ADVERTISEMENT

ಲೈಂಗಿಕ ದೌರ್ಜನ್ಯ ಸಂತ್ರಸ್ತರಿಗೆ ಮಾದರಿ SOP: ಸರ್ಕಾರಕ್ಕೆ ಹೈಕೋರ್ಟ್‌ ನಿರ್ದೇಶನ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2025, 16:33 IST
Last Updated 10 ನವೆಂಬರ್ 2025, 16:33 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ‘ಲೈಂಗಿಕ ದೌರ್ಜನ್ಯಕ್ಕೆ ತುತ್ತಾಗುವ ಅಪ್ರಾಪ್ತ ವಯಸ್ಸಿನ ಸಂತ್ರಸ್ತ ಮಕ್ಕಳಿಗೆ ಪುನರ್ವಸತಿ ಕಲ್ಪಿಸುವ ಸಲುವಾಗಿ ಸಂಬಂಧಪಟ್ಟ ಪ್ರಾಧಿಕಾರಗಳು, ಎಲ್ಲ ಸರ್ಕಾರಿ ಸಂಸ್ಥೆಗಳು ಹಾಗೂ ಅಧಿಕಾರಿಗಳ ಮೇಲೆ ಜವಾಬ್ದಾರಿ ಹೊರಿಸುವಂತಹ ಮಾದರಿ ಪ್ರಮಾಣಿತ ಕಾರ್ಯ ವಿಧಾನ (ಎಸ್ಒಪಿ) ಜಾರಿಗೊಳಿಸಿ’ ಎಂದು ಹೈಕೋರ್ಟ್‌, ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.

ಅತ್ಯಾಚಾರಕ್ಕೆ ತುತ್ತಾಗಿ ಗರ್ಭ ಧರಿಸಿದ್ದ ಅಪ್ರಾಪ್ತ ವಯಸ್ಸಿನ ಬಾಲಕಿಯ ತಾಯಿ, ‘ಮಗಳ ಗರ್ಭಪಾತಕ್ಕೆ ಅನುಮತಿ ನೀಡಲು ವೈದ್ಯರಿಗೆ ನಿರ್ದೇಶಿಸಬೇಕು’ ಎಂದು ಕೋರಿದ್ದ ಅರ್ಜಿಯನ್ನು ಪುರಸ್ಕರಿಸಿರುವ ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಕುರಿತಂತೆ ಮಾರ್ಗಸೂಚಿಗಳನ್ನು ರೂಪಿಸಲು ಆದೇಶಿಸಿದೆ.

‘ಲೈಂಗಿಕ ಕಿರುಕುಳಕ್ಕೆ ಒಳಗಾದವರು, ಸಂತ್ರಸ್ತ ಮಕ್ಕಳ ರಕ್ಷಣೆ ಹಾಗೂ ಅವರಿಗೆ ಪುನರ್ವಸತಿ ಕಲ್ಪಿಸುವ ಸಂಬಂಧ ಹೈಕೋರ್ಟ್‌ ಈಗಾಗಲೇ ಹತ್ತಾರು ನಿರ್ದೇಶನಗಳನ್ನು ನೀಡಿದೆಯಾದರೂ, ಸರ್ಕಾರ ಈ ನಿರ್ದೇಶನಗಳನ್ನು ನಿರ್ಲಕ್ಷಿಸಿದೆ’ ಎಂದು ನ್ಯಾಯಪೀಠ ತೀವ್ರ ಅತೃಪ್ತಿ ವ್ಯಕ್ತಪಡಿಸಿದೆ.

ADVERTISEMENT

‘ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ, ರಾಜ್ಯ ಪೊಲೀಸ್​ ಮಹಾರ್ನಿದೇಶಕರೂ (ಐಜಿ–ಡಿಜಿಪಿ) ಸೇರಿದಂತೆ ಸಂಬಂಧಪಟ್ಟ ಎಲ್ಲ ಪಾಲುದಾರ ಸಂಸ್ಥೆಗಳು ಈ ಮಾದರಿ ಎಸ್​ಒಪಿ ರೂಪುಗೊಳ್ಳುವಲ್ಲಿ ಭಾಗಿಯಾಬೇಕು. ಈ ಮೂಲಕ ಸಂತ್ರಸ್ತರ ಎಲ್ಲ ಸಮಸ್ಯೆಗಳಿಗೆ ಪರಿಹಾರ ಲಭ್ಯವಾಗುವಂತೆ ಮಾಡಬೇಕು’ ಎಂದು ನ್ಯಾಯಪೀಠ ತಾಕೀತು ಮಾಡಿದೆ. ಅರ್ಜಿದಾರ ಬಾಲಕಿಯ ಪರ ಹೈಕೋರ್ಟ್ ವಕೀಲ ಕೆ.ಎಸ್‌.ಪೊನ್ನಪ್ಪ ವಾದ ಮಂಡಿಸಿದ್ದರು.

