಿನ್ಯ ಸೃಷ್ಟಿಸುತ್ತಿರುವ ಉದ್ಯಮಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಸಿದ್ಧ ಉಡುಪುಗಳ ಉತ್ಪಾದನೆಯಲ್ಲಿ ಉಳಿಯುವ ಬಟ್ಟೆಯ ತುಂಡುಗಳನ್ನೂ ಬಳಸಿ ಹೊಸ ಬಗೆಯ ವಸ್ತ್ರಗಳನ್ನು ಸಿದ್ಧಪಡಿಸಿ, ಬಳಸುವುದರಿಂದ ಮಾಲಿನ್ಯದ ಪ್ರಮಾಣವನ್ನು ತಗ್ಗಿಸಬಹುದು’ ಎಂದು ಕ್ರಿತಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.