ADVERTISEMENT

ಶರಣರ ಪೋಕ್ಸೊ ಪ್ರಕರಣ ದಿಕ್ಕು ತಪ್ಪದಿರಲಿ: ಹೈಕೋರ್ಟ್‌

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2023, 16:50 IST
Last Updated 4 ಅಕ್ಟೋಬರ್ 2023, 16:50 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ‘ಚಿತ್ರದುರ್ಗ ಮುರುಘಾ ಮಠದ ಪೀಠಾಧಿಪತಿ ಶಿವಮೂರ್ತಿ ಶರಣರ ವಿರುದ್ಧದ ಪೋಕ್ಸೊ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ) ಪ್ರಕರಣದಲ್ಲಿ ಮಠದ ಮಾಜಿ ಆಡಳಿತಾಧಿಕಾರಿ ಎಸ್.ಕೆ.ಬಸವರಾಜನ್‌ ಮತ್ತು ಅವರ ಪತ್ನಿ ಸೌಭಾಗ್ಯ ಬಸವರಾಜನ್‌ ವಿರುದ್ಧ ಪ್ರತಿ ದೂರು ದಾಖಲಿಸಿರುವುದರಿಂದ ಶರಣರ ವಿರುದ್ಧದ ಪೋಕ್ಸೊ ಪ್ರಕರಣದ ವಿಚಾರಣೆ ದಿಕ್ಕು ತಪ್ಪಲಿದೆಯಲ್ಲವೇ‘ ಎಂಬ ಕಳವಳ ವ್ಯಕ್ತಪಡಿಸಿರುವ ಹೈಕೋರ್ಟ್‌, ‘ಶರಣರ ವಿರುದ್ಧದ ಪ್ರಕರಣ ಸೆಷನ್ಸ್‌ ಕೋರ್ಟ್‌ನಲ್ಲಿ ವಿಚಾರಣೆ ಹಂತ ತಲುಪಿದ್ದು ಸತ್ಯ ಹೊರಬರಲಿ ಬಿಡಿ‘ ಎಂದು ಸರ್ಕಾರದ ಕಿವಿ ಹಿಂಡಿದೆ.

ತಮ್ಮ ವಿರುದ್ಧದ ಪ್ರಕರಣ ರದ್ದುಪಡಿಸುವಂತೆ ಕೋರಿ ಬಸವರಾಜನ್‌ ಮತ್ತು ಸೌಭಾಗ್ಯ ಬಸವರಾಜನ್‌ ಸಲ್ಲಿಸಿರುವ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಆರ್‌.ದೇವದಾಸ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಬಸವರಾಜನ್‌ ಮತ್ತು ಸೌಭಾಗ್ಯ ಪರ ಹಿರಿಯ ವಕೀಲ ಹಷ್ಮತ್‌ ಪಾಷ ವಾದ ಮಂಡಿಸಿ, ’ಬಸವಪ್ರಭು ಸ್ವಾಮೀಜಿ ಸಲ್ಲಿಸಿರುವ ಈ ದೂರಿನಲ್ಲಿ ಯಾವುದೇ ಹುರುಳಿಲ್ಲ. ಶಿವಮೂರ್ತಿ ಶರಣರ ವಿರುದ್ಧ ದಾಖಲಾಗಿರುವ ಬಾಲಕಿಯರ ಮೇಲಿನ ಅತ್ಯಾಚಾರದ ಆಪಾದನೆಗಳಿಗೆ ರಕ್ಷಣೆ ಪಡೆಯಲು ಇಂತಹ ಪ್ರತಿ ದೂರು ದಾಖಲಿಸಲಾಗಿದೆ‘ ಎಂದು ನ್ಯಾಯಪೀಠಕ್ಕೆ ಮನವರಿಕೆ ಮಾಡಿಕೊಟ್ಟರು.

ADVERTISEMENT

ಈ ಕುರಿತು ರಾಜ್ಯ ಸರ್ಕಾರದ ಪರ ವಕೀಲರನ್ನು ಪ್ರಶ್ನಿಸಿದ ನ್ಯಾಯಪೀಠ, ’ಪ್ರತಿ ದೂರನ್ನು ಗಮನಿಸಿದರೆ ಈ ಪ್ರಕರಣದಲ್ಲಿನ ಸಾಕ್ಷಿಗಳ ರಕ್ಷಣೆ ಹೇಗೆ ತಾನೆ ಸಾಧ್ಯ‘ ಎಂದು ಪ್ರಶ್ನಿಸಿತು. ಪ್ರಕರಣದ ಕುರಿತಂತೆ ಜೆಎಂಎಫ್‌ಸಿ ಕೋರ್ಟ್‌ನಲ್ಲಿ ನಡೆಯುತ್ತಿರುವ ವಿಚಾರಣಾ ಪ್ರಕ್ರಿಯೆಗೆ ಈ ಹಿಂದೆಯೇ ತಡೆ ಆದೇಶ ನೀಡಿದೆ. ವಿಚಾರಣೆಯನ್ನು ಇದೇ 9ಕ್ಕೆ ಮುಂದೂಡಿತು. ‘ಮುಂದಿನ ದಿನಾಂಕದಂದು ಯಾವುದೇ ಕಾರಣಕ್ಕೂ ವಿಚಾರಣೆ ವಿಸ್ತರಣೆ ಕೋರಿಕೆಯನ್ನು ಪರಿಗಣಿಸಲಾಗುವುದಿಲ್ಲ‘ ಎಂದು ಪ್ರತಿವಾದಿಗಳಿಗೆ ಎಚ್ಚರಿಕೆ ನೀಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.