ADVERTISEMENT

‘ಶಾಲೆ ಮಾನ್ಯತೆ: ಪ್ರತಿವರ್ಷ ನವೀಕರಣ ಅನಗತ್ಯ’: ಹೈಕೋರ್ಟ್

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2022, 20:26 IST
Last Updated 9 ಮಾರ್ಚ್ 2022, 20:26 IST
   

ಬೆಂಗಳೂರು:‘ಅನುದಾನ ರಹಿತ ಖಾಸಗಿ ಶಾಲೆಗಳ ಮಾನ್ಯತೆಯನ್ನು ಪ್ರತಿ ವರ್ಷವೂ ನವೀಕರಿಸಲು ಅರ್ಜಿ ಸಲ್ಲಿಸುವ ಅಗತ್ಯವಿಲ್ಲ’ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.

ಈ ಸಂಬಂಧ, ‘ನೋಂದಾಯಿತ ಅನುದಾನ ರಹಿತ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಸಂಘ‘ದ (ರುಪ್ಸಾ) ಅಧ್ಯಕ್ಷ ಲೋಕೇಶ್ವರಪ್ಪ ಹಾಗೂ ರಾಜ್ಯದ ಇತರೆ ಐದು ಶಿಕ್ಷಣ ಸಂಸ್ಥೆಗಳು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪಿ. ಕೃಷ್ಣ ಭಟ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಕುರಿತಂತೆ ತೀರ್ಪು ನೀಡಿದ್ದು, ‘ಅರ್ಜಿಯಲ್ಲಿ ಯಾವುದೇ ನಿರ್ದೇಶನ ನೀಡುವ ಅಗತ್ಯವಿಲ್ಲ’ ಎಂಬ ಅಭಿಪ್ರಾಯದೊಂದಿಗೆ ಅರ್ಜಿ ವಿಲೇವಾರಿ ಮಾಡಿದೆ.

‘ಕರ್ನಾಟಕ ಶಿಕ್ಷಣ ಕಾಯ್ದೆಯ-1983ರ ಕಲಂ 36ರ ಅಡಿ ಅಥವಾ ಕರ್ನಾಟಕ ಶೈಕ್ಷಣಿಕ ಶಿಕ್ಷಣ ಸಂಸ್ಥೆಗಳ (ನೋಂದಣಿ) ಅಧಿನಿಯಮ-1999ರ ಅಡಿಯಲ್ಲಾಗಲೀ ಪ್ರತಿ ವರ್ಷ ಶಾಲೆ ಮಾನ್ಯತೆ ನವೀಕರಿಸುವಂತೆ ಸೂಚಿಸುವ ಅಧಿಕಾರ ಸರ್ಕಾರಕ್ಕಿಲ್ಲ ಎಂದು ಘೋಷಿಸಬೇಕು. ಹತ್ತು ವರ್ಷಗಳಿಗೊಮ್ಮೆ ಮಾತ್ರವೇ ಮಾನ್ಯತೆ ನವೀಕರಣ ಪ್ರತಿಪಾದಿಸುವ ಶಿಕ್ಷಣ ಕಾಯ್ದೆ ನಿಯಮಗಳನ್ನು ಪಾಲಿಸುವಂತೆ ಸರ್ಕಾರ ಮತ್ತು ಶಿಕ್ಷಣ ಇಲಾಖೆಗೆ ನಿರ್ದೇಶಿಸಬೇಕು‘ ಎಂದು ಅರ್ಜಿದಾರರು ಕೋರಿದ್ದರು.

ADVERTISEMENT

ಅರ್ಜಿದಾರರ ಆರೋಪಗಳನ್ನು ಅಲ್ಲಗಳೆದಿದ್ದ ಸರ್ಕಾರ, ‘ವಿದ್ಯಾರ್ಥಿಗಳ ಸುರಕ್ಷತೆ ದೃಷ್ಟಿಯಿಂದ ಖಾಸಗಿ ಅನುದಾನಿತ ಹಾಗೂ ಅನುದಾನರಹಿತ ಆಡಳಿತ ಮಂಡಳಿಗಳು ಸುರಕ್ಷತಾ ಕ್ರಮ ಅನುಸರಿಸುವ ಕುರಿತಂತೆ ಮಾತ್ರವೇ ಇಂತಹ ಸುತ್ತೋಲೆ ಹೊರಡಿಸಿರುವುದಾಗಿ ತಿಳಿಸಿದೆ. ಮಾನ್ಯತೆ ಅವಧಿ ಕುರಿತಂತೆ ಯಾವುದೇ ವಿವಾದವಿಲ್ಲ. ಅರ್ಜಿದಾರರು ಸರ್ಕಾರದ ಸುತ್ತೋಲೆಯನ್ನು ತಪ್ಪಾಗಿ ಅರ್ಥೈಸಿಕೊಂಡು ರಿಟ್ ಅರ್ಜಿ ಸಲ್ಲಿಸಿದ್ದಾರೆ’ ಎಂದು ಆಕ್ಷೇಪಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.