ನ್ಯಾಯಪೀಠದ ಮಾರ್ಗಸೂಚಿಯ ಪ್ರಮುಖ ಅಂಶಗಳು

* ಡಿಜಿಟಲ್ ಪೋಕ್ಸೊ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ) ಪೋರ್ಟಲ್ (ಡಿಪಿಪಿ): ಪ್ರಕರಣದ ಎಂಡ್ ಟು ಎಂಡ್ ನಿರ್ವಹಣೆ, ಏಜೆನ್ಸಿಗಳ ಅಂತರ್ ಸಂವಹನ, ಡೇಟಾ ಹಂಚಿಕೆ ಮತ್ತು ಅನುಸರಣೆಯ ಮೇಲ್ವಿಚಾರಣೆಗಾಗಿ ಕಡ್ಡಾಯಗೊಳಿಸಲಾದ ಸುರಕ್ಷಿತ, ಸಂಯೋಜಿತ, ಕ್ಲೌಡ್-ಆಧಾರಿತ ಸಾಫ್ಟ್‌ವೇರ್ ಪ್ಲಾಟ್‌ ಫಾರ್ಮ್ ರೂಪಿಸಬೇಕು.

* ದೌರ್ಜನ್ಯಕ್ಕೆ ತುತ್ತಾದ ಸಂತ್ರಸ್ತರಿಗೆ ತರಬೇತಿ ಪಡೆದ ಮಹಿಳಾ ವೈದ್ಯಕೀಯ ಅಧಿಕಾರಿಗಳು, ದಾದಿಯರು ಮತ್ತು ಸಲಹೆಗಾರರಿಂದ ಗೊತ್ತುಪಡಿಸಿದ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಸ್ಥಾಪಿಸಲಾದ ಸಮರ್ಪಿತ, 24/7 ಘಟಕಗಳಲ್ಲಿ ತಕ್ಷಣದ ಹಾಗೂ ಸಮಗ್ರ ವೈದ್ಯಕೀಯ, ಕಾನೂನಾತ್ಮಕ ಮತ್ತು ಮಾನಸಿಕ ಆರೈಕೆ ಒದಗಿಸಬೇಕು.

* ಅಪರಾಧ ವರದಿಯಾದ ಏಳು ದಿನಗಳಲ್ಲಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದಿಂದ ನಿಯೋಜಿಸಲಾದ ಮನಃಶ್ಶಾಸ್ತ್ರಜ್ಞ ಅಥವಾ ಕ್ಲಿನಿಕಲ್ ಮನೋವೈದ್ಯಕೀಯ ಸಾಮಾಜಿಕ ಕಾರ್ಯಕರ್ತರು ಆಘಾತದ ಸಮಗ್ರ ಮೌಲ್ಯಮಾಪನ ನಡೆಸಬೇಕು. ಇದರ ಆಧಾರದಡಿ, ಮಾನಸಿಕ ಔಪಚಾರಿಕ ಬೆಂಬಲದ ಯೋಜನೆಯನ್ನು (ಪಿಎಸ್‌ಪಿ) ಸಿದ್ಧಪಡಿಸಬೇಕು.

* ಶಾಲಾ ಪರಿಸರದಲ್ಲಿ ದೌರ್ಜನ್ಯ ನಡೆದಿದ್ದರೆ, ಮಗುವಿನ ಸುರಕ್ಷತೆಯ ಮತ್ತು ಯೋಗಕ್ಷೇಮದ ದೃಷ್ಟಿಯಿಂದ ಶಾಲೆಯನ್ನು ಬದಲಾಯಿಸುವ ಅಗತ್ಯವಿದ್ದರೆ; ಮಗುವನ್ನು ಕಳಂಕದಿಂದ ರಕ್ಷಿಸಲು ವಿವೇಚನಾಯುಕ್ತ ನಡೆಯ ಮೂಲಕ ಸಾರ್ವಜನಿಕವಾಗಿ ಯಾವುದೇ ಕಾರಣಗಳನ್ನು ಬಹಿರಂಗಪಡಿಸದೆ ಅಂತಹ ವರ್ಗಾವಣೆಯನ್ನು ಸುಗಮಗೊಳಿಸಬೇಕು.

