ಬೆಂಗಳೂರು: ‘ಮನುಷ್ಯರಿಂದ ಶೌಚ ಗುಂಡಿಗಳನ್ನು ಸ್ವಚ್ಛಗೊಳಿಸುವ ಮತ್ತು ಮಲ ಹೊರುವ ಅನಿಷ್ಟ ಪದ್ಧತಿಗೆ ನಿಷೇಧ ಹೇರಿದ್ದರೂ ಅದು ಇಂದಿಗೂ ನಡೆದುಕೊಂಡು ಹೋಗುತ್ತಿರುವುದನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು’ ಎಂದು ಹೈಕೋರ್ಟ್ ಕಳವಳ ವ್ಯಕ್ತಪಡಿಸಿದೆ.
‘ಶೌಚ ಗುಂಡಿ ಒಳಚರಂಡಿ ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳನ್ನು (ಎಸ್‌ಟಿಪಿ) ಸ್ವಚ್ಛಗೊಳಿಸಲು ಮನುಷ್ಯರನ್ನು ಬಳಸಿಕೊಳ್ಳುವುದನ್ನು ತಕ್ಷಣ ನಿಲ್ಲಿಸಬೇಕು’ ಎಂದು ಕೋರಿ ‘ಆಲ್ ಇಂಡಿಯಾ ಸೆಂಟ್ರಲ್ ಕೌನ್ಸಿಲ್ ಟ್ರೇಡ್ ಯೂನಿಯನ್ (ಎಐಸಿಸಿಟಿಯು) ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ವಿ.ಕಾಮೇಶ್ವರ್ ರಾವ್ ನೇತೃತ್ವದ ವಿಭಾಗೀಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.
ಅರ್ಜಿ ಪರಿಶೀಲಿಸಿದ ನ್ಯಾಯಪೀಠ ‘ಮಲ ಹೋರುವ ಪದ್ಧತಿ ಇನ್ನೂ ಜೀವಂತವಾಗಿದೆಯೇ’ ಎಂದು ಅಚ್ಚರಿ ವ್ಯಕ್ತಪಡಿಸಿತು. ‘ಸುಪ್ರೀಂ ಕೋರ್ಟ್ ಈಗಾಗಲೇ ಇದಕ್ಕೆ ಪೂರ್ಣ ವಿರಾಮ ಹಾಕಿದೆಯಲ್ಲಾ’ ಎಂದೂ ಪ್ರಶ್ನಿಸಿತು. ಇದಕ್ಕೆ ಪ್ರತಿಕ್ರಿಯಿಸಿದ ಅರ್ಜಿದಾರರ ಪರ ಹೈಕೋರ್ಟ್ ವಕೀಲೆ ಮೈತ್ರೇಯಿ ಕೃಷ್ಣನ್ ‘ಈ ಪದ್ಧತಿಯನ್ನು ನಿಷೇಧಿಸಲಾಗಿದ್ದರೂ ಅದು ಮತ್ತೊಂದು ರೂಪದಲ್ಲಿ ಜಾರಿಯಲ್ಲಿದೆ. ಇದಕ್ಕೆ ಮನುಷ್ಯರನ್ನು ಬಳಸಿಕೊಳ್ಳುವ ಘಟನೆಗಳು ಮರುಕಳಿಸುತ್ತಲೇ ಇವೆ. ಇತ್ತೀಚೆಗೆ ಎಸ್‌ಟಿಪಿ ಘಟಕವೊಂದನ್ನು ಸ್ವಚ್ಛಗೊಳಿಸುವಾಗ ಇಬ್ಬರು ಪೌರ ಕಾರ್ಮಿಕರು ಮೃತಪಟ್ಟಿದ್ದಾರೆ’ ಎಂಬ ಅಂಶವನ್ನು ನ್ಯಾಯಪೀಠದ ಗಮನಕ್ಕೆ ತಂದರು.
