ADVERTISEMENT

ಲಂಚ ಪಡೆದ ಆರೋಪ: ಉಪ ತಹಶೀಲ್ದಾರ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ

​ಪ್ರಜಾವಾಣಿ ವಾರ್ತೆ
Published 18 ಜುಲೈ 2022, 18:46 IST
Last Updated 18 ಜುಲೈ 2022, 18:46 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ಕಂದಾಯ ವ್ಯಾಜ್ಯವೊಂದರಲ್ಲಿ ಅನುಕೂಲಕರ ಆದೇಶ ನೀಡಲು₹ 5 ಲಕ್ಷ ಲಂಚ ಪಡೆದ ಆರೋಪಕ್ಕೆ ಸಂಬಂಧಿಸಿದಂತೆ ಬೆಂಗಳೂರು ನಗರ ಜಿಲ್ಲಾಧಿಕಾರಿ ಕಚೇರಿಯ ಉಪ ತಹಶೀಲ್ದಾರ್ ಪಿ.ಎಸ್.‌ ಮಹೇಶ್ ಜಾಮೀನು ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಇದೇ 21ಕ್ಕೆ ಮುಂದೂಡಿದೆ.

ಈ ಕುರಿತ ಅರ್ಜಿಯು, ನ್ಯಾಯಮೂರ್ತಿ ಎಚ್.ಪಿ.ಸಂದೇಶ್ ಅವರಿದ್ದ ಏಕಸದಸ್ಯ ನ್ಯಾಯಪೀಠದ ಮುಂದೆ ಸೋಮವಾರ ವಿಚಾರಣೆಗೆ ನಿಗದಿಯಾಗಿತ್ತು.

ವಿಚಾರಣೆ ವೇಳೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಪರ ವಕೀಲ ಪಿ.ಎನ್. ಮನಮೋಹನ್, 'ಎಸಿಬಿ ಮುಖ್ಯಸ್ಥ ಎಡಿಜಿಪಿ ಸೀಮಾಂತ ಕುಮಾರ್ ಸಿಂಗ್ ಅವರ ಸೇವಾ ದಾಖಲೆ ಮತ್ತು ವಿಚಾರಣಾ ಕೋರ್ಟ್‌ನಲ್ಲಿ ಎಸಿಬಿ ದಾಖಲಿಸಿರುವ ಬಿ ರಿಪೋರ್ಟ್‌ ಮಾಹಿತಿ ಸಲ್ಲಿಸುವಂತೆ ತಾವು ಇದೇ 7ರಂದು ನೀಡಿದ ಆದೇಶಕ್ಕೆ ಸುಪ್ರೀಂ ಕೊರ್ಟ್ ಸೋಮವಾರ ಬೆಳಿಗ್ಗೆ ತಡೆ ನೀಡಿದೆ. ಆದರೆ, ಮಹೇಶ್ ಜಾಮೀನು ಅರ್ಜಿ ವಿಚಾರಣೆ ಮುಂದುವರಿಸಬಹುದು ಎಂದು ತಿಳಿಸಿದೆ.

ADVERTISEMENT

ಆದೇಶದ ಪ್ರತಿ ಇನ್ನೂ ಲಭ್ಯವಾಗಿಲ್ಲ. ಹಾಗಾಗಿ, ಆದೇಶದಲ್ಲಿ ಏನಿದೆ ಎಂಬುದು ಸ್ಪಷ್ಟವಾಗಿಲ್ಲ. ಆದ್ದರಿಂದ, ವಿಚಾರಣೆ ಮುಂದೂಡಬೇಕು' ಎಂದು ಕೋರಿದರು. ಇದನ್ನು ಪರಿಗಣಿಸಿದ ನ್ಯಾಯಪೀಠ, ವಿಚಾರಣೆಯನ್ನು ಇದೇ 21ಕ್ಕೆ ಮುಂದೂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.