* ಅಪ್ರಾಪ್ತ ವಯಸ್ಸಿನ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆದ ತಕ್ಷಣ ಮಕ್ಕಳ ಕಲ್ಯಾಣ ಸಮಿತಿಯು ಸ್ವಯಂಚಾಲಿತವಾಗಿ ರಕ್ಷಣೆಗೆ ಮುಂದಾಗಬೇಕು. ಬಾಲ ನ್ಯಾಯ ಕಾಯ್ಡೆಯ ಕಲಂ 2(14)ರ ಅಡಿಯಲ್ಲಿ ಲೈಂಗಿಕ ಅಪರಾಧಗಳಲ್ಲಿ ಸಂತ್ರಸ್ತರಾದ ಪ್ರತಿಯೊಬ್ಬರನ್ನೂ ಆರೈಕೆ ಮಾಡುವ ಮತ್ತು ರಕ್ಷಿಸುವ ಅಗತ್ಯವಿದೆ ಎಂಬುದಾಗಿ ಪರಿಗಣಿಸಬೇಕು.

* ಅಪ್ರಾಪ್ತ ವಯಸ್ಸಿನ ಸಂತ್ರಸ್ತರನ್ನು ಪ್ರತಿಯೊಂದು ಹಂತದಲ್ಲಿಯೂ ಅವರ ಹೆಸರನ್ನು ಗುರುತಿಸುವುದರ ಬದಲಿಗೆ ಆಲ್ಫಾ ನ್ಯೂಮರಿಕ್ (ಅಕ್ಷರ-ಸಂಖ್ಯೆ) ಕೋಡ್​ಗಳನ್ನು ಬಳಸಿ ಸಂತ್ರಸ್ತರ ಗುರುತು ಗೊತ್ತಾಗದಂತೆ ನೋಡಿಕೊಳ್ಳಬೇಕು. ದಾಖಲೆಗಳು, ಸಂದೇಶಗಳು, ಆದೇಶಗಳು ಹಾಗೂ ತೀರ್ಪುಗಳಲ್ಲಿ ಸಂತ್ರಸ್ತರ ಹೆಸರಿಗೆ ಬದಲಾಗಿ ಈ ಸಂಖ್ಯೆಯ ಮೂಲಕ ಹೆಸರನ್ನು; ಸಂಖ್ಯೆಗಳಲ್ಲಿ ಗುರುತಿಸುವ (ಪಿಐಡಿ) ಕ್ರಮ ಜಾರಿಗೆ ಬರಬೇಕು.

* ಪೋಕ್ಸೊ ಕಲಂ 4(7)ರ ಪ್ರಕಾರ ತನಿಖೆ ಮತ್ತು ವಿಚಾರಣಾ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೂ ಸಂತ್ರಸ್ತ ಮಗುವಿನ ಮಾಹಿತಿ, ಆರೈಕೆ ಮತ್ತು ಭಾವನಾತ್ಮಕ ಹಾಗೂ ಪ್ರಾಯೋಗಿಕ ಸಹಾಯ ನೀಡಲು ಮಕ್ಕಳ ಕಲ್ಯಾಣ ಸಮಿತಿಯಿಂದ ಒಬ್ಬ ಅಧಿಕಾರಿಯನ್ನು ನಿಯೋಜಿಸಬೇಕು.

* ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಸಂತ್ರಸ್ತ ಮಕ್ಕಳಿಗಾಗಿ ಈಗಾಗಲೇ ಜಾರಿಯಲ್ಲಿರುವ ನಿಯಮಗಳು ಅಥವಾ ಯೋಜನೆಗಳು ಯಾವುದೇ ಸಂದರ್ಭಗಳಲ್ಲಿ ಅವರಿಗೆ ಹೆಚ್ಚಿನ ರಕ್ಷಣೆ ಮತ್ತು ಪ್ರಯೋಜನ ನೀಡುವಂತೆ ಈ ಮಾದರಿ ಎಸ್‌ಒಪಿ ರೂಪುಗೊಳ್ಳಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.