‘ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳ (ಎಸ್‌ಟಿಪಿ)ಗಳ ನಿರ್ವಹಣೆಗೆ ನಿರ್ದಿಷ್ಠ ವ್ಯವಸ್ಥೆ ಉಸ್ತುವಾರಿ ಅಥವಾ ಮಾರ್ಗಸೂಚಿ ಇಲ್ಲದಂತಾಗಿದೆ. ಎಸ್‌ಟಿಪಿಗಳು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ವ್ಯಾಪ್ತಿಗೆ ಬರುತ್ತವೆ. ದುರ್ಘಟನೆಯಲ್ಲಿ ಪ್ರಾಣ ಹಾನಿ ಸಂಭವಿಸಿದರೆ ಅದು ತನಗೆ ಸಂಬಂಧವಿಲ್ಲ ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ಹೇಳುತ್ತದೆ. ಆದ್ದರಿಂದ ಎಸ್‌ಟಿಪಿಗಳ ನಿರ್ವಹಣೆ ಬಗ್ಗೆ ಸಮಗ್ರ ಪರಿಶೀಲನೆ ನಡೆಸಬೇಕು ಹಾಗೂ ಸೂಕ್ತ ಮಾರ್ಗಸೂಚಿಗಳನ್ನು ರೂಪಿಸಲು ಸರ್ಕಾರಕ್ಕೆ ನಿರ್ದೇಶಿಸಬೇಕು’ ಎಂದು ಮೈತ್ರೇಯಿ ನ್ಯಾಯಪೀಠಕ್ಕೆ ಮನವಿ ಮಾಡಿದರು. ಇದನ್ನು ಪರಿಗಣಿಸಿದ ನ್ಯಾಯಪೀಠ ‘ರಾಜ್ಯದ ಎಲ್ಲಾ ಕೈಗಾರಿಕಾ ಹಾಗೂ ಜನವಸತಿ ಪ್ರದೇಶಗಳ ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳ (ಎಸ್‌ಟಿಪಿ) ನಿರ್ವಹಣೆ ಬಗ್ಗೆ ನಾಲ್ಕು ವಾರಗಳಲ್ಲಿ ಸಮಗ್ರ ಮಾಹಿತಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿ’ ಎಂದು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿ ವಿಚಾರಣೆಯನ್ನು ಆಗಸ್ಟ್ 12ಕ್ಕೆ ಮುಂದೂಡಿತು.
ವಕೀಲಿ ವೃತ್ತಿ ನಡೆಸುವುದಕ್ಕಾಗಿ (ಸರ್ಟಿಫಿಕೇಷನ್ ಆಫ್ ಪ್ರ್ಯಾಕ್ಟೀಸ್–ಸಿಒಪಿ) ರಾಜ್ಯ ವಕೀಲರ ಪರಿಷತ್‌ನಿಂದ ನೀಡಲಾಗುವ ವೃತ್ತಿ ದೃಢೀಕರಣ ಪತ್ರ ಸಲ್ಲಿಸುವ ಪ್ರಕ್ರಿಯೆ ಈಗ ಯಾವ ಹಂತದಲ್ಲಿದೆ ಎಂಬ ಬಗ್ಗೆ ಮಾಹಿತಿ ಒದಗಿಸಿ’ ಎಂದು ರಾಜ್ಯ ವಕೀಲರ ಪರಿಷತ್ತಿಗೆ ಹೈಕೋರ್ಟ್ ನಿರ್ದೇಶಿಸಿದೆ. ಈ ಸಂಬಂಧ ಹೈಕೋರ್ಟ್ ವಕೀಲ ರಹಮತ್ ಉಲ್ಲಾ ಕೊತ್ವಾಲ್ ಸಲ್ಲಿಸಿರುವ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಎಸ್.ಸುನೀಲ್ ದತ್ ಯಾದವ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿ ಈ ಕುರಿತಂತೆ ಆದೇಶಿಸಿದೆ. ಕೋರಿಕೆ ಏನು?: ‘ಅವಧಿ ಮುಗಿದರೂ ಅಧಿಕಾರದಲ್ಲಿ ಮುಂದುವರಿದಿರುವ ಹಾಲಿ ರಾಜ್ಯ ವಕೀಲರ ಪರಿಷತ್ ಅನ್ನು ವಿಸರ್ಜಿಸಿ ತಕ್ಷಣ ವಕೀಲರ ಪರಿಷತ್‌ಗೆ ಚುನಾವಣೆ ನಡೆಸುವಂತೆ ಭಾರತೀಯ ವಕೀಲರ ಪರಿಷತ್‌ಗೆ ನಿರ್ದೇಶಿಸಬೇಕು’ ಎಂದು ಅರ್ಜಿದಾರರು ಕೋರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.